ಮತ ಜಾಗೃತಿ ಕುರಿತು ಜಾಥಾ
ಹಾಸನ: ಮತದಾರರ ಜಾಗೃತಿ ಅಭಿಯಾನದಡಿ ನಗರಸಭೆ ಹಾಸನ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಾನಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಗರದಾದ್ಯಂತ ಬೃಹತ್ ಜಾಥಾ ನಡೆಸಲಾಯಿತು.
ನಗರಸಭೆ ಆವರಣದಲ್ಲಿ ತಹಸೀಲ್ದಾರ್ ಮಂಜುನಾಥ್ ಮತ್ತು ನಗರಸಭೆ ಆಯುಕ್ತ ಕೃಷ್ಣಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಸರ್ಜನ್ ಡಾ. ಶಂಕರ್, ಸ್ವೀಪ್ ನೋಡಲ್ ಅಧಿಕಾರಿಯಾಗಿರುವ ವಾರ್ತಾಧಿಕಾರಿ ವಿನೋದ್ ಚಂದ್ರ, ತಾಲೂಕು ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಶಿವಣ್ಣ, ಸಮಾಜ ಸೇವಕ ಡಾ. ಗುರುರಾಜ ಹೆಬ್ಬಾರ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಆರೋಗ್ಯ ಶಿಕ್ಷಣ ಅಧಿಕಾರಿ ಶಬ್ಬೀರ್, ಕ್ಷೇತ್ರ ಪ್ರಚಾರ ಇಲಾಖೆಯ ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿವಿಧ ಪ್ರದರ್ಶನ: ಕೋಲೆ ಬಸವ, ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ನಾಸಿಕ್ ಡೋಲ್, ವಾರ್ತಾ ಇಲಾಖೆ ಕಲಾ ತಂಡ, ಸ್ಥಬ್ಧ ಚಿತ್ರಗಳೊಂದಿಗೆ ನಗರಸಭೆ ಅಧಿಕಾರಿ, ಸಿಬ್ಬಂದಿ, ನಾನಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಸಾವಿರಾರು ಸಂಖ್ಯೆಯಲ್ಲಿ ಇದ್ದರು.
ನಗರದ ಬಿ.ಎಂ. ರಸ್ತೆ, ಶ್ರೀನಗರ, ವಲ್ಲಭಾಯಿರಸ್ತೆ, ಅಡ್ಲಿಮನೆ ರಸ್ತೆ, ಹೊಸಲೈನ್ ರಸ್ತೆ, ಹೇಮಾವತಿನಗರ, ಆರ್.ಸಿ. ರಸ್ತೆ, ಸಾಲಗಾಮೆ ರಸ್ತೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಸಂಚರಿಸಿದ ಮೆರವಣಿಗೆ ಮತದಾನದ ಮಹತ್ವದ ಬಗ್ಗೆ ಶ್ರಮಿಸಿತು.