'ಮತದಾನ ಹಕ್ಕು ಚಲಾಯಿಸಬೇಕು'
ಆಲೂರು: ನಮ್ಮ ಸಂವಿಧಾನ ನೀಡಿರುವ ಮತ ಚಲಾವಣೆಯ ಹಕ್ಕನ್ನು ಪ್ರತಿಯೊಬ್ಬ ಮತದಾರರು ಬಳಸಿಕೊಳ್ಳಬೇಕು ಯಾರ ಒತ್ತಡಕ್ಕೂ ಮಣಿಯದೆ ಆಸೆ ಹಾಗೂ ಆಮಿಷಕ್ಕೆ ಬಲಿಯಾಗದೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ತಹಸೀಲ್ದಾರ್ ಆರ್. ಮಹದೇವಯ್ಯ ಮತದಾರರಿಗೆ ಸಲಹೆ ನೀಡಿದರು.
ತಾಲೂಕು ಆಡಳಿತ ಏರ್ಪಡಿಸಿದ್ದ ಮತದಾನ ಜಾಗೃತಿ ಪಂಜಿನ ಮೆರವಣಿಗೆಗೆ ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿ, ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ನಮ್ಮ ರಾಷ್ಟ್ರದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ನೂರಕ್ಕೆ ನೂರರಷ್ಟು ಮತದಾರರು ಪಾಲ್ಗೊಳ್ಳದಿರುವುದು ವಿಷಾದದ ಸಂಗತಿಯಾಗಿದೆ. ಅದರಲ್ಲೂ ಪ್ರಜ್ಞಾವಂತ ಮತಕಟ್ಟೆಗೆ ತೆರಳಿ ಮತದಾನ ಮಾಡದಿರುವುದು ವಿಷಾದದ ಸಂಗತಿ ಎಂದು ಅಸಮದಾನ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೋಂಡಿವೆ. ಅದೇ ರೀತಿ ಪಟ್ಟಣದ ಹನ್ನೊಂದು ವಾರ್ಡ್‌ಗಳಲ್ಲಿ ಪಂಜಿನ ಮೆರವಣಿಗೆ ನೆಡೆಸಿ, ಭಿತ್ತಿಪತ್ರಗಳನ್ನು ಹಂಚುವ ಮೂಲಕ ಹಾಗೂ ಧ್ವನಿವರ್ಧಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ತಾಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸೌಮ್ಯಲತ, ಎಚ್.ಎಸ್.ಚಂದ್ರಶೇಖರ್, ಎ.ಟಿ.ಮಲ್ಲೇಶ್, ಎಚ್.ಎಸ್.ಶರ್ಮಾ, ಇತರರಿದ್ದರು.
ಮತದಾನ ಪ್ರತಿಯೊಬ್ಬರ ಹಕ್ಕು
ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಮತವನ್ನು ಚಲಾಯಿಸಬೇಕು ಎಂದು ಎಬಿವಿಪಿ ಕಾರ್ಯಕರ್ತ ಶರತ್ ತಿಳಿಸಿದರು. ಅವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನದ ಜಾಗೃತಿ ಮೂಡಿಸಿ ಮಾತನಾಡಿ ದೇಶಕ್ಕೆ ಉತ್ತಮ ಪ್ರಧಾನಿ ಅಗತ್ಯವಿರುವ ಹಿನ್ನೆಲೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಯೋಚಿಸಿ ಮತ ಚಲಾಯಿಸಿ, ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ತಮ್ಮ ಮತವನ್ನು ಮಾರಿಕೊಳ್ಳದೆ ಉತ್ತಮ ಅಭ್ಯರ್ಥಿಗೆ ಮತಚಲಾಯಿಸಿ ಎಂದರು.