ಕೊಣನೂರಲ್ಲಿ ಕಾಂಗ್ರೆಸ್ ಮುಖಂಡರ ಪ್ರಚಾರ
ರಾಮನಾಥಪುರ: ರಾಮನಾಥಪುರ ಸಮೀಪವಿರುವ ಕೊಣನೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಗೆಲುವಿಗಾಗಿ ಗ್ರಾಮದ ದೇವಾಲಯ ಹಾಗೂ ಮಸೀದಿಗಳಲ್ಲಿ ಇತ್ತೀಚೆಗೆ ಪೂಜೆ ಸಲ್ಲಿಸಿದರು.
ಬಳಿಕ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಪರವಾಗಿ ತಾಲೂಕು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟಣದ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಮನವಿ: ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಹಾರಂಗಿ ಮಹಾ ಮಂಡಲ ಅಧ್ಯಕ್ಷ ಸರಗೂರು ಚೌಡೇಗೌಡ ಮಾತನಾಡಿ, ಅಲ್ಪಸಂಖ್ಯಾತರ, ದೀನದಲಿತರ, ಎಲ್ಲಾ ವರ್ಗದವರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶ್ರಮಿಸುತ್ತಲೇ ಇದೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ. ಮಂಜು ಅವರನ್ನು ಬೆಂಬಲಿಸಿ ಅತ್ಯಧಿಕ ಮತಗಳ ಅಂತರದಿಂದ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ಎ.ಮಂಜು ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಿದ್ದೀರಿ. ಅದರ ಫಲವಾಗಿ ಅವರು ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ ಅಲ್ಲದೇ ತಾಲ್ಲೂಕಿನ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ರಸ್ತೆ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದಾರೆ ಎಂದು ಹೇಳಿದರು.
ಅಭಿವೃದ್ಧಿ ಕಾಣಲಿದೆ: ಚುನಾವಣೆ ಮುಗಿದ ನಂತರ ರಸ್ತೆ ಕೆಲಸ ಪ್ರಾರಂಭವಾಗಿ ಉತ್ತಮ ರಸ್ತೆಗಳಾಗುತ್ತವೆ. ಈ ರೀತಿ ಹಾಲವಾರು ಜನಪರ ಕಾರ್ಯಗಳನ್ನು ಮಾಡುತ್ತಿರುವ ಎ. ಮಂಜು ಅವರನ್ನು ಸಂಸದರಾಗಿ ಆಯ್ಕೆ ಮಾಡಿದ್ದೇ ಆದರೆ ಕೇವಲ ತಾಲ್ಲೂಕು ಅಲ್ಲದೇ ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಾಣಲಿದೆ ಹಾಗಾಗಿ ಈ ಬಾರಿ ಬದಲಾವಣೆ ತಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ. ಮಂಜು ಅವರನ್ನು ಆಯ್ಕೆ ಮಾಡಿ ಎಂದು ಮತದಾರರಲ್ಲಿ ಕೋರಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣ, ಸದಸ್ಯ ಆಪಲ್ ನಾಗರಾಜ್, ಗಣೇಶ್, ಮುಖಂಡರಾದ ಚಾಯ್ಸ್ ಸತೀಶ, ಕೆ.ಎಸ್. ನಾಗರಾಜ್, ಅಪ್ಪಾಸ್ವಾಮಿಗೌಡ, ಪುಟ್ಟರಾಜು, ಕ್ಯಾಂಟೀನ್ ಚಂದ್ರಣ್ಣ, ವಾಸುದೇವ ಕೆ.ಎಸ್. ಶಾಬಾಂಜ್, ಇಸ್ರಾರ್, ಅಬ್ರಾರ್, ಜಾಕೀರ್, ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಬೊಮ್ಮನಹಳ್ಳಿ ಕೃಷ್ಣ, ತಾಲೂಕು ಯುವ ಕಾಂಗ್ರೆಸ್ ಕಾರ್ಯದರ್ಶಿ ಹಂಡ್ರಂಗಿ ದಿಲೀಪ, ಅಬ್ಬೂರು ಶೇಖರ ಇನ್ನೂ ಹಲವರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.