ಲೋಕ ಅದಾಲತ್: 7 ಸಾವಿರ ವ್ಯಾಜ್ಯಇತ್ಯರ್ಥ
ಕನ್ನಡಪ್ರಭ ವಾರ್ತೆ, ಹಾಸನ. ಏ 12
ಲೋಕ ಅದಾಲತ್ ಕಾರ್ಯಕ್ರಮ ನಿರಂತರವಾಗಿ ನಡೆಯಲಿದ್ದು, ಈವರೆಗೆ ಸುಮಾರು 7 ಸಾವಿರದಷ್ಟು ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬೋಪಯ್ಯ ತಿಳಿಸಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಲೋಕ ಅದಾಲತ್ನಲ್ಲಿ ಹೆಚ್ಚಿನದಾಗಿ ಅಪಘಾತ ಪ್ರಕರಣಗಳು, ಸಿವಿಲ್ ಪ್ರಕರಣಗಳು, ಸಾಂಸಾರಿಕ ಪ್ರಕರಣಗಳು ಹಾಗೂ ರಾಜಿ ಪಂಚಾಯ್ತಿಯಂತಹ ಪ್ರಕರಣಗಳು ಹೆಚ್ಚಾಗಿ ಬಂದಿದ್ದು, 7181 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದರು.
218 ಅಪಘಾತ ಪ್ರಕರಣಗಳು, 31 ಕೌಟುಂಬಿಕ ಕಲಹ (ಗಂಡನಿಂದ ಹೆಂಡತಿಗೆ ಜೀವನಾಂಶ), 700 ಸಿವಿಲ್ ಪ್ರಕರಣಗಳು, 810 ರಾಜಿ ಪಂಚಾಯ್ತಿ ಪ್ರಕರಣಗಳು, 518 ಚೆಕ್ ಬೌನ್ಸ್ನಂತಹ ಪ್ರಕರಣಗಳು, 4245 ಕ್ರಿಮಿನ ಪ್ರಕರಣಗಳು, 18 ಸಿವಿಲ್ ಪರಿಹಾರ ನೀಡುವ ಪ್ರಕರಣಗಳು, 531 ಬ್ಯಾಂಕ್ ವಿಚಾರಕ್ಕೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಈವರೆಗೆ ಸುಮಾರು 7181 ಪ್ರಕರಣಗಳು ಇತ್ಯರ್ಥವಾಗಿವೆ. ಪ್ರತಿನಿತ್ಯ ಜನರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದರು. ಅಪಘಾತದ 218 ಪ್ರಕರಣಗಳಲ್ಲಿ ಸುಮಾರು 2,64,61,200 ರು.ಗಳ ಪರಿಹಾರ ಲಭ್ಯವಾಗಿದೆ.
ಇನ್ನು ಬ್ಯಾಂಕ್ ಕಲಸಕ್ಕೆ ಸಂಬಂಧಿಸಿದಂತೆ 7 ಕೋಟಿ ರು.ನಷ್ಟು ಹಣದ ಸಮಸ್ಯೆ ಬಗೆ ಹರಿದಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು. ಈ ಮೂಲಕ ಜಿಲ್ಲೆ ಅತೀ ವೇಗವಾಗಿ ರಾಜಿ ಪಂಚಾಯ್ತಿ ಪ್ರಕರಣಗಳನ್ನು ಮುಗಿಸಿದ್ದು, ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದರು.ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಸರಸ್ವತಿ ಕೌಸುಂದರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಇದ್ದರು.
ಮತದಾನ ಪ್ರತಿಯೊಬ್ಬರ ಹಕ್ಕು: ಗುಳ್ಳಯ್ಯ
ಬೇಲೂರು: ಲೋಕಸಭಾ ಚುನಾವಣೆ ಏ.17ರಂದು ನಡೆಯಲಿದ್ದು, ಅಂದು ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕಾದ ಮತವನ್ನು ಚಲಾಯಿಸಬೇಕು ಎಂದು ನೋಡಲ್ ಅಧಿಕಾರಿ ಗುಳ್ಳಯ್ಯ ತಿಳಿಸಿದರು.
ಪಟ್ಟಣದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು. ಸರ್ವ ಮತದಾರರಿಗೂ ಕಡ್ಡಾಯವಾಗಿ ಮತದಾನ ಮಾಡುವ ಹಕ್ಕಿದೆ, ಆದರೆ ಕೆಲವರು ಮತದಾನದ ಹಕ್ಕಿದ್ದರೂ ಮತದಾನ ಮಾಡುವುದಿಲ್ಲ, ಮತ್ತು ಕೆಲವರು ಮತದಾನದಿಂದ ವಂಚಿತರಾಗುತಿದ್ದಾರೆ. ಆದ್ದರಿಂದ ಚುನಾವಣಾ ಆಯೋಗದ ನಿರ್ದೇಶನದಂತೆ ಬೇಲೂರು ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲೂ ಮತದಾನದ ಅರಿವು ಮತ್ತು ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪಂಚಾಯಿತಿಗಳಲ್ಲಿ ಮತದಾನದ ಬಗ್ಗೆ ಅರಿವು ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಈಗಾಗಲೆ ಎಲ್ಲಾ ಅಧಿಕಾರಿಗಳಿಗೆ ಆದೇಶಕಳುಹಿಸಲಾಗಿದೆ. ಮತದಾನದ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಬ್ಬ ಮತದಾರರ ಮನೆ ಬಾಗಿಲುಗಳಿಗೆ ತೆರಳಿ ಮತದಾನದ ಬಗ್ಗೆ ತಿಳಿಸಿ ಮತ ಚಲಾಯಿಸುವಂತೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ನೌಕರರು ಮತದಾನದ ಅರಿವು ಮತ್ತು ಜನಜಾಗೃತಿ ಜಾಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.