ದಂಡಿಗನಹಳ್ಳಿಯಲ್ಲಿ ಅನುಪಮಾ ಪ್ರಚಾರ
ಚನ್ನರಾಯಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರಿಗೆ ಮತಹಾಕಿ ಗೆಲ್ಲಿಸಿದರೆ ಕಾಚೇನಹಳ್ಳಿ ಏತ ನೀರಾವರಿಯಿಂದ ನೀರು ಹರಿಸಿ ಈ ಭಾಗದ ಜನರ ನೀರಿನ ದಾಹವನ್ನು ನೀಗಿಸುತ್ತೇವೆ. ಇಲ್ಲದಿದ್ದರೆ ಮತ್ತೊಮ್ಮೆ ಕಾಂಗ್ರೆಸ್‌ಗೆ ಓಟು ಕೇಳಲು ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಅನುಪಮಾ ಮಹೇಶ್ ಹೇಳಿದ್ದಾರೆ.
ಅವರು ತಾಲೂಕಿನ ದಂಡಿಗನಹಳ್ಳಿಯಲ್ಲಿ ಕಾಂಗ್ರೆಸ್ ಪರ ಮತ ಯಾಚಿಸುತ್ತಾ ಮಾತನಾಡಿ, ದಂಡಿಗನಹಳ್ಳಿ ಹೋಬಳಿಗೆ ಸರಿಯಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ನೀಡದೆ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ದೇವೇಗೌಡರು ಸರ್ವಾಧಿಕಾರ ಧೋರಣೆ ನಡೆಸುತ್ತಿದ್ದಾರೆ. ಏತನೀರಾವರಿಗೆ ನೀರು ಹರಿಸಿದ ಮಾಜಿ ಸಂಸದ ದಿ. ಜಿ.ಪುಟ್ಟಸ್ವಾಮೀ ಗೌಡರ ಹೆಸರು ಬರುತ್ತದೆ ಎಂದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನೀರಿಗಾಗಿ ದ್ವೇಷ: ಕಾಚೇನಹಳ್ಳಿ ಏತ ನೀರಾವರಿಯಿಂದ ಕೆರೆಕಟ್ಟೆಗಳಿಗೆ ನೀರುತುಂಬಿದರೆ ಬಾವಿಯಲ್ಲೂ ನೀರು ಇರುತ್ತಿದ್ದವು. ದನಕರುಗಳು, ತೆಂಗಿನಮರಗಳು, ಜನರು ನೆಮ್ಮದಿಯಿಂದ ಬದುಕುತ್ತಿದ್ದರು. ಈ ವೇಳೆಗೆ ಹತ್ತಾರು ವರ್ಷಗಳ ಹಿಂದೆಯೇ ಏತ ನೀರಾವರಿಯಿಂದ ಈ ಭಾಗದ ಜನರಿ ನೀರಿನ ಬವಣೆ ತಪ್ಪುತ್ತಿತ್ತು. ದೇವೇಗೌಡರ ಕುಟುಂಬದವರೇ ಶಂಕುಸ್ಥಾಪನೆಗೆ ಹೆಸರನ್ನು ಹಾಕಿಸಿಕೊಂಡು ನೀರು ಹರಿಸಿದ್ದರೆ ನಾವು ಕೇಳುತ್ತಿರಲಿಲ್ಲ ಆದರೆ ನೀರಿಗಾಗಿ ದ್ವೇಷ ಮಾಡುವುದು ಎಷ್ಟು ಸಮಂಜಸ ಎಂದರು.
ಈ ಭಾಗದ ಒಂದೊಂದು ಗ್ರಾಮದಲ್ಲಿ ಹತ್ತಾರು ಬಾವಿಗಳಿಗೆ ಕೋಟಿಕಟ್ಟಲೆ ಹಣ ಖರ್ಚು ಮಾಡಿ ಕೊರೆಸಿದರೂ ಕಾವಿಗಳಲ್ಲಿ ನೀರು ಬರದೆ ಸಾಲಗಾರರಾಗಿ ರೈತರ ಬದುಕು ಚಿಂತಾಜನಕವಾಗಿದೆ ಕೆರೆಗಳಿಗೆ ನೀರು ತುಂಬಿದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಜಿ. ಪುಟ್ಟಸ್ವಾಮಿಗೌಡರು ಸಂಸದರಾಗಿದ್ದಾಗ ನೇತ್ರಾವತಿ ತಿರುವಿನ ಯೋಜನೆ ಬಗ್ಗೆ ಹಾಗೂ ಕಾಚೇನಹಳ್ಳಿ ಏತನೀರಾವರಿ ಯೋಜನೆ ಬಗ್ಗೆ ಗಮನಹರಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ತರಭೇನಹಳ್ಳಿ ಗಂಗಾಧರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಪರಿಷತ್ತಿನ ದಂಡಿಗನಹಳ್ಳಿ ಹೋಬಳಿ ಅಧ್ಯಕ್ಷ ಬರಗೂರು ಶಂಕರ್ ಹಾಗೂ ಇತರರು ಇದ್ದರು.