ಒಂದೂವರೆ ವರ್ಷದೊಳಗೆ ಎತ್ತಿನ ಹೊಳೆ ಅನುಷ್ಠಾನ
ಅರಸೀಕೆರೆ: ಬಯಲುಸೀಮೆ ಪ್ರದೇಶವಾಗಿರುವ, ಬರಗಾಲ ಇರುವ ಈ ಕ್ಷೇತ್ರಕ್ಕೆ ಒಂದೂವರೆ ವರ್ಷದೊಳಗಾಗಿ ಎತ್ತಿನಹೊಳೆ ಯೋಜನೆ ಅನುಷ್ಠಾನ ಮಾಡಲಾಗುವುದು. ಆ ಮೂಲಕ ಜನರ ಜಲಸಂಕಷ್ಟ ನಿವಾರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಈ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದರೂ ಅವರ ಸಾಧನೆ ಶೂನ್ಯ. ತಮ್ಮ ಮಕ್ಕಳಿಗೆ ಅಧಿಕಾರ ಕೊಡಿಸುವುದಕ್ಕಾಗಿ ಹೋರಾಟ ಮಾಡುವ ಅವರಿಗೆ ಈ ಭಾಗದ ನೀರಿನ ಬವಣೆ ಏಕೆ ಅರ್ಥವಾಗಿಲ್ಲ ಎಂದು ಪ್ರಶ್ನಿಸಿದರು.
ತಾಲ್ಲೂಕಿನಲ್ಲಿ ಸಾವಿರ ಅಡಿ ಕೊರೆದರೂ ನೀರು ಬರುತ್ತಿಲ್ಲ. ಅದಕ್ಕಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದ್ದು ಎತ್ತಿನ ಹೊಳೆ ಯೋಜನೆ ಮೂಲಕ ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಕೇಂದ್ರದ ಕೆಲವು ಸ್ಥಳಗಳಿಗೆ ಒಟ್ಟು 48 ವಿಧಾನಸಭಾ ಕ್ಷೇತ್ರಗಳಿಗೆ ಕುಡಿಯುವ ನೀರಿನೊಂದಿಗೆ ಕೆರೆ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದರು.
ಯೋಜನೆ ಅನುಷ್ಠಾನಕ್ಕಾಗಿ 12,900 ಕೋಟಿ ಮೀಸಲಿಟ್ಟಿದೆ. ಎತ್ತಿನಹೊಳೆ ಯೋಜನೆ ಮೂಲಕ 24 ಟಿಎಂಸಿ ನೀರನ್ನು ಪಶ್ಚಿಮಾಭಿಮುಖವಾಗಿ ಹರಿಯುವ ನೀರನ್ನು ತೆಗೆದುಕೊಂಡು ನಾಲೆ ಮೂಲಕ ಬಯಲುಸೀಮೆಗೆ ಹರಿಸಲು ರೂಪುರೇಷೆ ಸಿದ್ಧಗೊಂಡಿದೆ. ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಅನೇಕರು ಯೋಜನೆಗೆ ಅಪಸ್ವರ ತೆಗೆದಿದ್ದಾರೆ ಎಂದು ದೂರಿದರು.