ಮನೆ ಮನೆಗೆ ತೆರಳಿ ಮತಯಾಚನೆ
ಆಲೂರು: ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಪರವಾಗಿ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಆರ್. ಕಾಂತರಾಜ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರ ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು. ನಂತರ ಮಾತನಾಡಿದ ಅವರು, ರಾಜಕೀಯ ಬದಲಾವಣೆಯ ಗಾಳಿ ದೇಶದಲ್ಲಿ ಬೀಸುತ್ತಿದ್ದು ಮೋದಿ ದೇಶದ ಪ್ರಧಾನಿಯಾಗುವ ಸ್ಪಷ್ಟ ಸೂಚನೆ ಕಾಣುತ್ತಿದೆ. ನಮ್ಮ ತಾಲೂಕಿನಲ್ಲಿಯೂ ಮೋದಿ ಅಲೆ ಇದೆ ಎಂದರು. ಮುಖಂಡರಾದ ಸಿ.ಟಿ. ಪಾಲಾಕ್ಷ, ಧರ್ಮಪ್ಪ, ಪೀತಾಂಬರ್, ನಾಗರಾಜ್, ಲೋಕೇಶ್, ಬಾಲಲೋಚನ ಹಾಗೂ ಇತರರು ಇದ್ದರು.
ದೇವೇಗೌಡರ ಪರ ಪ್ರಚಾರ
ಹಾಸನ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬುಧವಾರ ನಗರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪರ ಮತಯಾಚನೆ ಮಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಸಿ.ಆರ್. ಶಂಕರ್ ನೇತೃತ್ವದಲ್ಲಿ ಜೆಡಿಎಸ್ನ ನೂರಾರು ಮಹಿಳಾ ಕಾರ್ಯಕರ್ತೆಯರು ನಗರದ ಪ್ರಮುಖ ಬೀದಿಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಹೆಚ್ಚಿನ ಮತ ನೀಡುವ ಮೂಲಕ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು. ನಗರದ ಕೆ.ಆರ್. ಪುರಂ, ಶಂಕರ ಮಠ ರಸ್ತೆ, ವಿದ್ಯಾನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ಆಡಳಿತದಲ್ಲಿ ಜಾರಿಗೊಳಿಸಲ್ಪಟ್ಟ ಜನಪ್ರಿಯ ಕಾರ್ಯಕ್ರಮ ಬಗ್ಗೆ ಮತದಾರರಿಗೆ ತಿಳಿಸಿದರು.
ಕಡೆಗಣನೆ ಆರೋಪ
ಹಾಸನ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ವೀರಶೈವ ಸಮುದಾಯವನ್ನು ಕಡೆಗಣಿಸಿದ್ದು, ಸಮುದಾಯದ ಮತದಾರರು ಜಾಣ್ಮೆಯಿಂದ ಈ ಬಾರಿ ಮತದಾನ ಮಾಡುವಂತೆ ವಿಶ್ವವೀರಶೈವ ಲಿಂಗಾಯಿತ ಮಹಾ ವೇದಿಕೆಯ ಕಾರ್ಯಕರ್ತರು ಕರೆ ನೀಡಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವವೀರಶೈವ ಲಿಂಗಾಯಿತ ಮಹಾ ವೇದಿಕೆಯ ಅಧ್ಯಕ್ಷ ಶಿವಲಿಂಗ ಶಾಸ್ತ್ರಿ ಮಾತನಾಡಿ, ಜಿಲ್ಲೆಯಲ್ಲಿ 3.80 ಲಕ್ಷ ಮಂದಿ ವೀರಶೈವ ಮತದಾರರು ಇದ್ದಾರೆ. ಆದರೆ ಯಾವ ಪಕ್ಷದವರೂ ಈ ಜನಾಂಗವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದರು. ಈ ಸಂದರ್ಭದಲ್ಲಿ ನಿಲಕಂಠಪ್ಪ, ನಟರಾಜ್, ಕೀರ್ತಿಕುಮಾರ್ ಇದ್ದರು.
ಮಳೆಗೆ ಹಾನಿ
ಅರಕಲಗೂಡು: ತಾಲೂಕಿನ ವಿವಿದೆಢೆ ಬುಧವಾರದಂದು ಸಂಜೆ ಭಾರಿ ಮಳೆ ಮತ್ತು ಬಿರುಗಾಳಿ ಬೀಸಿ ಹಲವೆಡೆ ಹಾನಿ ಸಂಭವಿಸಿದೆ. ಅರಕಲಗೂಡು ಸಮೀಪದ ರಾಮೇನಹಳ್ಳಿಯಲ್ಲಿ 15 ತೆಂಗಿನ ಮರ,8 ತೇಗದ ಮರಗಳು ನೆಲಕ್ಕುರುಳಿವೆ. ಇದೇ ಗ್ರಾಮದ ಲೋಕೇಶ್ ಎಂಬುವವರ ಮನೆ ಮೇಲೆ ಮರಮೊಂದು ಬಿದ್ದು, ಮನೆಗೆ ಹಾನಿಯಾಗಿದೆ.
ಸಿಡಿಲಿಗೆ ಸಾವು
ಚನ್ನರಾಯಪಟ್ಟಣ: ತಾಲೂಕಿನ ಕುಂದೂರು ಗ್ರಾಮದಲ್ಲಿ ಸಂಜೆ ಸಿಡಿಲು ಹೊಡೆದ ಪರಿಣಾಮ ಶಿವಲಿಂಗೇಗೌಡ ಎಂಬವರ ಮನೆಯಲ್ಲಿ ಕಟ್ಟಿಹಾಕಿದ್ದ ಸೀಮೆ ಹಸುಗೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ನಡೆಯಿತು.
ಭಾವನಾ ಪ್ರಚಾರ
ಚನ್ನರಾಯಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಪರ ಚಲನಚಿತ್ರ ನಟಿ ಭಾವನ ಏ. 10ರಂದು ಪಟ್ಟಣದ ವಳಗೇರಮ್ಮ ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಮಂಜು ಪರ ರೋಡ್ ಶೋ ನಡೆಸಿ ಮತ ಯಾಚಿಸುವರು ಎಂದು ತಾಲೂಕು ಕಾಂಗ್ರೆಸ್ ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.
ಉಚಿತ ಶಿಬಿರ
ಚನ್ನರಾಯಪಟ್ಟಣ: ಮಕ್ಕಳಿಗೆ ಯೋಗಶಿಬಿರವನ್ನು ಪಟ್ಟಣದ ಕೋಟೆ ಶ್ರೀರಾಘವೇಂದ್ರ ಮಠದ ಶ್ರೀ ಗುರುರಾಯ ಧ್ಯಾನಮಂದಿರದಲ್ಲಿ ಏ.10ರಂದು ಬೆಳಗ್ಗೆ 7ರಿಂದ 8 ಘಂಟೆಯ ತನಕ ಯೋಗ ಗುರು ಚೇತನ್ ಗುರೂಜಿಯವರ ಯೋಗ ಆರೋಗ್ಯ, ಆಹಾರ ಕ್ರಮ, ಬದುಕಿನ ಸಂಸ್ಕತಿ, ದ್ಯಾನ, ಪ್ರಾಣಯಾಮ, ದೇಶಭಕ್ತಿ ಇತ್ಯಾದಿ ಜೀವನ ಕ್ರಮದ ಬಗ್ಗೆ ಹತ್ತುದಿನಗಳ ಕಾಲ ಉಚಿತ ಶಿಬಿರ ಏರ್ಪಡಿಸಲಾಗಿದೆ ಎಂದು ಆಯೋಜಕ ಗಜಾನನ ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ಶಿಕ್ಷಣ
ಹೊಳೆನರಸೀಪುರ: ಪಟ್ಟಣದ ಕೋಟೆ ಮುಖ್ಯ ರಸ್ತೆಯಲ್ಲಿರುವ ಜಿ- ಟೆಕ್ ಕಂಪ್ಯೂಟರ್ ತರಬೇತಿ ಸಂಸ್ಥೆಯಲ್ಲಿ ಭಾರತ ಸರ್ಕಾರ ಮತ್ತು ಎನ್ಎಸ್ಡಿಸಿ ಸಹಯೋಗದೊಂದಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುವುದು ಎಂದು ಜಿ- ಟೆಕ್ ತರಬೇತಿ ಸಂಸ್ಥೆಯ ಮುಖ್ಯಸ್ಥ ಎಂ.ಆರ್. ಲೋಕೇಶ್ ತಿಳಿಸಿದ್ದಾರೆ. ಈ ಅವಕಾಶಕ್ಕೆ ಆಯ್ಕೆಯಾಗಬಯಸುವ ವಿದ್ಯಾರ್ಥಿಗಳು ಪಿಯುಸಿ ಪಾಸಾಗಿರಬೇಕು. ನಿರುದ್ಯೋಗಿಗಳಾಗಿದ್ದು 35 ವರ್ಷದೊಳಗಿನವರಾಗಿರಬೇಕು. ಆಧಾರ್ ಸಂಖ್ಯೆಯನ್ನು ಹೊಂದಿರಬೇಕು. ಸೆಂಟ್ರಲ್ ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕು ಹಾಗೂ ನೋಂದಣಿ ಶುಲ್ಕವಾಗಿ ರು. 1200 ಪಾವತಿಸಬೇಕಿದೆ ಎಂದು ವಿವರ ನೀಡಿದ ಲೋಕೇಶ್, ಯಾವುದೇ ಕೋರ್ಸ್ಪ್ಡೆದರೂ ಒಂದು ತಿಂಗಳ ಬೆರಳಚ್ಚು, ಟೈಪಿಂಗ್ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದ ಅವರು ವಿವರಗಳಿಗೆ ತಾಲೂಕು ಜಿ- ಟೆಕ್ ತರಬೇತಿ ಸಂಸ್ಥೆಯ 8722325521 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
ಪ್ರವೇಶಾವಕಾಶ
ಹೊಳೆನರಸೀಪುರ: ತಾಲೂಕಿನ ದೊಡ್ಡಕಾಡನೂರಿನಲ್ಲಿರುವ ಜಗದ್ಗುರು ಶಿವರಾತ್ರೀಶ್ವರ ಕರ್ನಾಟಕ ಮುಕ್ತ ಶಾಲೆಯ ಕಲಿಕಾ ಕೇಂದ್ರದಲ್ಲಿ 7ನೇ ತರಗತಿ ಮೇಲ್ಪಟ್ಟು ಉತ್ತೀರ್ಣ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರವೇಶ ಪಡೆಯಲು ಅವಕಾಶವಿದ್ದು, ಇದೇ ನವೆಂಬರ್ನಲ್ಲಿ ನಡೆಯುವ ಪರೀಕ್ಷೆಗೆ ಈಗಾಗಲೇ ದಾಖಲಾತಿ ಪ್ರಾರಂಭಿಸಲಾಗಿದ್ದು ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಮಾಹಿತಿಗಾಗಿ 9740289817 ಮೊಬೈಲ್ಗೆ ಸಂಪರ್ಕಿಸಲು ಕೋರಿದ್ದಾರೆ.
ಮತದಾನ ಜಾಗೃತಿ
ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿ ನೌಕರರರು ಮತ್ತು ಪೌರಕಾರ್ಮಿಕರ ವತಿಯಿಂದ ಮತದಾನ ಜಾಗೃತಿ ಜಾಥಾವನ್ನು ನಡೆಸಲಾಯಿತು. ಮತದಾನ ಜಾಗೃತಿ ಜಾಥಾಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಬಾಬು ಚಾಲನೆ ನೀಡಿದರು. ಈ ವೇಳೆ ಸ್ವೀಪ್ ಸಮಿತಿ ಅಧಿಕಾರಿ ರಾಮಣ್ಣ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಣ್ಣ, ಪಟ್ಟಣ ಪಂಚಾಯಿತಿ ಎಂಜಿನಿಯರ್ ಕವಿತಾ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದರು.