ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸಿಗರು: ಬಿಎಸ್ಪಿ ಟೀಕೆ
ಹಾಸನ: ಕಾಂಗ್ರೆಸ್‌ನ ಕೆಲವು ಮುಖಂಡರು ಬಿಎಸ್ಪಿ ಗೆಲ್ಲೋದಿಲ್ಲ ಆ ಪಕ್ಷಕ್ಕೆ ಮತವನ್ನು ಹಾಕಬೇಡಿ ಎಂದು ಹೇಳುವ ಮೂಲಕ ದಲಿತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಜಿಲ್ಲಾಧ್ಯಕ್ಷ ಬಿ.ಸಿ. ರಾಜೇಶ್ ಆರೋಪಿಸಿದರು.
ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದಿರುವ ಸುಮಾರು 175 ಪಕ್ಷಗಳಿದ್ದು, ಅವುಗಳ ಪೈಕಿ ಕಾಂಗ್ರೆಸ್ 1ನೇ ಸ್ಥಾನ, ಬಿಜೆಪಿ 2ನೇ ಸ್ಥಾನ ಹಾಗೂ ಬಿಎಸ್ಪಿ 3 ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ದೇಶದಲ್ಲಿ ಸುಮಾರು 3 ಕೋಟಿ ಮತಗಳನ್ನು ಪಡೆಯುವ ಮೂಲಕ ಶೇ. 6.2ರಷ್ಟು ಮತಗಳನ್ನು ಪಡೆಯುವ ಮುಖಾಂತರ 3ನೇ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾಯಾವತಿ ಬೆಂಬಲ ಬೇಕು: ಬಿಎಸ್ಪಿಗೆ ಹಾಸನದಲ್ಲಿ ಹಾಕುವಂತಹ ಮತ ಪಕ್ಕೆ ಸೇರಲಿದೆ. ಉತ್ತರ ಪ್ರದೇಶದಲ್ಲಿ 40 ಸ್ಥಾನಗಳು ಮತ್ತು ಉತ್ತರ ಭಾರತದ ಇತರೆ ರಾಜ್ಯಗಳಲ್ಲಿ 10 ಸ್ಥಾನಗಳು ಸೇರಿದಂತೆ ದೇಶದಲ್ಲಿ ಒಟ್ಟಾರೆಯಾಗಿ 50 ಸ್ಥಾನಗಳನ್ನು ಬಿಎಸ್ಪಿ ಗೆಲ್ಲುವುದು ಖಚಿತವಾಗಿದೆ. ಕೇಂದ್ರದಲ್ಲಿ ಮಾಯಾವತಿ ಅವರ ಬೆಂಬಲವಿಲ್ಲದೆ ಯಾರೂ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದರು.
ದೊಡ್ಡ ಪೆಟ್ಟು: ಅಂಬೇಡ್ಕರ್ ಅವರೇ ಕಾಂಗ್ರೆಸ್‌ನಿಂದ ದಲಿತರಿಗೆ ಅನ್ಯಾಯವಾಗುತ್ತಿದೆ. ಅಡಿಕೆಯಷ್ಟು ಮಾನ ಇದ್ದರೆ ಕಾಂಗ್ರೆಸ್‌ಗೆ ಸೇರಬಾರದು, ಕಾಂಗ್ರೆಸ್ ಉರಿಯುತ್ತಿರುವ ಮನೆಯಾಗಿದ್ದು, ಅಲ್ಲಿಗೆ ದಲಿತರ ಹೋದರೆ ಉರಿದು ಬೂದಿಯಾಗುತ್ತಾರೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಸ್ವಂತ ಇಚ್ಛಾಶಕ್ತಿಯಿಂದ ಕಾಂಗ್ರೆಸ್‌ಗೆ ಹೆಚ್ಚಾಗಿ ಜನ ಹೋಗುತ್ತಿರುವುದನ್ನು ನೋಡಿದರೆ ಅಂಬೇಡ್ಕರ್ ಅವರ ಸಿದ್ಧಾಂತಕ್ಕೆ ಮುಂದೊಂದು ದಿನ ದೊಡ್ಡಪೆಟ್ಟು ಬೀಳಲಿದೆ ಎಂದರು.ಈ ಸಂದರ್ಭದಲ್ಲಿ ಬಿಎಸ್ಪಿ ಅಭ್ಯರ್ಥಿ ಎ.ಪಿ. ಅಹಮದ್ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಬಿಎಸ್ಪಿಯನ್ನು ಜನ ಬೆಂಬಲಿಸುತ್ತಾರೆಂಬ ನಂಬಿಕೆ ಇದ್ದು, ನನ್ನನ್ನು ಗೆಲ್ಲಿಸಿ ಮಯಾವತಿ ಅವರ ಕೈಯನ್ನು ಭದ್ರಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಮಾರ್ ಗೌರವ್, ದೇವರಾಜು ಇದ್ದರು.