ಸಂಸ್ಕ ೃತಿ ವೈಶಾಲ್ಯ ತಂದುಕೊಡುವ ಬ್ಲಾಗಿಂಗ್: ನಾರಾಯಣ ಪ್ರಸಾದ್
ಹಾಸನ: ಬ್ಲಾಗಿಂಗ್ ಎಂಬುದು ಎಲ್ಲೆ ಮೀರಿದ ಜ್ಞಾನದ ಜೊತೆಗೆ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ ಇತ್ಯಾದಿಗಳಿಗೆ ವೈಶಾಲ್ಯತೆಯನ್ನು ತೆರೆದಿಟ್ಟು, ಪ್ರತಿದಿನ ಸಾವಿರಾರು ಓದುಗ, ನೋಡುಗರ ದರ್ಶನ ಮಾಡಿಸುವ ತಂತ್ರಜ್ಞಾನವಾಗಿದೆ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಪ್ರೊ. ನಾರಾಯಣ ಪ್ರಸಾದ್ ಹೇಳಿದರು.
ನಗರದ ಶಾಂತಿನಗರದಲ್ಲಿ ವೇದಶ್ರೀ ರಾಜ್ ಅವರ ಪ್ರಾಯೋಜತ್ವದಡಿಯಲ್ಲಿ ಭಾನುವಾರ ನಡೆದ 205 ನೇ ಮನೆ ಮನೆ ಕವಿಗೋಷ್ಠಿಯಲ್ಲಿ ಅವರು ಸಾಹಿತ್ಯ ಪ್ರಸಾರದಲ್ಲಿ ಆಧುನಿಕ ತಂತ್ರಜ್ಞಾನವಾದ ಬ್ಲಾಗಿಂಗ್ ಪಾತ್ರ ಎಂಬ ವಿಷಯದಡಿಯಲ್ಲಿ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನೀಡಿದರು.
ಆಲೋಚಿಸಬೇಕು: ಒಂದು ಪುಸ್ತಕ ಸಾವಿರ ಪ್ರತಿಗಳು ಅಚ್ಚಾದರೆ ಸಾವಿರ ಜನಗಳು ಒಂದು ಎಲ್ಲೆಯೊಳಗೆ ಓದಲು ಮಾತ್ರ ಸಾಧ್ಯ. ಆದರೆ, ಅದೇ ಪುಸ್ತಕವನ್ನು ಗಣಕೀಕೃತಗೊಳಿಸಿ ಬ್ಲಾಗ್ಗೆ ಹಾಕಿದರೆ ಶಾಶ್ವತವಾಗಿ ಉಳಿಯುವುದರ ಜೊತೆಗೆ ಪ್ರಪಂಚದಾದ್ಯಂತ ಸಹಸ್ರಾರು ಕನ್ನಡಿಗರು ಏಕಕಾಲಕ್ಕೆ ಓದಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಲೇಖಕರು ಬ್ಲಾಗಿಂಗ್ ಬಗ್ಗೆ ಗಂಭಿರವಾಗಿ ಆಲೋಚಿಸಬೇಕಾಗಿದೆ ಎಂದರು.
ಪ್ರಾತ್ಯಕ್ಷಿಕೆ: 1990ರಿಂದ ಈಚೆಗೆ ಬಂದ ಬ್ಲಾಗಿಂಗ್ ಹಾಗೂ ಅಂತರ್ಜಾಲ ವ್ಯವಸ್ಥೆ ಕ್ಷಿಪ್ರ ಗತಿಯಲ್ಲಿ ಬೆಳೆದು ಬಂದದ್ದು ಅಚ್ಚರಿ. ಈಗಾಗಲೇ ಪ್ರಪಂಚದಾದ್ಯಂತ 2014ರ ಫೆಬ್ರವರಿ ವೇಳೆಗೆ 250 ಮಿಲಿಯನ್ ಬ್ಲಾಗ್ಗಳು ಕಾರ್ಯ ನಿರ್ವಹಿಸುತ್ತಿವೆ ಎಂಬ ಮಾಹಿತಿಯಿದೆ. ಆದರೆ, ಕನ್ನಡದಲ್ಲಿ ಇನ್ನೂ 300ರಿಂದ 400 ಬ್ಲಾಗರ್ಗಳು ಮಾತ್ರ ಇರುವುದು ದುರಂತ ಎಂದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್, ಎನ್. ಎಲ್. ಚನ್ನೇಗೌಡ, ಡಾ. ಕೆ.ಕೆ. ಜಯಚಂದ್ರಗುಪ್ತ, ಎಚ್.ಎಸ್. ರವಿ ಸಮುದ್ರವಳ್ಳಿವಾಸು, ಜಿ.ಎಸ್. ಕಲಾವತಿ ಮಧುಸಾದನ್, ಬಿ.ಎಸ್. ವನಜಾಕ್ಷಿ, ಚೂಡಾಮಣಿ, ಲಲಿತ ಎಸ್, ಬಿ.ವೇದಾವತಿ, ಪದ್ಮಾವತಿ, ಎಚ್. ವೇದಶ್ರೀ ರಾಜ್, ಚಿನ್ನೇನಹಳ್ಳಿ ಸ್ವಾಮಿ, ಚಂದ್ರಕಾಂತ ಪಡೆಸೂರ, ಎಚ್. ವೇದಾವತಿ, ಸುಕನ್ಯ ಮುಕುಂದ, ಸಿಂಧುಶ್ರೀ ಮುಕುಂದ, ದ್ಯಾವನೂರು ಮಂಜುನಾಥ ಇತರರು ಕವಿತೆ ವಾಚಿಸಿದರು.
ಕಾರ್ಯಕ್ರಮದಲ್ಲಿ ಬಿ.ಜಿ.ವಿ.ಎಸ್ನ ಜಿಲ್ಲಾ ಉಪಾಧ್ಯಕ್ಷ ಅಹಮ್ಮದ್ ಹಗರೆ, ಗೌರಮ್ಮ, ಪ್ರಜ್ಞಾ, ಶಿವಾಗ್ನಿ ಇತರರು ಇದ್ದರು.
ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ನಾಡಿನ ಹಿರಿಯ ಸಾಹಿತಿ ಯಶವಂತ ಚಿತ್ತಾಲರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉಪನ್ಯಾಸಕ ಪ್ರೊ. ನಾರಾಯಣ ಪ್ರಸಾದ್ ಅವರನ್ನು ಮನೆ ಮನೆ ಕವಿಗೋಷ್ಠಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಲಾವತಿ ಮಧುಸೂದನ್ ಪ್ರಾರ್ಥಿಸಿದರು. ಪ್ರಾಯೋಜಕ ವೇದಶ್ರೀರಾಜ್ ಸ್ವಾಗತಿಸಿದರು. ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ನಿರೂಪಿಸಿ, ವಂದಿಸಿದರು.
ಬೇಸಿಗೆ ರಜೆ ಅವಧಿಯಲ್ಲೂ ಅಕ್ಷರ ದಾಸೋಹ
ಹಾಸನ: ಬರಪೀಡಿತ ತಾಲೂಕುಗಳೆಂದು ಘೋಷಿತವಾದ ತಾಲೂಕುಗಳಲ್ಲಿ ಶಾಲಾ ರಜಾ ಅವಧಿಯಲ್ಲೂ ಅಕ್ಷರ ದಾಸೋಹ ಮುಂದುವರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಆಲೂರು, ಅರಕಲಗೂಡು, ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ ತಾಲೂಕುಗಳಲ್ಲಿ ಏಪ್ರಿಲ್, ಮೇ ತಿಂಗಳ ಬೇಸಿಗೆ ರಜಾ ಅವಧಿಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿಯ ಎಲ್ಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮವನ್ನು ಭಾನುವಾರಗಳು ಸೇರಿದಂತೆ ಎಲ್ಲಾ ದಿನಗಳಂದು ಸರ್ಕಾರಿ ಆದೇಶದಂತೆ ಮುಂದುವರಿಸಲಾಗುತ್ತಿದೆ. ಸಂಬಂಧಪಟ್ಟ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಯು.ಪಿ. ಸಿಂಗ್ ಕೋರಿದ್ದಾರೆ.