ಅವಿವಾಹಿತ ಎಂದು ಮೋದಿ ಹೇಳಿಕೊಂಡಿರಲಿಲ್ಲ
ಹಾಸನ: ನರೇಂದ್ರ ಮೋದಿ ಅವರು ತಮಗೆ ಮದುವೆಯಾಗಿಲ್ಲ ಅಂತ ಎಲ್ಲೂ ಹೇಳಿಕೊಂಡಿರಲಿಲ್ಲ. ಆದ್ದರಿಂದ ಈ ಬಗ್ಗೆ ತಪ್ಪು ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದರು.
ಹಾಸನ ಕಸಬಾ ಹೋಬಳಿಯಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ವಿಜಯ್ ಶಂಕರ್ ಪರ ಮತಯಾಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ನರೇಂದ್ರ ಮೋದಿ ಅವರು ಈವರೆಗೆ ಚುನಾವಣೆ ಸಂದರ್ಭದಲ್ಲಿ ಪತ್ನಿ ವಿವರ ಎಂಬ ಕಾಲಂ ಭರ್ತಿ ಮಾಡದೆ ಖಾಲಿ ಬಿಡುತ್ತಿದ್ದರೇ ವಿನಃ ತಮಗೆ ಮದುವೆ ಆಗಿಲ್ಲ ಎಂದು ಹೇಳಿಕೊಂಡಿಲ್ಲ. ಸುಪ್ರೀಂ ಕೋರ್ಟ್ ಅರ್ಜಿಯ ಎಲ್ಲಾ ಕಾಲಂ ಭರ್ತಿ ಮಾಡಬೇಕು ಎಂದು ಹೇಳಿರುವುದರಿಂದ ತಮ್ಮ ಪತ್ನಿ ಬಗ್ಗೆಯ ಕಾಲಂ ಅನ್ನು ಈ ಬಾರಿ ಭರ್ತಿ ಮಾಡಿದ್ದಾರೆ ಅಷ್ಟೇ ಎಂದರು.
ಮೋದಿ ಶುದ್ಧ: ಗೌತಮ ಬುದ್ಧ ಇದ್ದರೂ ಸಹ ಈ ಅವರ ಬಗ್ಗೆಯೂ ಸಹ ಜನರು ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದರು ಎಂದ ಸುರೇಶ್ ಕುಮಾರ್, ಕಮಲ ಕೆಸರಿನಲ್ಲಿ ಹುಟ್ಟಿದರೂ ಅದು ಶ್ರೇಷ್ಠವಾಗಿರುತ್ತದೆ. ಅದೇ ರೀತಿ ಮೋದಿ ಸಹ ಕೆಸರನ್ನು ಮೈಯಿಗೆ ಅಂಟಿಸಿಕೊಳ್ಳದೆ ಶುದ್ಧವಾಗಿದ್ದಾರೆ ಎಂದರು. ಜಿಲ್ಲಾ ಬಿಜೆಪಿಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲದೆ ಬಿ.ಬಿ. ಶಿವಪ್ಪ ಸೇರಿದಂತೆ ಎಲ್ಲರೂ ಒಟ್ಟಾಗಿ ದುಡಿಯುತ್ತಿದ್ದಾರೆ ಎಂದು ಸುರೇಶ್ ಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು. ವಿಜಯ ಶಂಕರ್ ಅವರ ಗೆಲುವಿಗೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಆದ್ದರಿಂದ ಜಿಲ್ಲೆಯ ಜನತೆ ಬಿಜೆಪಿಗೆ ಹೆಚ್ಚಿನ ಮತ ನೀಡುವ ಮೂಲಕ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು. ಈ ಸಂದರ್ಬದಲ್ಲಿ ಮಾಜಿ ಶಾಸಕ ಬಿ.ಆರ್. ಗುರುದೇವ್ ಹಾಗೂ ಇತರರು ಇದ್ದರು.