'ತೃತೀಯ ರಂಗದ ಕಲ್ಪನೆ ಅಪ್ರಸ್ತುತ'
ಅರಕಲಗೂಡು: ಇಂದಿನ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಪ್ರಾಸ್ತಾಪಿಸುತ್ತಿರುವ ತೃತೀಯ ರಂಗದ ರಚನೆಯ ಮಾತು ಅಪ್ರಸ್ತುತ ಎಂದು ಬಿಜೆಪಿ ಅಭ್ಯರ್ಥಿ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆಗೆ ಮೂರು ತಿಂಗಳ ಮುಂಚೆ ಈ ವಿಷಯ ಪ್ರಸ್ತಾಪಿಸುವ ಪ್ರಾದೇಶಿಕ ಪಕ್ಷಗಳು ಚುನಾವಣೆಯ ನಂತರ ಮೂರು ತಿಂಗಳವರೆಗೆ ಈ ವಿಷಯ ಜನರ ಮುಂದಿಡುತ್ತಾ ಆ ವಿಷಯವನ್ನೇ ಕೈಬಿಡುತ್ತವೆ. ತೃತೀಯ ರಂಗದ ರಚನೆಯಂತ ಯಾವುದೇ ಸಂಘಟಿತ ಪ್ರಯತ್ನ ಈವರೆಗೆ ನಡೆದಿಲ್ಲ. ಹೀಗಿರುವಾಗ ಎಲ್ಲಿಯ ತೃತೀಯ ರಂಗ, ದೇವೇಗೌಡರು ಪ್ರಧಾನಿಯಾಗುವುದಾದರೂ ಎಲ್ಲಿಯ ಮಾತು ಎಂದು ವಿಜಯಶಂಕರ್ ತಿಳಿಸಿದ್ದಾರೆ.
ತಾಲೂಕಿನ ಮರಡಿ ಗ್ರಾಮದಲ್ಲಿ ಮತಯಾಚನೆ ಮಾಡುವ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಸಮರ್ಥ ನಾಯಕರಿಗೆ ಶಕ್ತಿ ತುಂಬುವ ಕೆಲಸ ಹಾಸನ ಜಿಲ್ಲೆಯಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮತದಾರರು ನನ್ನನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ ಎಂಬ ನಂಬಿಕೆ ತಮಗಿದೆ ಎಂದು ಆತ್ಮ ವಿಶ್ವಾಸದ ಮಾತುಗಳನ್ನಾಡಿದ ಅವರು ಜನ ಬದಲಾವಣೆ ಬಯಸಿದ್ದಾರೆ ಎಂದರು.
ಈ ಭಾಗದ ಜನಪ್ರತಿನಿಧಿಗಳು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿಲ್ಲ ಎಂದು ಆರೋಪಿಸಿದ ಅವರು ಕಡೂರು, ಬೀರೂರು, ಅರಸೀಕೆರೆ ಮತ್ತು ಬೇಲೂರು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಸಮಸ್ಯೆಗೆ ಶಾಶ್ವತ ಯೋಜನೆ ರೂಪಿಸಿಲ್ಲ. ಈ ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸುವಲ್ಲಿ ಇಲ್ಲಿಯ ಸಂಸದರು ವಿಫಲರಾಗಿದ್ದಾರೆ ಎಂದರು.
ಈ ವೇಳೆ ಬಿಜೆಪಿ ಮುಖಂಡರಾದ ಮರಡಿ ಸೋಮಶೇಖರ್, ಎನ್. ರವಿಕುಮಾರ್,ಬಿಜೆಪಿ ಅಧ್ಯಕ್ಷ ಕೇಶವೇಗೌಡ, ಕಾರ್ಯದರ್ಶಿ ಸಂಜಯ್, ಲೋಕೇಶ್ ಇತರರು ಉಪಸ್ಥಿತರಿದ್ದರು.