ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳ ಆಚರಣೆ
ಹೊಳೆನರಸೀಪುರ: ದೇಶಕ್ಕೆ ತನ್ನದೇ ಆದ ಮಹತ್ವ ಹಾಗೂ ಪ್ರಭುತ್ವವುಳ್ಳ ಸಂವಿಧಾನವನ್ನು ನೀಡಿದ ಧೀಮಂತ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಎಂದು ಇಲ್ಲಿನ ತಾಪಂ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ ನುಡಿದರು.
ಚುನಾವಣಾ ನೀತಿ ಸಂಹಿತೆಯ ಕಾರಣದಿಂದಾಗಿ ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 123ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೀನ ದಲಿತರ ಉದ್ಧಾರದ ಆಶಾಭಾವನೆಯನ್ನು ಹೊಂದಿ, ಎಲ್ಲ ವರ್ಗ ಹಾಗೂ ಎಲ್ಲ ಸಮುದಾಯಗಳಿಗೂ ಸಮಾನತೆಯ ಜೀವನ ದೊರಕುವ ಕನಸುಗಳೊಂದಿಗೆ ಡಾ.ಅಂಬೇಡ್ಕರ್ ಸಂವಿಧಾನವನ್ನು ರಚಿಸಿದರು ಎಂದು ಹೇಳಿದರು. ಅಂಬೇಡ್ಕರ್ ಆದರ್ಶಯುತ ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವದಡಿಯಲ್ಲಿ ನಡೆಯುತ್ತಿರುವ ಭಾರತವು ಇಡೀ ವಿಶ್ವದಲ್ಲಿಯೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸುವ್ಯವಸ್ಥೆಯಿಂದ ನಡೆಯುತ್ತಿರುವ ರಾಷ್ಟ್ರವಾಗಿದೆ ಎಂದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸುರೇಶ್, ಪುರಸಭೆ ಮುಖ್ಯಾಧಿಕಾರಿ ಹರೀಶ್, ಲೋಕೋಪಯೋಗಿ ಇಲಾಖೆಯ ಎಇಇ ಕೋದಂಡರಾಮಯ್ಯ, ತಾ.ಪಂ ಸದಸ್ಯ ಸಿ.ಆರ್. ುಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಶಿವಮಾದಪ್ಪ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.
'ಶೋಷಿತ, ನಿರ್ಲಕ್ಷಿತ ಜನಾಂಗದ ಪ್ರತಿನಿಧಿ'
ಬೇಲೂರು: ಡಾ.ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೆ ಎಲ್ಲಾ ಶೋಷಿತ ಜನಾಂಗದ ಪ್ರತಿನಿಧಿಯಾಗಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ .ಅನಂತಸುಬ್ಬರಾಯ ಹೇಳಿದರು.
ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಸಂದರ್ಭದಲ್ಲಿ ಕೇವಲ ಒಂದು ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ರಚನೆ ಮಾಡದೆ ಎಲ್ಲಾ ಶೋಷಿತ ವರ್ಗದವರಿಗೂ ಸಾಮಾಜಿಕ ನ್ಯಾಯ ದೊರಕುವಂತೆ ಬರೆದಿದ್ದಾರೆ. ನಮ್ಮ ದೇಶದ ಸಂವಿಧಾನ ಇಡೀ ವಿಶ್ವದಲ್ಲೇ ಮಾದರಿಯಾಗಿದ್ದು ಅಗ್ರಪಂಕ್ತಿಯಲ್ಲಿದೆ ಎಂದರು. ಮಾಜಿ ತಾಪಂ ಅಧ್ಯಕ್ಷ ಎಂ. ನಾಗರಾಜ್ ಮಾತನಾಡಿದರು.
ಜಿಪಂ ಸದಸ್ಯೆ ಜಿ.ಟಿ. ಇಂದಿರಾ, ಮಾಜಿ ಸದಸ್ಯ ಸಿ.ಎಸ್. ಪ್ರಕಾಶ್, ಪುರಸಭೆ ಅಧ್ಯಕ್ಷ ಗಿರೀಶ್, ಸದಸ್ಯರಾದ ಮಂಜುನಾಥ್, ಭಾರತಿ, ಮುದ್ದಮ್ಮ, ಮಾಜಿ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್, ಆರ್. ಪ್ರಸನ್ನಕುಮಾರ್, ಹರಿಯಪ್ಪ ಹಾಗೂ ಇತರರು ಇದ್ದರು.
ಅಂಬೇಡ್ಕರ್ ಜನ್ಮದಿನ ಜಾತ್ಯತೀತವಾಗಿರಲಿ
ಆಲೂರು: ರಾಷ್ರ ನಾಯಕರ ಹುಟ್ಟುಹಬ್ಬ ಕಾರ್ಯಕ್ರಮಗಳು ಒಂದು ವರ್ಗಕ್ಕೆ ಮೀಸಲಾಗದೆ ಎಲ್ಲಾ ವರ್ಗದವರು ಜಾತ್ಯತೀತವಾಗಿ ಆಚರಿಸುವ ನಿಟ್ಟಿನಲ್ಲಿ ಸಂಘಟಿತರಾಗಿ ನಾಗರಿಕರಿಗೆ ಪ್ರಜ್ಞಾವಂತರು ಜಾಗೃತಿ ಮೂಡಿಸಬೇಕೆಂದು ತಹಸೀಲ್ದಾರ ಟಿ.ಆರ್. ಮಹದೇವಯ್ಯ ತಿಳಿಸಿದರು.
ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 123ನೇ ಜನ್ಮ ದಿನಾಚರಣೆ ಸರಳ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೀನದಲಿತರಿಗೆ ಅಂಬೇಡ್ಕರ್ ತತ್ವ ಆದರ್ಶಗಳು ಮಾದರಿಯಾಗಿದ್ದು ಮಾತ್ರವಲ್ಲ ನೊಂದವರಿಗೆ ಹೊಸ ಬದುಕನ್ನು ನೀಡಿದ ಮಹಾನ್ ವ್ಯಕ್ತಿ ಎಂದರು.
ಪರಿವರ್ತನೆಗೆ ನೆರವಾಗಬೇಕು: ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಮಾತನಾಡಿ, ಅಂಬೇಡ್ಕರ್ ಅವರನ್ನು ಯಾವುದೋ ಒಂದು ದಿನ ಸ್ಮರಿಸಿಕೊಂಡರೆ ಸಾಲದು ಅವರ ಆದರ್ಶ, ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಾಮಾಜಿಕ ಪರಿವರ್ತನೆಗೆ ನೆರವಾಗಬೇಕಿದೆ ಎಂದರು.
ತಾಲೂಕು ಡಿಎಸ್‌ಎಸ್ ಸಂಚಾಲಕ ಬಸವರಾಜ್, ಛಲವಾದಿ ಮಹಾಸಭಾ ಅದ್ಯಕ್ಷ ಎ.ಟಿ. ಮಲ್ಲೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಇಒ ಎಚ್.ಎಸ್. ಚಂದ್ರಶೇಖರ್, ಪಪಂ ಮುಖ್ಯಾಧಿಕಾರಿ ಸಿ. ವಾಸುದೇವ್, ಟಿಎಚ್‌ಒ ಆ.ಡಾ. ತಿಮ್ಮಯ್ಯ, ಜಿಲ್ಲಾ ಮಾದಿಗ ದಂಡೋರ ಉಪಾದ್ಯಕ್ಷ ವಂಕಟಯ್ಯ, ಮುಖಂಡ ಎಚ್.ಇ. ದ್ಯಾವಪ್ಪ, ಖಜಾನೆ ಅದಿಕಾರಿ ಸತೀಶ್, ಎಇಇ ಶಿವಕುಮಾರಪ್ಪ ಹಾಗೂ ಇತರರಿದ್ದರು. ಸಮಾಜ ಕಲ್ಯಾಣ ಅಧಿಕಾರಿ ಲೋಕೇಶ್ ಸ್ವಾಗತಿಸಿ ವಂದಿಸಿದರು.