ನಾಪತ್ತೆಯಾಗಿದ್ದ ಬಿಜೆಪಿ ಮುಖಂಡ ಮಂಜುನಾಥ್ ಮುಂಬೈನಲ್ಲಿ ಪತ್ತೆ
ಹಾಸನ: ತೋಟಕ್ಕೆ ಹೋಗಿದ್ದಾಗ ಇದ್ದಕ್ಕಿದ್ದಂತೆ ಗುರುವಾರ ನಾಪತ್ತೆಯಾಗಿದ್ದ ನಗರದ ಬಿಜೆಪಿ ಮುಖಂಡ ಬಿ.ಕೆ. ಮಂಜುನಾಥ್ ಶುಕ್ರವಾರ ಸಂಜೆ ಪತ್ತೆಯಾಗಿದ್ದಾರೆ.
ಇಲ್ಲಿನ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರೂ ಮತ್ತು ಮೋದಿ ಅಭಿಮಾನಿಗಳ ಜಿಲ್ಲಾಧ್ಯಕ್ಷರಾಗಿದ್ದ ಮಂಜುನಾಥ್ ಗುರುವಾರ ಬೆಳಗ್ಗೆ 10.30ರಲ್ಲಿ ಹಾಸನ ತಾಲೂಕು ದೊಡ್ಡಾಪುರದಲ್ಲಿ ಇರುವ ತೋಟಕ್ಕೆ ಕಾರಿನಲ್ಲಿ ತೆರಳಿದ್ದರು. ಸಂಜೆಯಾದರೂ ಮನೆಗೆ ಬಾರದ ಕಾರಣ ಆಂತಕಗೊಂಡ ಕುಟುಂಬದ ಸದಸ್ಯರು, ಮಂಜುನಾಥ್ ಅವರನ್ನು ಸಂಪರ್ಕಿಸಲು ಮೊಬೈಲ್ಗೆ ಕರೆ ಮಾಡಿದ್ದಾರೆ. ಆದರೆ, ಅವರು ಕಾಲ್ ರಿಸೀವ್ ಮಾಡಿರಲಿಲ್ಲ.
ಆಗ ಅವರ ಪತ್ನಿ ರಾಧಾ ಮತ್ತಿತರರು ಕುವೆಂಪು ನಗರದ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದರು. ನಂತರ ತಪಾಸಣೆ ನಡೆಸಿದಾಗ ಹಾಸನ ನಗರದ ಡೈರಿ ವೃತ್ತದ ಸಮೀಪ ಮಂಜುನಾಥ್ ಅವರ ಕಾರು ನಿಂತಿತ್ತು. ಆದರೆ ಕಾರ್ನಲ್ಲಿ ಮಂಜುನಾಥ್ ಇರಲಿಲ್ಲ. ಆದರೆ, ಮೊಬೈಲ್ ಇತ್ತು. ಹೀಗೆ ನಾಪತ್ತೆಯಾಗಿದ್ದ ಮಂಜುನಾಥ್ರನ್ನು ಹುಡುಕಲು ಪೊಲೀಸರು ತೀವ್ರ ಯತ್ನ ನಡೆಸುತ್ತಿದ್ದರು.
ಶುಕ್ರವಾರ ಸಂಜೆ 5.10ರಲ್ಲಿ ಮಂಜುನಾಥ್ ಅವರೇ ದೂರವಾಣಿ ಮಾಡಿ ಪತ್ನಿ ರಾಧಾ ಮತ್ತು ಪುತ್ರಿ ಮಹಿಮಾ ಜೊತೆ ಮಾತನಾಡಿ, ನಾನು ನ್ಯೂ ಮುಂಬಯಿನ ವ್ಯಾಸಿ ಟೋಲ್ಗೇಟ್ ಬಳಿ ಇದ್ದೇನೆ. ಯಾರು ಕರೆದುಕೊಂಡು ಬಂದರೋ ಗೊತ್ತಿಲ್ಲ ಎಂದು ಅಳುತ್ತಾ ಹೇಳಿದರು. ಕೂಡಲೇ ಪೊಲೀಸರು, ಮಂಜುನಾಥ್ ಮಾಡಿದ ದೂರವಾಣಿ ನಂಬರ್ ಸಂಖ್ಯೆ ಪಡೆದು ಸಂಪರ್ಕಿಸಿ ಮಾತನಾಡಿದರು.
ನಂತರ ಮುಂಬಯಿ ಪೊಲೀಸರಿಗೆ ತಿಳಿಸಿ, ಮಂಜುನಾಥ್ ಅವರನ್ನು ತಮ್ಮ ಕಡೆ ಸುರಕ್ಷಿತವಾಗಿ ಇರಿಸಿಕೊಳ್ಳುವಂತೆ ಸೂಚಿಸಿದರು. ನಂತರ ಹಾಸನದಿಂದ ಕುಟುಂಬದ ಸದಸ್ಯರು ಮುಂಬಯಿಗೆ ತೆರಳಿದ್ದು, ಶನಿವಾರ ಕರೆ ತರುವರು ಎಂದು ತಿಳಿದಿದೆ.
ಎಲ್ಲೆಡೆ ಚರ್ಚೆ
ಮಂಜುನಾಥ್ ನಾಪತ್ತೆಯಾಗಿದ್ದು ಹಾಸನ ನಗರದ ಜನತೆಯನ್ನು ತಲ್ಲಣಗೊಳಿಸಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಅಪಹರಿಸಿರಬಹುದು ಎಂದು ಹೇಳಲಾಗಿತ್ತು.
ಅದನ್ನು ಸಂಪೂರ್ಣವಾಗಿ ನಿರಾಕರಿಸಲಾಗಿದ್ದು, ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಕೊಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಅವರನ್ನು ಕಿಡ್ನಾಪ್ ಮಾಡಿ, ಮುಂಬಯಿಗೆ ಕರೆದುಕೊಂಡು ಹೋಗಿರಬಹುದು ಎಂದು ಹೇಳಲಾಗುತ್ತಿತ್ತು. ಈಗ, ಮಂಜುನಾಥ್ ದೊರಕಿಯಾಗಿದೆ. ಅವರ ಕುಟುಂಬದವರ ಆತಂಕ ದೂರವಾಗಿದೆ. ಆದರೆ, ದೂರದ ಮುಂಬಯಿಗೆ ಕರೆದುಕೊಂಡು ಹೋದ ಅಪರಿಚಿತರು ಅಲ್ಲಿ ಬಿಟ್ಟಿದ್ದು ಏಕೆ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.