ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೋದಿ ಎಲ್ಲಾ ಸಮುದಾಯದ ಜನರಿಗೆ ರಕ್ಷಣೆ ನೀಡಲಿ: ದೇವೇಗೌಡ

Srinivasa Murthy VN
Updated On : 14 Apr 2014, 1:18 am

ಕನ್ನಡಪ್ರಭ ವಾರ್ತೆ ಹಾಸನ ಏ. 13
ನರೇಂದ್ರ ಮೋದಿ ಅವರು ಮೊದಲು ಅವರ ರಾಜ್ಯದ ಎಲ್ಲಾ ಸಮುದಾಯ ಮತ್ತು ಧರ್ಮದ ಜನರಿಗೆ ರಕ್ಷಣೆ ನೀಡಲಿ, ನನಗೆ ನನ್ನ ಕುಟುಂಬದವರು, ನನ್ನ ರಾಜ್ಯದ ಜನತೆ ರಕ್ಷಣೆ ನೀಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿರುಗೇಟು ನೀಡಿದ್ದಾರೆ.
ಮೋದಿ ಸ್ಪಷ್ಟ ಬಹುಮತ ಪಡೆದು ಪ್ರಧಾನಿಯಾದರೇ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಹೇಳಿದ್ದ ಗೌಡರ ಹೇಳಿಕೆಗೆ ಮೋದಿ ಅವರು, ಗೌಡರು ನನ್ನ ರಾಜ್ಯಕ್ಕೆ ಬಂದರೆ ಸೂಕ್ತ ರಕ್ಷಣೆ ನೀಡುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಭಾನುವಾರ ಚನ್ನರಾಯಪಟ್ಟಣದಲ್ಲಿ ಭಾನುವಾರ ತೀಕ್ಷ್ಣವಾಗಿ  ಪ್ರತಿಕ್ರಿಯಿಸಿದ ಗೌಡರು, ನನಗೆ ರಕ್ಷಣೆ ಕೊಡಲು ಮೋದಿ ಯಾರು ಎಂದು ಪ್ರಶ್ನಿಸಿದರು.
ಗುಜರಾತ್‌ನಲ್ಲಿ ನಡೆದ ಘೋರ ಘಟನೆ ಹಿನ್ನೆಲೆಯಲ್ಲಿ ಯಾವ ದೇಶಕ್ಕೂ ಹೋಗಲೂ ಮೋದಿಯವರಿಗೆ ಅನುಮತಿ ಸಿಗುತ್ತಿಲ್ಲ. ಇಂಥಹ ಸ್ಥಿತಿ ದೇಶದ ಯಾವ ಮುಖ್ಯಮಂತ್ರಿಗಳಿಗೂ, ದೇಶದ ಪ್ರಜೆಗಳಿಗೆ ಬಂದಿಲ್ಲ. ನಾನು ಪ್ರಧಾನಿಯಾಗಿದ್ದಾಗ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ನೀಡಲಾಯಿತು. ಇದರಿಂದ ಸಾವಿರಾರು ಮಂದಿ ದೇಶ, ವಿದೇಶಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಥ ಕೆಲಸವನ್ನು ಮೋದಿ ಅವರು ಮಾಡಬೇಕು ಎಂದು ಹೇಳಿದರು.

ಮೋದಿ ಪತ್ನಿ ಬಗ್ಗೆ ಮಾತನಾಡಬಾರದು
ಮೋದಿ ಅವರ ಪತ್ನಿ ವಿಚಾರ ಸಾರ್ವಜನಿಕ ಚರ್ಚೆಯ ವಿಷಯವಾಗಬಾರದು. ಅಲ್ಲದೇ ರಾಜಕೀಯ ವಸ್ತುವೂ ಆಗಬಾರದು. ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾಗಾಂಧಿ ಅವರ ಕೈ ಕೊಂಬೆಯಾಗಿದ್ದರು ಎಂದು ಪ್ರಧಾನಿ ಮಾಧ್ಯಮ ಕಾರ್ಯದರ್ಶಿ ಸಂಜಯ ಬಾರು ಅವರ ಬರೆದಿರುವ ಕೃತಿಯಲ್ಲಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆಗಿದ್ದು ಆಗಿ ಹೋಗಿದೆ. ಈಗ ಆ ಬಗ್ಗೆ ಪೋಸ್ಟ್‌ಮಾರ್ಟಂ ನಡೆಸಿ ಪ್ರಧಾನಿ ಕಚೇರಿಗೆ ಅಗೌರವ ತೋರಿಸಬಾರದು ಎಂದು ಗೌಡರು ಹೇಳಿದರು.

ನನ್ನನ್ನು ಬೈಯದಿದ್ದರೇ ಕುರ್ಚಿ ಅಲುಗಾಡುತ್ತೆ
ಈ ದೇವೇಗೌಡನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೈಯದಿದ್ದರೇ ಕುರ್ಚಿ ಅಲುಗಾಡುತ್ತೆ. ಅದಕ್ಕಾಗಿ ಬೈದರೇ ಏನೂ ಮಾಡಲಿಕ್ಕೆ ಆಗಲ್ಲ. ಮೂಲ ಕಾಂಗ್ರೆಸಿಗರು ಶಕ್ತಿಹೀನರಾಗಿದ್ದು, ಅವರು ನನ್ನನ್ನು ಬೈಯಲು ಮುಖ್ಯಮಂತ್ರಿಗಳನ್ನು ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement