ಅಭಿವೃದ್ಧಿಗಾಗಿ ಮತ ನೀಡಿ
ಹಿರೀಸಾವೆ (ಚನ್ನರಾಯಪಟ್ಟಣ ತಾ.): ದೇಶ, ರಾಜ್ಯ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಜಾತ್ಯತೀತ ಜನತಾದಳಕ್ಕೆ ಓಟು ಕೊಡಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮನವಿ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಯಾವ ಹಳ್ಳಿಗೂ ಕುಡಿಯುವ ನೀರಿಲ್ಲ. ಅದಕ್ಕಾಗಿ ಸಂಸತ್ತಿನ ಮೊದಲ ಅಧಿವೇಶನ ಬಜೆಟ್‌ನಲ್ಲಿ ಮೀಸಲಿರಿಸಿ ಹಣ ಬಿಡುಗಡೆ ಮಾಡಿಸಲಾಗುವುದು ಎಂದು ಇದೇ ಸಮಯದಲ್ಲಿ ಅವರು ವಾಗ್ದಾನ ಮಾಡಿದರು.
ಹಿರೀಸಾವೆಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರ ಹಾಗೂ ರಾಜ್ಯದಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಅವುಗಳನ್ನು ಸರಿಪಡಿಸುವ ಉದ್ದೇಶದಿಂದ ನನ್ನನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಹಾಗೂ ರಾಷ್ಟ್ರದಲ್ಲಿ ಪ್ರಥಮ ಬಾರಿಗೆ ಪ್ರತಿವರ್ಗದ ಜನರಿಗೆ ಅಧಿಕಾರ ಹಂಚಿದವರು ಜನತಾ ಪಕ್ಷದವರು ಎಂಬುದನ್ನು ತಿಳಿದುಕೊಳ್ಳಿ ಎಂದು ಹೇಳಿದರು.
ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ದೇಶದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಅಂತಹವರನ್ನು ಬಿಜೆಪಿಯವರು ರಾಷ್ಟ್ರದ ಮುಂದಿನ ಪ್ರಧಾನ ಮಂತ್ರಿ ಎಂದು ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ ಮಾತನಾಡಿ, ಎಚ್.ಡಿ. ದೇವೇಗೌಡರ ಕುಟುಂಬ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯೋಚಿಸಲು ಸಮಯವೇ ಇಲ್ಲದಿರುವಾಗ ಇನ್ನು ಬೇರೆಯವರನ್ನು ಟೀಕಿಸಲು ವೇಳೆ ಇರುವುದೇ ಎಂದು ಪ್ರಶ್ನಿಸಿದರು.
ದೇಶದ ತುಂಬ ರಾಜಕಾರಣಿಗಳ ಕುಟುಂಬವೇ ತುಂಬಿರುವಾಗ ದೇವೇಗೌಡರ ಕುಟುಂಬದ ಮೇಲೇಕೆ ಬೇರೆ ಪಕ್ಷದವರಿಗೆ ಕಣ್ಣು. ನಮ್ಮ ಕುಟುಂಬ ರೈತ ಪರವಾಗಿರುವುದು ತಪ್ಪೇ? ನಾನು ಕೂಡ ಯುವಕರ ಪರವಾಗಿ ಮುಂದೆ ಬಂದಿದ್ದೇನೆ. ಬೇರೆಯವರು ಬಂದರೆ ಬೇಡ ಎನ್ನಲು ನಾನ್ಯಾರು? ಅವರೂ ಕೂಡ ಸ್ವಶಕ್ತಿಯಿಂದ ಮುಂದೆ ಬರಲಿ. ಪಕ್ಷಭೇದ ಮರೆತು ಜಾತ್ಯಾತೀತ ಜನತಾದಳಕ್ಕೆ ಓಟುಕೊಡಿ ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ ಮಾತನಾಡಿ, ದೇವೇಗೌಡರು ಜಿಲ್ಲೆಗೆ ಅಥವ ರಾಜ್ಯಕ್ಕೆ ಮೀಸಲಾದ ರಾಜಕೀಯ ವ್ಯಕ್ತಿಯಲ್ಲ ರಾಷ್ಟ್ರ ರಾಜಕೀಯದಲ್ಲಿ ಚಾಪು ಮೂಡಿಸಿಕೊಂಡಿರುವ ಒಂದು ಶಕ್ತಿ. ದೇಶದಲ್ಲಿ ಪ್ರಥಮ ಬಾರಿಗೆ 2 ರುಗೆ ಒಂದು ಕೆ.ಜಿ. ಅಕ್ಕಿ ಕೊಡಲು ಜಾರಿಗೆ ತಂದಿದ್ದು ದೇವೇಗೌಡರು. ಗೊಬ್ಬರಕ್ಕೆ ಸಬ್ಸಿಡಿ ಕೊಟ್ಟು ಕೇವಲ 350 ರು. ಗೆ ರೈತರಿಗೆ ಗೊಬ್ಬರ ಕೊಡಿಸಿದ ಹೋರಾಟಗಾರರು. ಬೆಂಗಳೂರು, ಮಂಗಳೂರು ರೈಲು ಮಾರ್ಗಕ್ಕೆ ಚಾಲನೆ ಇವರ ಹೋರಾಟ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಹಾಗೂ ಹೋಬಳಿಯ ಗಣ್ಯರು ಮತ್ತು ಸಹಸ್ರಾರು ಜನ ಪಾಲ್ಗೊಂಡಿದ್ದರು.
ಉತ್ಸಾಹವೇ ಸ್ಫೂರ್ತಿ
ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ರಾಷ್ಟ್ರ ಕಂಡಂಥ ಅಭಿವೃದ್ಧಿಯ ಹರಿಕಾರ ರೈತಶಕ್ತಿ ಎಚ್.ಡಿ. ದೇವೇಗೌಡ ಮಾತ್ರ . ಅವರ ದೇಹಕ್ಕೆ ವಯಸ್ಸಾಗಿರಬಹುದು, ಆದರೆ ಮನಸ್ಸಿಗೆ ವಯಸ್ಸಾಗಿಲ್ಲ. ಅವರ ಉತ್ಸಾಹವೇ ನಮಗೆಲ್ಲಾ ಪ್ರೇರಣೆ ಹಾಗೂ ಸ್ಪೂರ್ತಿ. ತಾಲೂಕಿನ ಅಭಿವೃದ್ಧಿಯೇ ಇವರಿಗೆ. ಆದ್ದರಿಂದ ಪಕ್ಷಭೇದ ಮರೆತು ಎಚ್.ಡಿ. ದೇವೇಗೌಡರ ಜಾತ್ಯಾತೀತ ಜನತಾದಳಕ್ಕೆ ಓಟುಕೊಡಿ ಎಂದರು.