ಸೋನಿಯಾ ಹೆಸರಲ್ಲಿ ಜೀವಿಸುವವರು ಟೀಕೆ ಮಾಡ್ತಾರೆ
ಚನ್ನರಾಯಪಟ್ಟಣ: ಇಂದಿರಾಗಾಂಧಿ, ಸೋನಿಯಾಗಾಂಧಿ ಅವರ ಹೆಸರನ್ನು ಹೇಳಿಕೊಂಡು ಬದುಕುವವರು ನನ್ನ ವಿರುದ್ಧ ಕೀಳುಮಟ್ಟದ ಭಾಷಣ ಮಾಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ರಾಜ್ಯ ಕಾಂಗ್ರೆಸ್ ಮುಖಂಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಟ್ಟಣದ ಶ್ರೀ ವಿನಾಯಕ ಕಾರು ನಿಲ್ದಾಣದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಗೌಡರು, ನನ್ನನ್ನು ರಾಜಕೀಯವಾಗಿ ಮುಗಿಸಲೇಬೇಕೆಂದು ಪಣ ತೊಟ್ಟಂತೆ ಇರುವ ಮಹಾಶಯರು ಮನಸ್ಸಿಗೆ ತೋಚಿದಂತೆ ಅಸಹ್ಯಕರ ರೀತಿಯಲ್ಲಿ ಟೀಕಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಕಾಲದಲ್ಲಿ ಉತ್ತರಿಸುವುದಲ್ಲದೇ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು. ನರೇಂದ್ರ ಮೋದಿ ನೇತೃತ್ವದಲ್ಲಿ 276 ಸ್ಥಾನ ಗಳಿಸಿ ಕೇಂದ್ರದಲ್ಲಿ ಸರ್ಕಾರ ರಚಿಸಿದರೆ ತಾವು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಪುನರುಚ್ಚರಿಸಿದ ದೇವೇಗೌಡರು, ಗುಜರಾತ್ ರಾಜ್ಯದಲ್ಲಿ ರೈತರ ಅಲ್ಪಸಂಖ್ಯಾತರ ಹಿತ ಕಾಪಾಡಲು ಮುಂದಾಗದ ವ್ಯಕ್ತಿಯೋರ್ವನನ್ನು ದೇಶದ ಪ್ರಧಾನಿಯಾಗಿ ಒಪ್ಪಿಕೊಳ್ಳಲಿಕ್ಕೆ ಆಗದು. ಗೋಧ್ರಾ ಹತ್ಯಾಕಾಂಡದ ಪ್ರಮುಖ ವ್ಯಕ್ತಿಯನ್ನು ದೇಶ ಪ್ರಧಾನಿ ಮಾಡಲು ಸಾಧ್ಯವಿಲ್ಲ. ಅವರನ್ನು ಪ್ರಧಾನಿ ಎಂದರೆ ತಲೆ ತಗ್ಗಿಸುವ ವಿಚಾರವಾಗಿದ್ದು, ರಾಜ್ಯವಾಳಿದ ಮಾತ್ರಕ್ಕೆ ಜಾತ್ಯಾತೀತ ರಾಷ್ಟ್ರವನ್ನಾಳುವ ಶಕ್ತಿ ಮೋದಿಯಲ್ಲಿ ಇಲ್ಲ ಎಂದು ತಿಳಿಸಿದರು.
ಶಾಸಕ ಸಿ.ಎನ್ ಬಾಲಕೃಷ್ಣ, ಜಿಲ್ಲಾ ಪಂಚಾಯ್ತಿ ಸದಸ್ಯೆ ಕುಸುಮಾ ಬಾಲಕೃಷ್ಣ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಹೇಮಾವತಿ, ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ ಹಾಗೂ ಇತರರು ಇದ್ದರು.
ವಿದೇಶದಿಂದ ಹೊರಗೆ
ಗೋಧ್ರಾ ಘಟನೆಯನ್ನ ಮನಗಂಡ ನೆರೆ ರಾಷ್ಟ್ರಗಳು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ವ್ಯಕ್ತಿಗೆ ಯಾವ ರಾಷ್ಟ್ರಕ್ಕೆ ಹೋಗಲು ಅವಕಾಶವಿದೆ ಎಂಬುದನ್ನು ತಿಳಿಯಬೇಕಿದೆ. ನೆರೆ ರಾಷ್ಟ್ರಗಳು ಅವರಿಗೆ ವೀಸಾ ನೀಡಿಲ್ಲ. ಇಂತಹ ಕೋಮುವಾದಿ ತಮ್ಮ ರಾಷ್ಟ್ರದಲ್ಲಿ ಅವಕಾಶವಿಲ್ಲವೆಂದು ತಿರಸ್ಕಾರ ಮಾಡಿರುವುದರಿಂದ ಯಾವ ರಾಷ್ಟ್ರ ಕೂಡ ವ್ಯವಹರಿಸುತ್ತದೆ. ಮೊದಲು ದೇಶದ ಜನತೆ ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಪ್ರಧಾನಿಯಾಗುವವರಿಗೆ ಹೊರ ದೇಶಗಳ ಸಂಪರ್ಕ ಅತ್ಯಗತ್ಯವಾಗಿದೆ. ಅದನ್ನು ಕಡಿತಗೊಳಿಸಿಕೊಂಡಿರುವವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದು ಕೀಳು ಮಟ್ಟದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಶಾಂತಿ ಮತ್ತು ಕೋಮುಗಲಭೆಯಿಂದ ದೂರವಿಡಬೇಕಾದರೆ ಬಿಜೆಪಿಯನ್ನು ತಿರಸ್ಕರಿಸಿ ಎಂದು ಮನವಿ ಮಾಡಿದರು.
ವಿವೇಕಾನಂದರ ಭಾವಚಿತ್ರ
ಹಿಂದಿನಿಂದಲೂ ಬಿಜೆಪಿ ತಾನು ರಾಜಕೀಯವಾಗಿ ಮುಂದೆ ಬರಲು ರಾಮಜನ್ಮಭೂಮಿ ವಿಚಾರವನ್ನು ಮುಂದಿಟ್ಟುಕೊಂಡು ದೇಶದಲ್ಲಿ ಕೋಮುವಾದವನ್ನು ಸಾರುತ್ತಾ ರಾಜಕೀಯವಾಗಿ ಮುಂದೆ ಬಂದರೆ, ಇಂದು ದೇಶದ ಜನತೆ ಇದನ್ನು ಕಂಡು ಬೇಸತ್ತಿರುವುದರಿಂದ ಇಂದು ವಿವೇಕಾನಂದ ಅವರ ಭಾವಚಿತ್ರವನ್ನು ಮುಂದಿಟ್ಟುಕೊಂಡು ಚುನಾವಣೆಯ ಅಖಾಡಕ್ಕಿಳಿದಿದ್ದಾರೆ. ವಿವೇಕರ ಒಂದು ವಾಕ್ಯವನ್ನಾದರೂ ಮೋದಿಯವರು ಪಾಲಿಸುತ್ತಿದ್ದಾರೆಯೇ ಎಂದು ತಿಳಿಯಬೇಕಿದೆ ಎಂದು ತಿಳಿಸಿದರು. ಕೋಮುವಾದಿ ನರೇಂದ್ರ ಮೋದಿ ಅವರು ಹೋದ ಕಡೆ ಅವರ ಭಾಷಣ ಕೇಳಲು ಹಣ ನೀಡಿ ಟಿಕೆಟ್ ಖರೀದಿಸಬೇಕು. ಅದೇನು ಮನರಂಜನೆಯೇ? ಬಿಜೆಪಿ ಸಲ್ಲದ ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ಗಿಟ್ಟಿಸಲು ಹೋಗಿ ಹಿಂದೆ ಬಿದ್ದಿದ್ದಾರೆ. ಜನತೆಯಿಂದ ಹಣ ತೆಗೆದುಕೊಂಡು ಭಾಷಣ ಕೇಳುವ ಪರಿಸ್ಥಿತಿಯನ್ನು ಪಕ್ಷದ ಕೆಲವರು ಸೃಷ್ಠಿಸಿದ್ದಾರೆ ಎಂದು ತಿಳಿಸಿದರು.
ಕುಡಿಯುವ ನೀರಿಗೆ ಹೋರಾಟ
ರಾಜ್ಯದಲ್ಲಿ ಸಾಕಷ್ಟು ನದಿಗಳು ಹರಿಯುತ್ತಿದ್ದರೂ ಹಲವೆಡೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದ್ದು, ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಈ ಬಗ್ಗೆ ಮನವಿ ಮಾಡಿದರೂ ಅದನ್ನು ಬಗೆಹರಿಸಲು ಮುಂದಾಗಿಲ್ಲ.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳುವ ಮೂಲಕ ತಾವು ಮತ್ತೆ ಪ್ರಧಾನಿ ಆಗುವ ಸಾಧ್ಯತೆಗಳಿವೆ ಎಂಬ ಮುನ್ಸೂಚನೆ ನೀಡಿದರು.ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ಎ.ಎಸ್. ಶಿವರಾಜು, ದಂಡಿಗನಹಳ್ಳಿ ಹೋಬಳಿ ಚನ್ನಾಪುರ ದೇವರಾಜು ಈ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ದೇವೇಗೌಡರ ನೇತೃತ್ವದಲ್ಲಿ ಸೇರ್ಪಡೆಯಾದರು.