ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಬ್ಬರು ರೈತರ ಬಲಿ ಪಡೆದ ರಾಜಕೀಯ ಪ್ರತಿಷ್ಠೆ

Srinivasa Murthy VN
Updated On : 16 Apr 2014, 1:12 am

-ದಯಾಶಂಕರ ಮೈಲಿ
ಹಾಸನ: 1982 ಸೆಪ್ಬೆಂಬರ್ 23...
ಆ ದಿನವನ್ನು ನೆನಸಿಕೊಂಡರೆ ಈಗಲೂ ಮೈಜುಂ ಎನಿಸಿದರೇ ಇರಲಾರದು. ಕೇವಲ ಸ್ಥಳೀಯ ಶಾಸಕರನ್ನು ಆಹ್ವಾನಿಸಿಲ್ಲ ಎಂಬ ಕ್ಷುಲ್ಲಕ ರಾಜಕೀಯ ಕಾರಣಕ್ಕೆ ನಡೆಯಬಾರದ ಘಟನೆ ನಡೆದು ಹೋಯಿತು. ಗಲಭೆ ಪೊಲೀಸರ ನಿಯಂತ್ರಣಕ್ಕೆ ಸಿಗಲಿಲ್ಲ. ಬೇರೆ ದಾರಿಯಿಲ್ಲದೇ ಪೊಲೀಸರು ಗೋಲಿಬಾರ್ ನಡೆಸಲೇಬೇಕಾಯಿತು. ಪರಿಣಾಮ ಇಬ್ಬರು ಸ್ಥಳದಲ್ಲೇ ಹತರಾದರೆ, 50ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡರು. ಅಂದು ಸಚಿವರು ಸ್ಥಳಕ್ಕೆ ಹೋಗಿದ್ದರೆ ಆಗುವ ಅಪಾಯಕ್ಕೆ ಉಹಿಸಲಿಕ್ಕೂ ಸಾಧ್ಯವಿಲ್ಲ.
ಈ ಘಟನೆ ನಡೆದಿದ್ದು ಹೊಳೆನರಸೀಪುರ ತಾಲೂಕು ದೊಡ್ಡಹಳ್ಳಿ ಗ್ರಾಮದಲ್ಲಿ.  1982 ಸೆಪ್ಟೆಂಬರ್ 23 ರಂದು ಬೆಳಗ್ಗೆ 11.30 ಕ್ಕೆ ಆ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಉದ್ಘಾಟನೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಹೊಳೆನರಸೀಪುರ ಕ್ಷೇತ್ರದಿಂದ ಜನತಾಪಕ್ಷದಿಂದ ಆಯ್ಕೆಯಾಗಿದ್ದ ಎಚ್.ಡಿ. ದೇವೇಗೌಡರು ಸರ್ಕಾರಿ ಶಿಷ್ಠಾಚಾರದ ಪ್ರಕಾರ ಸಭೆ ಅಧ್ಯಕ್ಷತೆ ವಹಿಸಬೇಕಾಗಿತ್ತು. ಆದರೆ ಆಹ್ವಾನ ಪತ್ರಿಕೆಯಲ್ಲಿ ಗೌಡರ ಹೆಸರನ್ನು ಪ್ರಿಂಟ್ ಹಾಕಿಸಿರಲಿಲ್ಲ.
ಇದು ಅಲ್ಲಿನ ಜನರಲ್ಲಿ ಆಕ್ರೋಶ ಉಂಟು ಮಾಡಿತ್ತು.  ದಿವಂಗತ ಆರ್. ಗುಂಡುರಾವ್ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದ ದಿವಂಗತ ಎಚ್.ಸಿ. ಶ್ರೀಕಂಠಯ್ಯನವರು ಕಾರ್ಯಕ್ರಮ ಉದ್ಘಾಟಕರಾಗಿದ್ದರು.  ದಿವಂಗತ ಎಚ್.ಎನ್. ನಂಜೇಗೌಡರು ಎಂಪಿ ಆಗಿದ್ದರು. ದೇವೇಗೌಡರನ್ನು ಆಹ್ವಾನಿಸಿಲ್ಲ ಎಂದು 20 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು.
ಅಪಾಯದ ಮುನ್ಸೂಚನೆಯನ್ನು ಅರಿತ ಪೊಲೀಸ್ ಗುಪ್ತದಳದ ಸಿಬ್ಬಂದಿ, ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಚಿವರು ಸಮಾರಂಭಕ್ಕೆ ಬರುವುದು ಬೇಡ ಎಂದು ಮಾಹಿತಿ ನೀಡಿದರು.
ಎಸ್ಪಿ ಸಮಯಪ್ರಜ್ಞೆ: ಅಷ್ಟೊತ್ತಿಗಾಗಲೇ ಸಹಕಾರ ಸಚಿವ ಎಚ್.ಸಿ. ಶ್ರೀಕಂಠಯ್ಯನವರು ಹೊಳೆನರಸೀಪುರ ಪ್ರವಾಸಿ ಮಂದಿರಕ್ಕೆ ಬಂದೇ ಬಿಟ್ಟಿದ್ದರು. ಇನ್ನೇನು ಸಚಿವರು ಹೊರಡಬೇಕು. ಅಷ್ಟೊತ್ತಿಗೆ ರಭಸದಿಂದ ಬಂದ ಎಸ್ಪಿ, 'ಸಾರ್,ನೀವು ಕಾರ್ಯಕ್ರಮಕ್ಕೆ ಹೋಗಬೇಡಿ.. ಅಲ್ಲಿನ ಪರಿಸ್ಥಿತಿ ಸರಿಯಿಲ್ಲ' ಎಂದು ಮನವಿ ಮಾಡಿದರು. ಆದರೂ ಹೋಗೋಣ ಎಂದು ಸಚಿವರು ಹೇಳಿದರಾದರೂ, ಎಸ್ಪಿ ಬಿಡದೇ ಪ್ರವಾಸಿ ಮಂದಿರದಲ್ಲೇ ಸಚಿವರನ್ನು ಇರುವಂತೆ ಮಾಡಿ, ಹಿಂದಕ್ಕೆ ಕಳುಹಿಸುವಲ್ಲಿ ಯಶಸ್ಸಿಯಾದರು.
ಮೃತರಾದ ಇಬ್ಬರು: ಸಚಿವರು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಿಳಿದ ಸಭೆಯಲ್ಲಿ ಇದ್ದ ಜನರು ಏಕಾಏಕಿ ಕಲ್ಲು ತೂರಾಟ ನಡೆಸಿದರು. ಪೊಲೀಸರಿಗೆ ಗಾಯಗಳಾದವು. ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಾಲ್ ಅನ್ನು ಕಿತ್ತೆಸಲಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ.  ಪೊಲೀಸರು ಟಿಯರ್ ಗ್ಯಾಸ್ ಸ್ಫೋಟಿಸಿದರು. ಅದಕ್ಕೂ ಜನ ಬಗ್ಗಲಿಲ್ಲ. ಕೊನೆಗೆ ಗೋಲಿಬಾರ್ ಮಾಡಲಾಯಿತು. ಇದರಿಂದ ಇಬ್ಬರು ರೈತರ ನೆತ್ತರು ಹರಿಯಿತು. 50 ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
ತನಿಖೆಗೆ ಆದೇಶ: ಈ ಗೋಲಿಬಾರ್ ನಡೆಯುವ ವೇಳೆ ಮಾಜಿ ಸಚಿವ ಜಿ. ಪುಟ್ಟಸ್ವಾಮಿಗೌಡ ಮತ್ತು ದೇವೇಗೌಡರು ಲವಕುಶರಂತೆ ಇದ್ದರು. ನಂತರ ದೇವೇಗೌಡರು ವಿಧಾನಸಭೆಯಲ್ಲಿ 8 ದಿನಗಳವರೆಗೆ ಗೋಲಿಬಾರ್ ಖಂಡಿಸಿ ಧರಣಿ, ಪ್ರತಿಭಟನೆ ನಡೆಸಿದರು. 1983 ರಲ್ಲಿ ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿಯಾದಾಗ ದೊಡ್ಡಹಳ್ಳಿ ಗೋಲಿಬಾರ್ ಘಟನೆಯ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚಿಸಲಾಯಿತು.
ಅಂದು ಶ್ರೀಕಂಠಯ್ಯನವರು ಬಂದಿದ್ದರೆ ಜೀವ ಸಮೇತ ಹೋಗುತ್ತಿರಲಿಲ್ಲ. ಸಚಿವರ ಕಾರಿಗೆ ಬೆಂಕಿ ಹಾಕುವ ಸಂಭವೂ ಇತ್ತು. ಅಷ್ಟರಮಟ್ಟಿಗೆ ಜನ ರೋಷಗೊಂಡಿದ್ದರು. ಎಸ್ಪಿ ದೇವರಂತೆ ಬಂದು ಸಚಿವರನ್ನು ಕಾಪಾಡಿದ. ಅದು ಶ್ರೀಕಂಠಯ್ಯನವರು ಮಾಡಿದ ತಪ್ಪಲ್ಲ. ಸ್ಥಳೀಯ ಅಧಿಕಾರಿಗಳು ಅಧಿಕಾರಸ್ಥ ರಾಜಕಾರಣಿಗಳನ್ನು ಓಲೈಸುವ ಸಲುವಾಗಿ ಎಸಗಿದ ಪ್ರಮಾದ. ಒಂದು ಚಿಕ್ಕ ತಪ್ಪು ನಡೆಯಬಾರದ ಘಟನೆಗೆ ಸಾಕ್ಷಿಯಾಗಿದ್ದು ದುರಂತ ಎನ್ನುತ್ತಾರೆ ದೊಡ್ಡಗ್ರಾಮದ ಯಜಮಾನರಾದ ಮಲ್ಲೇಶಪ್ಪನವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement