ಕಾಂಗ್ರೆಸ್ ಬೆಂಬಲಿಸಲು ಮನವಿ
ಬೇಲೂರು: ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಎ.ಮಂಜು ಪರ ಬೇಲೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಜಾಮಾಲಾ ಮಾತನಾಡಿ, ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೇಸ್ ನಾಯಕತ್ವದ ಯುಪಿಎ ಸರ್ಕಾರ ದೇಶದಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯಲಿದ್ದು ಬಡವರ, ದಲಿತರ, ಹಿಂದುಳಿದವರ ಏಳಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಯೋಜನೆ ರೂಪಿಸಿದ್ದಾರೆ ಎಂದರು. ಇದರ ಫಲವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಈ ಬಾರಿ ಗೆಲ್ಲಿದ್ದು ಕ್ಷೇತ್ರದ ಜನರು ಅವರನ್ನು ಅತ್ಯಧಿಕ ಮತದಿಂದ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪುರಸಭೆ ಸದಸ್ಯ ಬಿ.ಎಲ್.ಧರ್ಮೇಗೌಡ, ಅರುಣ್ಕುಮಾರ್ ಕಾಂಗ್ರೆಸ್ ಮುಖಂಡರಾದ ಎನ್.ಅನಂತು, ಸತ್ಯನಾರಾಯಣ, ಯಮಸಂದಿ ಮಹೇಶ, ತೀರ್ಥಂಕರ್, ಇಸ್ಮಾಯಿಲ್, ಸಲೀಂ ಇದ್ದರು
ಜಾಗರವಳ್ಳಿಯಲ್ಲಿ ಮತದಾನ ಜಾಗೃತಿ
ಹಾಸನ: ಸ್ವೀಪ್ ಸಮಿತಿವತಿಯಿಂದ ತಾಲೂಕಿನ ಜಾಗರವಳ್ಳಿ ಗ್ರಾಮಪಂಚಾಯ್ತಿಯ ಆವರಣದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ತಾಲೂಕು ನೋಡಲ್ ಅಧಿಕಾರಿ ಹಾಗೂ ಸಹಾಯಕ ಯೋಜನಾಧಿಕಾರಿ ಟಿ. ಶಿವಣ್ಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅರ್ಹ ಪ್ರತಿಯೊಬ್ಬ ಮತದಾರರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೋಳ್ಳುವುದರ ಮೂಲಕ ಈ ಅವಕಾಶವನ್ನು ಸದುಪಯೋಗಿಸಿಕೊಳ್ಳಲು ಎಲ್ಲಾ ಅರ್ಹ ಮತದಾರರು ಮುಂದಾಗಬೇಕೆಂದು ತಿಳಿಸಿದರು.ಸ್ವೀಪ್ ಸಮಿತಿಯ ಸದಸ್ಯರು ಹಾಗೂ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕೃಷ್ಣಪ್ಪ ಮಾತನಾಡಿ, ಆಸೆ ಆಕಾಂಕ್ಷೆಗಳಿಗೆ ಒಳಗಾಗದೆ ನಿರ್ಭಿತಿಯಿಂದ ಮತದಾನ ಮಾಡಲು ಮುಂದಾಗಬೇಕೆಂದರು. ಇದೇ ಸಂದರ್ಭದಲ್ಲಿ ಮತದಾರರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಜಾಗರವಳ್ಳಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ಜಾಗರವಳ್ಳಿಯ ಪಂಚಾಯ್ತಿ ವ್ಯಾಪ್ತಿಯಲ್ಲಿನ ನಾನಾ ಸಂಘ ಸಂಸ್ಥೆಗಳ ಸದಸ್ಯರು, ಪಂಚಾಯ್ತಿ ಸಿಬ್ಬಂದಿ ವರ್ಗದವರು ಇದ್ದರು.