ರಾಜಗೋಪುರ ಸ್ವಚ್ಛತೆಗೆ ಭಕ್ತರ ವಿರೋಧ
ಬೇಲೂರು: ಬೇಲೂರು ಶ್ರೀಚನ್ನಕೇಶವಸ್ವಾಮಿ ದೇವಾಲಯದ ರಾಜಗೋಪುರವನ್ನು ರಥೋತ್ಸವ ಹಾಗೂ ಜಾತ್ರೆ ವೇಳೆ ಸ್ವಚ್ಛತೆ ಮಾಡುತ್ತಿರುವುದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ.
ವಿಶ್ವ ವಿಖ್ಯಾತ ಬೇಲೂರು ಶ್ರೀಚನ್ನಕೇಶವಸ್ವಾಮಿ ದೇವಾಲಯ ಹೊಯ್ಸಳ ಕಾಲದಲ್ಲಿ ನಿರ್ಮಾಣವಾಗಿದ್ದು, ದೇವಾಲಯದ ಮುಂಭಾಗದಲ್ಲಿ ಬೃಹತ್ ರಾಜಗೋಪುರದ ನಿರ್ಮಾಣ ವಿಜಯನಗರ ಅರಸರು ಕಟ್ಟಿಸಿದ್ದಾರೆ ಎಂಬ ಐತಿಹ್ಯ ಇದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಬೇಲೂರು ಚನ್ನಕೇಶವಸ್ವಾಮಿ ದೇವಾಲಯದಲ್ಲಿ ದಿವ್ಯ ರಥೋತ್ಸವದ ಅಂಗವಾಗಿ ಸದ್ಯ ಜಾತ್ರ ಕಾರ್ಯ ಆರಂಭವಾಗಿದ್ದು, ನಾನಾ ದೇವರ ಉತ್ಸವಗಳು ದಿನನಿತ್ಯ ನಡೆಯುತ್ತಿವೆ.
ಇದೇ ತಿಂಗಳ 12ರಂದು ದಿವ್ಯ ರಥೋತ್ಸವ ಕೂಡ ನಡೆಯಲಿದೆ. ಆದರೆ, ದೇವಾಲಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜಾತ್ರೆ ನಡೆಯುವ ವೇಳೆಯಲ್ಲಿ ರಾಜಗೋಪುರ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿರುವುದು ಭಕ್ತರನ್ನು ಕೆರಳಿಸಿದೆ. ಜಾತ್ರ ವೇಳೆಗೆ ಕೆಲಸ ಮುಕ್ತಾಯ ಮಾಡಬೇಕು ಎಂಬ ಅರಿವು ಇಲ್ಲದ ಅಧಿಕಾರಿಗಳು ಜಾತ್ರೆ ಮಧ್ಯೆ ರಾಜಗೋಪುರದ ಶುಚಿಗೊಳಿಸುವುದು, ಬಣ್ಣ ಹಾಕುವುದು ಇನ್ನಿತರ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವೇಶದ್ವಾರದಲ್ಲಿ ಗೋಪುರಕ್ಕೆ ಕಟ್ಟರುವ ಕಬ್ಬಿಣದ ರಾಡುಗಳು ಗೋಪುರದ ತುಂಬಿ ಹರಡಿದ್ದು, ಇದು ರಾಜಗೋಪುರದ ವೈಭವವನ್ನು ಕುಂದಿಸಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.