ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತೃತೀಯ ರಂಗಕ್ಕೆ ಬೆಂಬಲ ಕಾಂಗ್ರೆಸ್‌ಗೆ ಬಿಟ್ಟದ್ದು

Srinivasa Murthy VN
Updated On : 15 Apr 2014, 12:37 pm

ಸೋನಿಯಾ ಗಾಂಧಿಗೆ ದೇವೇಗೌಡ ಪರೋಕ್ಷ ಅಹವಾಲು
ಹಾಸನ: ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ತೃತೀಯ ರಂಗಕ್ಕೆ ಬೆಂಬಲ ನೀಡುವುದು, ಬಿಡೋದು ಕಾಂಗ್ರೆಸ್‌ಗೆ ಬಿಟ್ಟಿದ್ದು. ಎಂಥ ಪರಿಸ್ಥಿತಿ ಬಂದರೂ ಮೂಲಭೂತ ವಾದಿಗಳನ್ನು ದೂರವಿಟ್ಟೇ ಆಡಳಿತ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
1996ರ ಮೇ 12ರಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ನಾವಂತೂ ಸರ್ಕಾರ ರಚಿಸುವುದಿಲ್ಲ. ಜಾತ್ಯತೀತ ಶಕ್ತಿಗಳಿಗೆ ಬೆಂಬಲ ನೀಡಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.
 ವಾಜಪೇಯಿ ಸರ್ಕಾರಕ್ಕೆ 13 ದಿನಗಳ ಮಾತ್ರ ಬೆಂಬಲ ನೀಡಿ ವಾಪಸ್ ತೆಗೆದ ಹಿನ್ನೆಲೆಯಲ್ಲಿ ಅಂದಿನ ರಾಷ್ಟ್ರೀಯ ರಂಗ ಕಾಂಗ್ರೆಸ್ ಬೆಂಬಲ ಪಡೆದು ಸರ್ಕಾರ ರಚಿಸಲು ಹಿಂದೇಟು ಹಾಕಿತು. ಆದರೆ ಮಗದೊಂದೆ ಚುನಾವಣೆ ಎದುರಿಸುವ ಕ್ಲಿಷ್ಟ ಪರಿಸ್ಥಿತಿ ತಡೆಯಲು 1996ರ ಮೇ 26ರಂದು ಕಾಂಗ್ರೆಸ್ ಬೆಂಬಲ ಪಡೆಯಲು ನಿರ್ಧರಿಸಲಾಯಿತು ಎಂದು ಗೌಡರು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಈಗಲೂ ಅಷ್ಟೇ.. ಚುನಾವಣೆ ನಂತರ ಪ್ರಾದೇಶಿಕ ಪಕ್ಷಗಳು ರಚಿಸಿಕೊಳ್ಳುವ ಒಕ್ಕೂಟವನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸೇರಿದಂತೆ ಯಾವುದಾದರೂ ಒಂದು ಬ್ಯಾನರ್ ಅಡಿ ಮುಲಾಯಂ ಸಿಂಗ್ ಯಾದವ್, ಎಡಪಕ್ಷಗಳು, ನಿತೀಶ್ ಕುಮಾರ್, ಬಿಜು ಪಟ್ನಾಯಕ್ ಮತ್ತಿತರ ಸಮಾನ ಪಕ್ಷಗಳ ನಾಯಕರು ಸೇರಿ, ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಇವತ್ತೂ ಹೇಳುತ್ತೇನೆ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್, ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.
ಇಂದಿರಾ ಆಹ್ವಾನಿಸಿದ್ದರು: ಮಾಜಿ ಪಿಎಂ ದಿವಂಗತ ಇಂದಿರಾಗಾಂಧಿ ಅವರು, ಕಮಲಾಪತಿ ತ್ರಿಪಾಠಿ ಅವರನ್ನು ನನ್ನ ಮನೆಗೆ ಕಳುಹಿಸಿ, ತಮ್ಮನ್ನು ಸಿಎಂ ಮಾಡಲಾಗುವುದು, ಪಕ್ಷಕ್ಕೆ ಬನ್ನಿ ಎಂದು ಹೇಳಿ ಕಳುಹಿಸಿದ್ದರು. ನಾನು ಹೋಗಲಿಲ್ಲ. ಸ್ವಾಭಿಮಾನಿ ಹೋರಾಟಗಾರ, ಕಟ್ಟಿದ ಗೂಡಿಗೆ ಸೇರಿಕೊಂಡು ಸವಲತ್ತುಗಳನ್ನು ಅನುಭವಿಸುವ ಅವಕಾಶವಾದಿಯಲ್ಲ. ಆದ್ದರಿಂದ ನಿರಾಕರಿಸಿದೆ. ಏನೇ ಕಷ್ಟ ಕೋಟಲೆಗಳು ಬಂದರೂ ಹೋರಾಟ ಮಾಡುತ್ತಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ಗುಡುಗಿದರು.
ಹಣಬಲ ನಡೆಯಲ್ಲ: ಈ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗಿಂತ ಹಿಂದೆ ಬೀಳಲ್ಲ. ಸರಿಸಮಾನ ಹೋರಾಟ ಮಾಡಲಾಗುವುದು. ಜೆಡಿಎಸ್ ಶಕ್ತಿ ಫಲಿತಾಂಶ ಬಂದ ನಂತರ ತಿಳಿಯುತ್ತದೆ. ಹಣ ಬಲವೊಂದರಿಂದಲೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬಿಜೆಪಿ, ಕಾಂಗ್ರೆಸ್‌ಗೆ ಈ ಚುನಾವಣೆ ಫಲಿತಾಂಶದಿಂದ ತಿಳಿಯುತ್ತದೆ. ನಾನು ಪ್ರಧಾನಿಯಾಗಿದ್ದಾಗ ಎಲ್ಲಾ ಸಮುದಾಯದ ಐಕ್ಯತೆ ಕಾಪಾಡಿದ್ದು, ದೇಶದಲ್ಲಿ ಒಂದೇ ಒಂದು ಕೋಮು ಗಲಭೆಯಾಗಲು ಬಿಟ್ಟಿಲ್ಲ. ಕಾಶ್ಮಿರದಲ್ಲಿ ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವವನ್ನು ಪುನರ್ ಸ್ಥಾಪನೆ ಮಾಡಲಾಯಿತು. ಇದಕ್ಕೆ ವಿಶ್ವಾದ್ಯಂತ ಶ್ಲಾಘನೆ ವ್ಯಕ್ತವಾಯಿತು ಎಂದರು.

'ಜಿಲ್ಲೆಯ ಪ್ರಗತಿ ತೃಪ್ತಿ ತಂದಿಲ್ಲ'
ಹಾಸನ: ಜಿಲ್ಲೆಯ ಪ್ರಗತಿಗೆ ಪೂರಕವಾಗುವಂತ ನೀರಾವರಿ, ಶಿಕ್ಷಣ ಮತ್ತು ಆರ್ಥಿಕ ಪ್ರಗತಿ ಮಾಡಲಾಗಿದ್ದು, ಆದರೆ ಅದು ನನಗೆ ಸಂಪೂರ್ಣ ತೃಪ್ತಿ ತಂದಿಲ್ಲ. ಇನ್ನೂ ಮಾಡುವುದೇ ಬೇಕಾದಷ್ಟು ಇದೆ ಎಂದು ಹಾಸನ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ. ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡರು, ನಾನೇನು ಜಿಲ್ಲೆಗೆ ಮಾಡಿದೆ ಎಂಬುದು ಜನತೆಗೆ ತಿಳಿದಿದೆ. ಪ್ರಚಾರದ ವೇಳೆ ಜನತೆಯ ಬೆಂಬಲವನ್ನು ನಿರ್ವಂಚನೆಯಿಂದ ಕೇಳಿದ್ದೇನೆ. ಆಶೀರ್ವಾದ ಮಾಡುತ್ತಾರೆ. ಯಾರ ಕಾಲದಲ್ಲಿ ಜಿಲ್ಲೆಯಲ್ಲಿ ಏನು ಅಭಿವೃದ್ಧಿಯಾಗಿದೆ ಎಂಬುದು ಬೇರೆ ಪಕ್ಷಗಳ ಮುಖಂಡರಿಗಿಂತ ಜನತೆಗೆ ಗೊತ್ತಿದೆ ಎಂದು ಹೇಳಿದರು.
ಅಧಿಕಾರ ಮತ್ತು ಹಣ ಬಲದಿಂದ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನ ನಡೆಸಲಾಗುತ್ತಿದೆ. ಹಣದಿಂದ ಯಾರು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು. ಶಾಸಕರಾದ ಎಚ್.ಎಸ್. ಪ್ರಕಾಶ್, ಪಟೇಲ್ ಶಿವರಾಂ ಇದ್ದರು.

ಸೋತಾಗಲೇ ಹೋರಾಟ ಶುರುವಾಯಿತು...
ಹಾಸನ: ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆಯಲ್ಲಿ ಸೋತಾಗಲೇ ನನ್ನ ಹೋರಾಟ ಆರಂಭವಾಯಿತು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಅವರೆಡು ಉಪ ಚುನಾವಣೆ ನಡೆದಾಗ ಜೆಡಿಎಸ್ ಮುಗಿಯಿತು. ಗೌಡ ಮುಗಿದ ಎಂದು ಭಾವಿಸಿದ್ದರು. ಜನತೆಯ ಬೆಂಬಲ ಇರೋವರೆಗೂ ಯಾರಿಂದಲೂ ಸಾಧ್ಯವಿಲ್ಲ. ಕೀಳುಮಟ್ಟದ ಭಾಷೆ ಬಳಸುವುದರಿಂದ, ಹಣದಿಂದ ಗೆಲವು ಸಾಧಿಸಲಾಗುವುದು ಎಂಬುದು ಕಾಂಗ್ರೆಸ್  ಮುಖಂಡರ ಭ್ರಮೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗಿಂತ ಹಿಂದೆ ಬೀಳಲ್ಲ. ಸರಿಸಮಾನ ಹೋರಾಟ ಮಾಡಲಾಗುವುದು. ಜೆಡಿಎಸ್ ಶಕ್ತಿ ಫಲಿತಾಂಶ ಬಂದ ನಂತರ ತಿಳಿಯುತ್ತದೆ. ಹಣ ಬಲವೊಂದರಿಂದಲೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬಿಜೆಪಿ, ಕಾಂಗ್ರೆಸ್‌ಗೆ ಈ ಚುನಾವಣೆ ಫಲಿತಾಂಶದಿಂದ ತಿಳಿಯುತ್ತದೆ.
-ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement