ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೈಭವದ ಹೆತ್ತೂರು ದೇವೀರಮ್ಮ ಜಾತ್ರೆ

Srinivasa Murthy VN
Updated On : 10 Apr 2014, 10:22 am

ಸಕಲೇಶಪುರ: ಇತಿಹಾಸ ಪ್ರಸಿದ್ಧ ಹೆತ್ತೂರು ದೇವಿರಮ್ಮ ಸುಗ್ಗಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಯುಗಾದಿ ಹಬ್ಬದ ಮರು ದಿನದಿಂದ ಆರಂಭವಾಗಿ 8 ದಿನಗಳ ಕಾಲ ನೆಡೆಯುವ ಸುಗ್ಗಿಯಲ್ಲಿ ಕಾಡುವಡೆಯ ಸುಗ್ಗಿ, ಹೂನ್ನಾರು ಸುಗ್ಗಿ, ಹೆಣ್ಣುಮಕ್ಕಳ ಸುಗ್ಗಿ, ಬಿಲ್ಲು ಸುಗ್ಗಿಯ ನಡೆದ ನಂತರ ಸುಗ್ಗಿ ಮಹೋತ್ಸವದ ಅಂತಿಮ ದಿನ ದೊಡ್ಡಸುಗ್ಗಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಮುಂಜಾನೆಯಿಂದಲೇ ನಾನಾ ಪೂಜಾ ಕಾರ್ಯಕ್ರಮಗಳು ನಡೆದ ನಂತರ ದೇವಿರಮ್ಮನ ವಿಗ್ರಹವನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ಗ್ರಾಮದ ಕೆರೆಯಲ್ಲಿ ಮೂಗುತಿ ಹುಡುಕುವ ಸಂಪ್ರದಾಯ ನಡೆದ ನಂತರ ಮಡೆ ನಡೆಸುವ ಕಾರ್ಯಕ್ರಮದೊಂದಿಗೆ ಸುಗ್ಗಿಮಹೋತ್ಸವಕ್ಕೆ ತೆರೆ ಎಳೆಯಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಮಜ್ಜಿಗೆ ಪಾನಕ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಸುಗ್ಗಿ ಮಹೋತ್ಸವ ಕಾರ್ಯಕ್ರಮವನ್ನು ದೇವಸ್ಥಾನ ಮಂಡಳಿಯ ಧರಣೇಂದ್ರ ವಹಿಸಿದ್ದರು.

ಪದವಿ, ಸ್ನಾತಕೋತ್ತರ ಪದವಿ ಪ್ರದಾನ
ಹಾಸನ: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಬಿ.ಎ.ಎಂ.ಎಸ್ ಪದವಿ ಹಾಗೂ ಎಂ.ಡಿ ಮತ್ತು ಎಂ.ಎಸ್ ಸ್ವಾತಕೋತ್ತರ ಪದವಿ ಪೂರೈಸಿದ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವು ಇತ್ತೀಚೆಗೆ ಶಾಸ್ತ್ರೋಕ್ತವಾಗಿ ಹಾಗೂ ಸಡಗರ ಸಂಭ್ರಮದಿಂದ ಜರುಗಿತು. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ. ಎಸ್. ಸಚ್ಚಿದಾನಂದ, ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದ ಡಾ. ಜಯಕೃಷ್ಣ ಎಚ್. ಜೆ, ಶ್ರೀ ಕಾಲಭೈರವೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಕಿರಣ್ ಗೌಡ, ಶ್ರೀ ಸುಶ್ರುತ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅಜಯ್ ಎಂ.ಆರ್. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗುರುವಂದನೆ ಸ್ವೀಕರಿಸಿದ ಡಾ. ಸಚ್ಚಿದಾನಂದ ಮಾತನಾಡಿ, ಯುವ ವೈದ್ಯಕೀಯ ಪದವೀಧರರು ಅವಕಾಶಕ್ಕೆ ಹುಡುಕಾಡದೆ ತಾವೇ ತಮ್ಮ ವೃತ್ತಿಕಾರ್ಯಕ್ಕೆ ಅವಕಾಶಗಳನ್ನು ನಿರ್ಮಿಸಿಕೊಳ್ಳಬೇಕು ಎಂದರು. ಡಾ. ಜಯಕೃಷ್ಣ ಎಚ್.ಜೆ. ಮಾತನಾಡಿ, ವೈದ್ಯಕೀಯ ಪದವಿ ಪಡೆದ ಯುವ ವೈದ್ಯಪದವೀಧರರಲ್ಲಿ ಶೇ. 18ರಷ್ಟು ಮಾತ್ರ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಬಯಸುತ್ತಾರೆ. ಆದ್ದರಿಂದ ಹೆಚ್ಚು ಸಂಖ್ಯೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಕಾರ್ಯೋನ್ಮುಖರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮಾ ಮಾತನಾಡಿದರು. ಪುಷ್ಯಾಂಬುಜ ಮತ್ತು  ವೃಂದದವರು ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಈ ಪದವಿ ಪ್ರದಾನ ಸಮಾರಂಭದಲ್ಲಿ 78 ಬಿ.ಎ.ಎಂ.ಎಸ್ ಪದವೀಧರರು 50 ಸ್ನಾತಕೋತ್ತರ ಪದವೀಧರ ವೈದ್ಯರು ತಮ್ಮ ಪದವಿ ಪ್ರಮಾಣಪತ್ರ ಸ್ವೀಕರಿಸಿದರು.

ಸಕಲೇಶಪುರ: ಬಿಎಸ್ಪಿ ಅಭ್ಯರ್ಥಿ ಪ್ರಚಾರ
ಸಕಲೇಶಪುರ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುರುವಾರ ಪಾದಯಾತ್ರೆ ನಡೆಸುವ ಮೂಲಕ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಎ.ಪಿ. ಅಹಮ್ಮದ್ ಮತಯಾಚಿಸಿದರು. ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಎ.ಕೆ ಹಸೈನರ್, ಮುಖಂಡ ಲಕ್ಷ್ಮಣ್ ಕೀರ್ತಿ ಮುಂತಾದವರಿದ್ದರು.

ವಾಯು ಸೇನಾ ಪಡೆ ರ್ಯಾಲಿ
ಹಾಸನ: ಭಾರತೀಯ ವಾಯು ಸೇನಾ ಪಡೆಯಲ್ಲಿನ ಹುದ್ದೆಗಳ ಭರ್ತಿಗಾಗಿ ರ್ಯಾಲಿಯನ್ನು ಆಯೋಜಿಸಲಾಗಿದೆ. ಏರ್‌ಮನ್ ಗ್ರೂಪ್ ಹುದ್ದೆಗಳಿಗಾಗಿ ಏ. 20ರಿಂದ ಏ. 26ರವರೆಗೆ ಬೆಳಗ್ಗೆ  6ಕ್ಕೆ, 7 ಏರ್‌ಮನ್ಸ್ ಕಲೆಕ್ಷನ್ ಸೆಂಟರ್, 1 ಕಬ್ಬನ್ ರಸ್ತೆ, ಬೆಂಗಳೂರಿನಲ್ಲಿ ಆಯೋಜಿಸಿದ್ದಾರೆ. ಅಭ್ಯರ್ಥಿಗಳು 1994ರ ಆ. 1ರಿಂದ 1997ರ ನ. 30ರೊಳಗೆ ಹುಟ್ಟಿದವರಾಗಿದ್ದು, ದ್ವಿತೀಯ ಪಿಯುಸಿಯಲ್ಲಿ ಕನಿಷ್ಟ ಶೇಕಡ 50 ಅಂಕಗಳನ್ನು ಪಡೆದು ಪಾಸಾಗಿರಬೇಕು  ಎಲ್ಲಾ ಆಸಕ್ತ ಯುವಕರು ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25592199 ಅಥವಾ ವೆಬ್ ವಿಳಾಸ www.indianairforce.nic.in  ಅನ್ನು ಸಂಪರ್ಕಿಸಬಹುದು.

ಅಂಬೇಡ್ಕರ್ ದಿನಾಚರಣೆ
ಹಾಸನ: ಡಾ.ಬಿ.ಆರ್. ಅಂಬೇಡ್ಕರ್ ಅವರ 123ನೇ ಜಯಂತಿ ಪ್ರಯುಕ್ತ ಏ. 14ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ಅಂಬೇಡ್ಕರ್ ಭವನದಲ್ಲಿ ಇರುವ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವಪೂರ್ವಕವಾಗಿ ಜನ್ಮ ದಿನಾಚರಣೆ ಆಚರಿಸಲಾಗುವುದು. ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಫಲಿತಾಂಶ ಪ್ರಕಟ
ಹಾಸನ: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳ ಮೊರಾಜಿಂ ದೇಸಾಯಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳ 6ನೇ ತರಗತಿಗೆ 2014-15ನೇ ಸಾಲಿಗೆ ಪ್ರವೇಶಕ್ಕಾಗಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿ, ಹಾಸನ, ಜಿಲ್ಲಾ ಅಧಿಕಾರಿಗಳು, ಬಿ.ಸಿ.ಎಂ.ಇಲಾಖೆ, ಹಾಸನ, ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮತ್ತು ಎಲ್ಲಾ ತಾಲೂಕುಗಳ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಗಳಲ್ಲಿ ಮತ್ತು ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಪ್ರಕಟಿಸಲಾಗಿದೆ ಎಂದು  ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

12ರಂದು ಜಾಥಾ
ಹಾಸನ: ವ್ಯವಸ್ಥಿತವಾದ ಮತದಾನದ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ ಕಾರ್ಯಕ್ರಮದಡಿ ಹಾಸನ ಜಿಲ್ಲೆಯಲ್ಲಿ ಮತದಾರರ ಜನಜಾಗೃತಿ ಮೂಡಿಸಲು ಏ. 12ರಂದು ಬೆಳಗ್ಗೆ 10.30ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಿಂದ ವಿಶ್ವೇಶ್ವರಯ್ಯ ಬಡಾವಣೆ ಮತ್ತು ಜಯನಗರ ಬಡಾವಣೆವರೆಗೆ ಜನಜಾಗೃ ಜಾಥಾ ಹಮ್ಮಿಕೊಳ್ಳಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಸರ್ಕಾರಿ ಕಲಾ ಕಾಲೇಜು, ಸರ್ಕಾರಿ ವಿಜ್ಞಾನ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಗೃಹ ವಿಜ್ಞಾನ ಕಾಲೇಜು, ಹಾಗೂ ಸರ್ಕಾರಿ ಕಾನೂನು ಕಾಲೇಜುಗಳ  ವತಿಯಿಂದ ಜನಜಾಗೃತಿ ಜಾಥಾ (ರ್ಯಾಲಿ) ನಡೆಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ ತಿಳಿಸಿದ್ದಾರೆ. ಏ. 12ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗಿ ವಿಶ್ವೇಶ್ವರಯ್ಯ ಬಡಾವಣೆ ಮತ್ತು ಜಯನಗರ ಬಡಾವಣೆಯಲ್ಲಿ ಮತದಾರರ ಜಾಗೃತಿ ಮೂಡಿಸುವ ಜಾಥಾವನ್ನು ಜಿಲ್ಲಾಧಿಕಾರಿಯವರು ಮತ್ತು ಜಿಲ್ಲಾ ಪಂಚಾಯ್ತಿ  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದ್ಘಾಟಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement