ಪ್ರಸನ್ನ ರಾಮೇಶ್ವರ ಸ್ವಾಮಿ ರಥೋತ್ಸವ
ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಹೊಳಲ್ಕೆರೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿಯವರ ದಿವ್ಯ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಇತ್ತೀಚೆಗೆ ಸಡಗರ ಸಂಭ್ರಮ ನಡುವೆ ವೈಭವದಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ರಾಜ್ಯದ ನಾನಾ ಭಾಗಗಳಿಂದ ಜನರು ತಂಡೋಪತಂಡವಾಗಿ ಸೇರಿದ್ದರು. ಶ್ರೀ ಸ್ವಾಮಿಯವರಿಗೆ ಧಾರ್ಮಿಕ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿದ ರಾಮೇಶ್ವರ ಸ್ವಾಮಿಯ ಮೆರವಣಿಗೆಯಲ್ಲಿ ಕರೆತಂದು ರಥಕ್ಕೆ ಆಗಮೋಕ್ತವಾಗಿ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿದ ನಂತರ ಶುಭ ಪುಷ್ಯ ನಕ್ಷತ್ರದ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ಭಕ್ತರು ಭಕ್ತಿ ಸಮರ್ಪಿಸಿದರು. ರಥೋತ್ಸವಕ್ಕೂ ಮುನ್ನ ಸಕಲ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಗ್ರಾಮಕ್ಕೆ ಹೊಂದಿಕೊಂಡಂತಿರುವ ದೊಡ್ಡಮೇಟಿಕುರ್ಕೆ, ಬಿ.ಆರ್.ಜಿ. ಕೊಪ್ಪಲು, ಮಾಡಾಳು, ಶಶಿವಾಳ, ರಾಂಪುರ, ಚಿಕ್ಕಮೇಟಿಕುರ್ಕೆ, ಕೊಪ್ಪಲು ಹಾಗೂ ಹರಳಕಟ್ಟ ಸೇರಿದಂತೆ ಆಸುಪಾಸಿನಲ್ಲಿರುವ ಗ್ರಾಮಸ್ಥರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗಾಗಿ ಪ್ರಸಾದ ವಿನಿಯೋಗದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೋಗೋಡು ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ
ಬೇಲೂರು: ತಾಲೂಕಿನ ಕೋಗೋಡು ಗ್ರಾಮದಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಘಟನೆಗೆ ಆಕೆಯ ಗಂಡನೇ ನೇರ ಕಾರಣ ಎಂದು ಗ್ರಾಮಸ್ಥರು ದೂರಿದರಲ್ಲದೆ ಪೊಲೀಸರು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದರು. ತಾಲೂಕಿನ ಚೀಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಗೋಡು ಬಳಿಯ ಬೊಮ್ಮೆನಹಳ್ಳಿಯಲ್ಲಿ ಗುರುವಾರ ಸಂಜೆ ಲತಾ ಎಂಬಾಕೆ (32) ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಆಕೆಯ ಗಂಡನ ಅನೈತಿಕ ಸಂಬಂಧ ಹಾಗೂ ಕಿರುಕುಳ ಕಾರಣವಾಗಿದೆ ಎಂದು ಸಂಬಂಧಿಕರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಕ್ಕೆ ತೆರಳಿದ್ದ ಸುದ್ದಿಗಾರರೊಂದಿಗೆ ವಿವಿಧ ಸ್ತ್ರೀಶಕ್ತಿ ಸಂಘದ ಮಹಿಳೆಯರು ಮಾತನಾಡಿ, ಆತ್ಮಹತ್ಯೆಗೆ ಶರಣಾದ ಲತಾ ಎಂಬಾಕೆಯ ಗಂಡ ರಾಜು ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಹಾಗೂ ಅನೈತಿಕ ಚಟವಟಿಕೆಯಲ್ಲಿ ತೊಡಗಿದ್ದು ಜ್ಯೋತಿ ಎಂಬ ಮಹಿಳೆಯೊಂದಿಗೆ ಕಳೆದ 2 ವರ್ಷದಿಂದ ಅನೈತಿಕ ಸಂಬಂಧ ನಡೆಸುತ್ತಿದ್ದ. ಜ್ಯೋತಿಯನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಬೆಳಿಗ್ಗೆ ಹೊರಟರೆ 2- 3 ದಿನ ಮನೆಗೆ ಬರುತ್ತಿರಲಿಲ್ಲ. ಈ ಬಗ್ಗೆ ರಾಜು ಹಾಗೂ ಪತ್ನಿ ಲತಾ ಜತೆ ದಿನನಿತ್ಯ ಜಗಳ ನಡೆಯುತ್ತಿತ್ತು ಎಂದು ಗ್ರಾಮಸ್ಥರು ದೂರಿದ್ದಾರೆ. ಅಲ್ಲದೇ, ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲು ಲತಾ ಹಲವಾರು ಬಾರಿ ಪ್ರಯತ್ನಿದ್ದರೂ, ಪೊಲೀಸರು ದೂರ ಸ್ವೀಕರಿಸಿಲ್ಲ. ಇದಕ್ಕೆ ರಾಜು ಜೊತೆ ಪೊಲೀಸರು ಷಾಮೀಲಾಗಿದ್ದಾರೆಂದು ಸಂಬಂಧಿಗಳು ದೂರಿದ್ದಾರೆ.
ಆಕ್ರೋಶ: ಲತಾ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಗುರುವಾರ ದೂರು ನೀಡಲು ಹೋದರೆ ಗಂಡನ ಪರವಾಗಿಯೇ ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ರಾಜುವಿನಿಂದ ಬರೆಸಿಕೊಂಡಿದ್ದ ಮುಚ್ಚಳಿಕೆ ಪತ್ರ ಎಂದು ಹೇಳಲಾಗಿದ್ದು, ಪತ್ರ ತೋರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದರೆ, ಪತ್ರ ತೋರಿಸಿದೇ ಇಲ್ಲದ ಸಬೂಬು ಹೇಳುತ್ತಾರೆ ಎಂದು ಲತಾ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ತ, ರಾಜು ಹಾಗೂ ಜ್ಯೋತಿ ಶುಕ್ರವಾರ ಬೆಳಗಿನಿಂದಲೇ ಪರಾರಿಯಾಗಿದ್ದು ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಎಂದು ಸ್ತ್ರೀಶಕ್ತಿ ಸಂಘದ ಲಲಿತಮ್ಮ, ಅನಸೂಯ, ಕಾವೇರಿ, ಜಯಮ್ಮ, ಮಂಜುನಾಥ್, ಸಂತೋಷ್ ಹಾಗೂ ಇತರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಗೆ ನೇಮಕ
ಅರಕಲಗೂಡು: ಇಲ್ಲಿನ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಅರಕಲಗೂಡು ಶಾಖೆಯ ಅಧ್ಯಕ್ಷರಾಗಿ ಎಸ್.ಕೆ. ವಿಶ್ವನಾಥ್ ಮತ್ತು ಕಾರ್ಯದರ್ಶಿಯಾಗಿ ಕಿರಣ್ ಕುಮಾರ್ ನೇಮಕಗೊಂಡಿದ್ದಾರೆ.
ಪತ್ನಿ ಕೊಲೆ ಮಾಡಿ ಪರಾರಿ
ಆಲೂರು: ತಾಲೂಕಿನ ತಾಳೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ದೊಣ್ಣೆ ಯಿಂದ ಹೋಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ನೆಡೆದಿದೆ. ಜ್ಯೋತಿ (40) ಎಂಬಾಕೆಯೇ ಕೊಲೆಗೀಡಾದ ಮಹಿಳೆಯಾಗಿದ್ದು, ಈಕೆಯ ಗಂಡ ವೀರೇಶ್ ಎಂಬಾತ ಕೊಲೆ ಮಾಡಿದ್ದು, ಮದ್ಯ ವ್ಯಸನಿಯಾಗಿದ್ದ ಜ್ಯೋತಿ ಪ್ರತಿ ದಿನ ವಿಪರೀತ ಕುಡಿದು ಗ್ರಾಮದಲ್ಲಿ ತೂರಾಡುತ್ತ ಓಡಾಡಿ ರಾತ್ರಿ ವೇಳೆಯಲ್ಲಿ ಮನೆಗೆ ಬರುತ್ತಿದ್ದಳು. ಈ ಸಂಬಂಧವಾಗಿ ಹಲವರು ಬಾರಿ ಗಂಡ ಹೆಂಡತಿಯ ನಡುವೆ ಗಲಾಟೆ ಆಗಿತ್ತು. ಗುರವಾರ ಸಹ ವಿಪರೀತ ಕುಡಿದ್ದಿದ್ದ ಈಕೆ ಮನೆಗೆ ಬಂದಾಗ ಗಂಡನು ಸಹ ಕುಡಿದಿದ್ದ. ಇಬ್ಬರ ನಡುವೆ ಜಗಳ ಪ್ರಾರಂಭವಾಗಿ ಗಂಡ ವೀರೇಶ ದೊಣ್ಣೆ ಇಂದ ಮನಸೋ ಇಚ್ಚೆ ಥಳಿಸಿದ ಪರಿಣಾಮ ಈಕೆ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ದೂರಲಾಗಿದೆ. ಪಟ್ಟಣ ಪೋಲಿಸರು ಅರೋಪಿ ವೀರೇಶ್‌ನನ್ನು ಬಂದಿಸಿದ್ದಾರೆ.