ಕಾಂಗ್ರೆಸ್‌ನಿಂದ ದೇಶದ ಖಜಾನೆ ಲೂಟಿ: ಎಚ್‌ಡಿಕೆ
ಬೇಲೂರು: ಕಳೆದ ಹತ್ತು ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರ ಹಲವಾರು ಹಗರಣಗಳನ್ನು ನಡೆಸಿ ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿಸಿ ದೇಶದ ಖಜಾನೆಯನ್ನು ಲೂಟಿ ಹೊಡೆದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ಜನಸಾಮಾನ್ಯರು ಕಂಗಾಲಾಗುವಂತೆ ಮಾಡಿದೆ. ಈ ಚುನಾವಣೆಯಲ್ಲಿ ಜನತೆಯೇ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೇಲೂರಿನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಜನತೆ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರನ್ನು ರಾಜಕೀಯವಾಗಿ ಪ್ರಬಲರನ್ನಾಗಿ ಮಾಡಿದ್ದಾರೆ. ಇದನ್ನು ಎಂದೂ ಮರೆಯದ ದೇವೇಗೌಡರು ರೈತರ, ಬಡವರ ದೀನ ದಲಿತರ ಪರವಾಗಿ ಅಭಿವೃದ್ದಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ ಎಂದರು. ನರೇಂದ್ರ ಮೋದಿ ಮುಖ್ಯ ಮಂತ್ರಿಯಾಗಿ 15ವರ್ಷಗಳ ಕಾಲ ಆಡಳಿತ ನಡೆಸಿದ್ದರೂ ಸಾಮಾಜಿಕ ಸಮಾನತೆ ಆರ್ಥಿಕ ಅಭಿವೃದ್ಧಿಯಲ್ಲಿ ವೈಫಲ್ಯ ಹೊಂದಿದ್ದಾರೆ ಎಂದ ಅವರು, ನಾನು ಮುಖ್ಯಮಂತ್ರಿಯಾಗಿ 18 ತಿಂಗಳ ಅವಧಿಯ ಆಡಳಿತದಲ್ಲಿ ತಂದ ಜನಪರ ಯೋಜನೆಗಳು ಜನಪ್ರಿಯವಾಗಿದ್ದು ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.
ಬಿಜೆಪಿ ಕಾರ್ಪೋರೇಟ್ ವಲಯಗಳಿಂದ ಹಣ ಸಂಗ್ರಹ ಮಾಡಿ ಅಬ್ಬರದ ಪ್ರಚಾರ ಮಾಡುವ ಮೂಲಕ ಜನತೆಯನ್ನು ವಂಚಿಸುತ್ತಿದ್ದು, ರಾಜ್ಯದಲ್ಲಿ ಮೋದಿಯ ಅಲೆ ಎಲ್ಲೂ ಇಲ್ಲ ಎಂದು ಲೇವಡಿ ಮಾಡಿದರು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ 12 ಸ್ಥಾನ ಗೆಲ್ಲಲಿದ್ದು, 1996 ಇತಿಹಾಸ ಮರುಕಳಿಸಲಿದೆ ಎಂದ ಅವರು ಕಾಂಗ್ರೆಸ್ ಮತ್ತು ಬಿಜೆಪಿ ದೇಶದಲ್ಲಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ತೃತೀಯ ರಂಗ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ತೊ.ಚ. ಅನಂತಸುಬ್ಬರಾಯ, ಮುಖಂಡರಾದ ಕೆ.ಎಸ್.ಲಿಂಗೇಶ್, ಸಿ.ಎಸ್.ಪ್ರಕಾಶ್, ಎಂ.ಎ.ನಾಗರಾಜು, ಚಂದ್ರೇಗೌಡ, ಜಿ.ಟಿ.ಇಂದಿರಾ, ಆರ್.ಎಸ್ ಪ್ರಸನ್ನಕುಮಾರ್, ತಜಮುಲ್ಪಾಷಾ, ಪುರಸಭೆ ಅಧ್ಯಕ್ಷ ಗಿರೀಶ್, ಸದಸ್ಯರಾದ ಚನ್ನಕೇಶವ ಬಿ.ಡಿ. ಶ್ರೀನಿಧಿ ಇದ್ದರು.