ಪತ್ರಕರ್ತರ ಮೇಲೆ ಹಲ್ಲೆ: ಎಸ್ಸೈ ಅಮಾನತಿಗೆ ಆಗ್ರಹ
ಹಾಸನ: ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವ ಅನುಚಿತವಾಗಿ ವರ್ತಿಸಿರುವ ಪ್ರೊಬೆಷನರ್ ಐಎಎಸ್ ಅಧಿಕಾರಿ ರಾಮಚಂದ್ರನ್ ಹಾಗೂ ಪಿಎಸ್ಐ ಮಂಜು ಇವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಟೈಮ್ಸ್ ಆಫ್ ಇಂಡಿಯಾ ಮೈಸೂರು ಕಚೇರಿಯ ಬ್ಯೂರೊ ಮುಖ್ಯಸ್ಥ ಎಂ.ಬಿ. ಮರಂಕಲ್ ಅವರು ಗುರುವಾರ ಹಾಸನ ಲೋಕಸಭಾ ಚುನಾವಣೆ ಸಮೀಕ್ಷೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಬೇಲೂರು ತಾಲೂಕಿನ ಹಗರೆ ಬಳಿ ತಮ್ಮ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದಾಗ ಅಧಿಕಾರಿಗಳ ತಂಡದೊಂದಿಗೆ ಜನರು ಗುಂಪು ಕಟ್ಟಿಕೊಂಡು ಮಾತಿನ ಚಕಮಕಿ ನಡೆಸುತ್ತಿದ್ದರು.
ಈ ಘಟನೆಯನ್ನು ತಮ್ಮಷ್ಟಕ್ಕೆ ತಾವೇ ವೀಕ್ಷಣೆ ಮಾಡುತ್ತಿದ್ದರೂ ಮರಂಕಲ್ ಪ್ರಯಾಣಿಸುತ್ತಿದ್ದ ಟ್ಯಾಕ್ಸಿ ನಿಲ್ಲಿಸಿ, ಪೊಬೇಷನರ್ ಐಎಎಸ್ ಅಧಿಕಾರಿ ರಾಮಚಂದ್ರನ್ ಮತ್ತು ಹಳೇಬೀಡು ಠಾಣೆ ಪಿಎಸ್ಐ ಮಂಜು ತಳ್ಳಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿದರು. ಜೊತೆಗೆ ಹಲ್ಲೆ ನಡೆಸಿ ಪೊಲೀಸ್ ಜೀಪಿನಲ್ಲಿ ಕೂರಿಸಿಕೊಂಡು ಅಪರಾಧಿಯಂತೆ ನಡೆಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದ್ದು ಮುಂದಾದರೂ ಅಧಿಕಾರಿಗಳು ಪತ್ರಿಕಾ ಸ್ವಾತಂತ್ರ್ಯಕ್ಕೆ ಅವಕಾಶ ನೀಡಿ ಸಂಯಮದಿಂದ ನಡೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೇ ಸೂಚನೆ ನೀಡಲು ಆಗ್ರಹಿಸಿ ಪತ್ರಕರ್ತರು ಮನವಿ ಸಲ್ಲಿಸಿದರು. ಸಂಘದ ಪದಾಧಿಕಾರಿಗಳು ಇದ್ದರು.
ಭಾರತಕ್ಕೆ ಸಂಸ್ಕೃತಿಯ ಹೆಗ್ಗುರುತು: ಡಾ. ಭಗವಾನ್
ಚನ್ನರಾಯಪಟ್ಟಣ: ಭಾರತ ದೇಶ ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡಿರುವುದು ತಮ್ಮ ಸಂಸ್ಕೃತಿಯಿಂದ ಮಾತ್ರ ಎಂದು ಕೆಂಪೇಗೌಡ ಮೆಡಿಕಲ್ ಕಾಲೇಜಿನ ಡಾ. ಭಗವಾನ್ ತಿಳಿಸಿದರು.
ತಾಲೂಕಿನ ಚಿಕ್ಕಬೀಳ್ತಿಯಲ್ಲಿ ಏರ್ಪಡಿಸಿದ್ದ ಸೀತಾರಾಮಾಂಜನೇಯ ದೇವಸ್ಥಾನ ಉದ್ಘಾಟನಾ ಸಮಾರಂಭಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ದೇಶದ ಸಂಸ್ಕೃತಿ ಪ್ರಪಂಚದ ಎಲ್ಲಾ ದೇಶಗಳಿಗೂ ಮಾದರಿಯಾಗಿದ್ದು, ದೇಶ ಸಂಸ್ಕೃತಿಯ ಮೇಲೆ ನಿಂತಿದೆ ಎಂದು ತಿಳಿಸಿದರು. ಸಂಸ್ಕೃತಿ ಉಳಿಸುವ ಪ್ರಯತ್ನ ಹಾಗೂ ಸಮಾಜ ಸೇವೆ ಮಾಡುತ್ತಿರುವ ಗಣ್ಯರನ್ನು ಸಮಾಜ ಗುರುತಿಸಿ ಸನ್ಮಾನಿಸಿದರೆ ಅದು ಇತರರಿಗೆ ಮಾದರಿಯಾಗಿ ತಾವು ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಮನೋಭಾವ ಮೂಡುತ್ತದೆ ಎಂದು ತಿಳಿಸಿದರು. ಗ್ರಾಮೀಣ ಭಾಗದಿಂದ ಯುವಕರು ನಗರ ಸೇರುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಸಂಸ್ಕೃತಿ, ಗ್ರಾಮೀಣ ಸೊಗಡು ನಶಿಸುತ್ತಿದೆ. ಕೆಲ ಯುವಕರು ನಗರೀಕರಣಕ್ಕೆ ಹೊಂದಿಕೊಂಡು ಗ್ರಾಮೀಣ ಸಂಸ್ಕೃತಿಯನ್ನು ಅಳಿಸುತ್ತಿದ್ದಾರೆ ಎಂದು ವಿಷಾದಿಸಿದರು. ನಿವೃತ್ತ ವಿಶೇಷ ಜಿಲ್ಲಾಧಿಕಾರಿ ನಾಗಪ್ಪ ಮಾತನಾಡಿ, ಸಮಾಜ ಸೇವೆ ಸ್ವ ಪ್ರೇರಿತವಾಗಿರಲಿ ಎಂದರು. ಕಸಾಪ ಮಾಜಿ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ರಾಜ್ಯ ವೈದ್ಯರ ಸಂಘದ ಅಧ್ಯಕ್ಷ ಡಾ.ರವೀಂದ್ರ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಜೆ.ಎಂ ರಾಮಚಂದ್ರ, ಪರಿಸರ ಪ್ರೇಮಿ ಅಶೋಕ್, ವಿ.ಎನ್. ರಾಜಣ್ಣ, ರವೀಶ್ ಇದ್ದರು.