ದೇವೇಗೌಡರ ಬೃಹತ್ ರೋಡ್ ಶೋ
ಹಾಸನ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮೊದಲು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಹೇಮಾವತಿ ಪ್ರತಿಮೆ ಹತ್ತಿರ ತೆರಳಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಹಾಸನ ಲೋಕಸಭಾ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದ್ದು, ಜಿಲ್ಲೆಯಾದ್ಯಂತ ಮಾಜಿ ಪ್ರಧಾನಿ ಹಾಗೂ ಅಭ್ಯರ್ಥಿ ಎಚ್.ಡಿ. ದೇವೇಗೌಡರು ಅಬ್ಬರದ ಪ್ರಚಾರ ನಡೆಸಿದರು. ಸುಮಾರು ಹಾಸನ ನಗರದಲ್ಲಿ ಹಲವೆಡೆ ರೋಡ್ ಶೋ ನಡೆಸಿ ಮತ ನೀಡುವಂತೆ ಮತದಾರದಲ್ಲಿ ಮನವಿ ಮಾಡಿದರು.
ಹಲವೆಡೆ ಮತಯಾಚನೆ: ನಗರದ ಹೇಮಾವತಿ ಪ್ರತಿಮೆಯಿಂದ ರೋಡ್ ಶೋ ಪ್ರಾರಂಭಿಸಿದ ದೇವೇಗೌಡರು. ಎನ್.ಆರ್. ವೃತ್ತ, ಬಿ.ಎಂ. ರಸ್ತೆ, ಹಾಸನಾಂಬ ದೇವಸ್ಥಾನ ಬೀದಿ, ಸಂತೇಪೇಟೆ, ವಿದ್ಯಾನಗರ, ಆಡುವಳ್ಳಿ, ಸತ್ಯಮಂಗಲ ಸೇರಿದಂತೆ ಇನ್ನು ನಾನಾ ಕಡೆಗಳಲ್ಲಿ ದೇವೇಗೌಡರು ತಮ್ಮ ಅಪಾರ ಬೆಂಬಲಿಗರೊಂದಿಗೆ ಮತಯಾಚಿಸಿದರು.
ಬಿಜೆಪಿಗೆ ಬಹುಮತವಿಲ್ಲ: ನಗರದ ಪ್ರಮುಖ ಬೀದಿಗಳಲ್ಲಿ ಮಿಂಚಿನ ಪ್ರಚಾರ ನಡೆಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಈ ದೇಶದಲ್ಲಿ ಬಹುಮತ ಪಡೆಯುವುದಿಲ್ಲ.
ಎನ್ಡಿಎ ಬೆಂಬಲದಿಂದ ಮಾತ್ರ ಆಡಳಿತ ನಡೆಸಲು ಸಾಧ್ಯ ಎಂದು ಆಡ್ವಾಣಿ ಅವರೇ ಹೇಳಿದ್ದಾರೆ. ಬಿಜೆಪಿ 276 ಅತ್ಯಧಿಕ ಬಹುಮತ ಪಡೆಯುವುದಿಲ್ಲ ಹಾಗೂ ನರೇಂದ್ರ ಮೋದಿ ಅವರು ಸ್ವಂತ ಶಕ್ತಿಯಿಂದ ಪ್ರಧಾನಮಂತ್ರಿಯಾಗಲು ಸಾಧ್ಯ.
ಪ್ರಾಂತೀಯ ಪಕ್ಷಗಳ ಅವಲಂಬನೆಯಿಂದ ಮಾತ್ರ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಆಡ್ವಾಣಿ ಅವರೇ ಹೇಳಿದ್ದಾರೆ ಎಂದರು.
ಪ್ರಧಾನಿ ಅಸಹಾಯಕತೆ: ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ ಸೇರಿದಂತೆ ಇತರೆ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತಮಿಳುನಾಡಿನವರು 39 ಸಂಸದ ಸ್ಥಾನಗಳನ್ನು ಪಡೆದು ಬಂದಿದ್ದಾರೆ. ಆದ್ದರಿಂದ ಕಾವೇರಿ ವಿಚಾರದಲ್ಲಿ ಏನೂ ಮಾಡೋದಕ್ಕೆ ಆಗೋದಿಲ್ಲ ಎಂದು ಕಾಂಗ್ರೆಸ್ನವರು ಹೇಳಿದರು ಎಂದು ಕಿಡಿಕಾರಿದರು.
ಜನ ಕೈಬಿಡುವುದಿಲ್ಲ: ದೇವೇಗೌಡನ್ನು ಮುಗಿಸಬೇಕು ಅಂತ ಎಲ್ಲರೂ ಪಣ ತೊಟ್ಟಿದ್ದಾರೆ. ಆದರೆ ನನ್ನ ಜನ ನನ್ನ ಕೈ ಬಿಡುವುದಿಲ್ಲ ಎಂಬ ಅಪಾರ ನಂಬಿಕೆ ನನ್ನಲ್ಲಿ ಇದೆ. ನನ್ನ ರಾಜಕೀಯ ಜೀವನ ಆರಂಭಿಸಿದ ದಿನದಿಂದಲೂ ರೈತರು, ಬಡವರ ಪರ ಹೋರಾಟ ಮಾಡೊದಿಕ್ಕೆ ಈ ಬಾರಿಯೂ ಬೆಂಬಲಿಸಿ ಅತ್ಯಧಿಕ ಮತದಿಂದ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ಶಾಸಕ ಬಿ.ವಿ. ಕರೀಗೌಡ, ನಗರಸಭೆ ಅಧ್ಯಕ್ಷ ಶ್ರೀವಿದ್ಯಾ, ಸದಸ್ಯ ಅನಿಲ್ ಕುಮಾರ್, ಅಕ್ಬರ್, ಜಿಲ್ಲಾ ಪಂಚಾಯ್ತಿ ಸದಸ್ಯ ಸತ್ಯನಾರಾಯಣ, ಮುಖಂಡ ಕೆ.ಎಂ. ರಾಜೇಗೌಡ, ಸೈಯದ್ ಅಕ್ಬರ್ ಹಾಗೂ ಇತರರು ಇದ್ದರು.