ಎರಡು ಬಾರಿ ಛೀಮಾರಿ ಹಾಕಿಸಿಕೊಂಡ ಮೊದಲ ಸಿಎಂ
ಅರಸೀಕೆರೆ: ನರೇಂದ್ರ ಮೋದಿಯವರನ್ನು ನರಹಂತಕ ಎಂದು ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ಆಯೋಗದಿಂದ ಎರಡು ಬಾರಿ ಛೀಮಾರಿ ಹಾಕಿಸಿಕೊಂಡ ದೇಶದ ಮೊದಲ ಸಿಎಂ ಆಗಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಿಂದ ಬಸವೇಶ್ವರ ವೃತ್ತದವರೆಗೆ ರೋಡ್ ಶೋ ನಡೆಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ತಪ್ಪುಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ಬಿ.ಎಸ್.ಯಡಿಯೂರಪ್ಪ ಹಾಗೂ ಶ್ರೀರಾಮುಲು ಬಿಜೆಪಿಗೆ ಮರಳಿದ್ದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಎಂದರು.
ರಾಜ್ಯಾದ್ಯಂತ ಮೋದಿ ಅಲೆ ಹಾಗೂ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಸದಾನಂದಗೌಡರ ಅಭಿವೃದ್ಧಿ ಕಾರ್ಯಗಳು ಶ್ರೀ ರಕ್ಷೆಯಾಗಿದ್ದು 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಲೋಕಸಭಾ ಚುನಾವಣೆಯ ನಂತರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಎಲ್ಲಿರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳಲಿದ್ದು ಕಾಂಗ್ರೆಸ್‌ಗೆ ಈಗಾಗಲೇ ನಡುಕ ಶುರುವಾಗಿದೆ. ಆದ್ದರಿಂದಲೇ ಡಿ.ಕೆ.ಶಿವಕುಮಾರ್ ಹೊಂದಾಣಿಕೆಯ ಮಾತನಾಡುತ್ತಿದ್ದಾರೆ. ಇಂತಹವರಿಗೆ ನಾಚಿಕೆಯಾಗಬೇಕು. ಬಿಜೆಪಿಯ ಹೊಂದಾಣಿಕೆ ಏನಿದ್ದರೂ ಸುಸಂಸ್ಕೃತ ಮತದಾರರೊಂದಿಗೆ, ರೈತರೊಂದಿಗೆಯೇ ಹೊರತು ಇಂತಹ ದುಷ್ಟ ಶಕ್ತಿಗಳೊಂದಿಗೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು.
ಭ್ರಷ್ಟಾಚಾರದ ಆರೋಪ ಹೊತ್ತಿರುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್‌ಗೂ ರೋಷನ್ ಬೇಗ್ ಅವರನ್ನು ಸೇರಿಸಿಕೊಂಡಿದ್ದಾದರೂ ಏಕೆ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಭಯವೇ ಅಥವಾ ಅಂತಹ ಬೆದರಿಕೆ ವರಿಷ್ಠರಿಂದ ಬಂದಿತ್ತೇ ಎಂದು ಪ್ರಶ್ನಿಸಿದರು. ಎಲ್ಲಾ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮಿತ್ರ ಪಕ್ಷ 272 ಸ್ಥಾನಗಳನ್ನು ಪಡೆದು ಭಾರತದ ಆಡಳಿತ ಸೂತ್ರವನ್ನು ಹಿಡಿಯಲಿದೆ. ಇಂತಹ ಸಂದರ್ಭದಲ್ಲಿ ಹಾಸನ ಜಿಲ್ಲೆಯಿಂದ ನರೇಂದ್ರ ಮೋದಿ ಬಲಪಡಿಸಲು ವಿಜಯ್ ಶಂಕರ್ ಅವರನ್ನು ಜಯಶಾಲಿಯನ್ನಾಗಿ ಮಾಡಲು ಕಾರ್ಯಕರ್ತರು ಪಣ ತೊಟ್ಟು ಮನೆಮನೆಗೆ ತೆರಳಿ ಮತದಾರರ ಮನವೊಲಿಸಿ ನರೇಂದ್ರ ಮೋದಿಯವರ ಸಾಧನೆಯನ್ನು ಮನದಟ್ಟು ಮಾಡಬೇಕೆಂದು ಕರೆ ನೀಡಿದರು.
ಪಾಕಿಸ್ತಾನ, ಚೀನಾ ರಾಷ್ಟ್ರಗಳು ಭಾರತ ಶಕ್ತಿಹೀನ ರಾಷ್ಟ್ರವೆಂದು ಆಟವಾಡುತ್ತಿದ್ದು ಪಾಕಿಸ್ತಾನಿ ಸೈನಿಕರು ಭಾರತ ಸೈನಿಕರ ರುಂಡವನ್ನು ಚೆಂಡಾಡಿದರೂ, ಆ ಬಗ್ಗೆ ಖಂಡಿಸುವಂತಹ ಶಕ್ತಿ ಈ ದೇಶದ ಆಡಳಿತ ಸೂತ್ರವನ್ನು ಹಿಡಿದವರಿಗೆ ಇಲ್ಲ. ಇದು ಮತದಾರರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರಿಗೆ ವರದಾನವಾಗಲಿದೆ. ಇನ್ನೆರಡು ತಿಂಗಳು ಬಿಟ್ಟು ಪಾಕಿಸ್ತಾನ, ಭಾರತದ ಸೈನಿಕರ ರೋಮವನ್ನು ಮುಟ್ಟಲು ಬಿಡುವುದಿಲ್ಲ ಎಂದರು.