ಚುನಾವಣೆಗೆ ಹೈಟೆಕ್ ಮೆರುಗು
ಹಾಸನ: ಲೋಕಸಭಾ ಚುನಾವಣೆ ಮುಗಿಯುವವರೆಗೆ ಎಲ್ಲಾ ಬಿ.ಎಲ್.ಒ.ಗಳು ಮತಗಟ್ಟೆಯಲ್ಲಿ ಹಾಜರಿದ್ದು, ಕಾಲಕಾಲಕ್ಕೆ ಮಾಹಿತಿಗಳನ್ನು ರವಾನಿಸಿ, ಮತಗಟ್ಟೆಗಳಲ್ಲಿ ಸೂಕ್ತ ಅನುಕೂಲಗಳನ್ನು ಕಲ್ಪಿಸುವಂತೆ ಉಪವಿಭಾಗಾಧಿಕಾರಿ ಹಾಗೂ ಹಾಸನ ವಿಧಾನ ಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಶರತ್ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ (ಬಿ.ಎಲ್.ಒ.)ಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಬಿ.ಎಲ್.ಒ.ಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ಭಾರತ ಚುನಾವಣಾ ಆಯೋಗ ನೀಡಿರುವ ಗುರುತಿನ ಫಲಕಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದ ಅವರು ಚುನಾವಣೆ ಯಶಸ್ಸಿನಲ್ಲಿ ಬಿ.ಎಲ್.ಒ.ಗಳ ಹೊಣೆಗಾರಿಕೆ ಮಹತ್ತರವಾಗಿದ್ದು, ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.
ಯಾವುದೇ ಕಾರಣಕ್ಕೂ ಬೂತ್ ಮಟ್ಟದ ಅಧಿಕಾರಿಗಳು ಏ. 16, 17ರಂದು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡುವಂತಿಲ್ಲ. ನಂಬರ್ಗಳನ್ನು ಬದಲಾಯಿಸುವಂತಿಲ್ಲ. ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸ್ವೀಪ್ ಸಮಿತಿ ರೂಪಿಸಿರುವ ಸಹಾಯವಾಣಿ ಕೇಂದ್ರಕ್ಕೆ ಹಾಗೂ ಚುನಾವಣಾ ಆಯೋಗ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ಮತಗಟ್ಟೆ ಹಂತದಲ್ಲಿ ಅಗತ್ಯವಿರುವ ಇತರ ನೆರವುಗಳನ್ನು ಒದಗಿಸಬೇಕು ಎಂದರು.
ಜಿಲ್ಲಾ ವಾರ್ತಾಧಿಕಾರಿ ಹಾಗೂ ಸ್ವೀಪ್ ನೋಡಲ್ ಅಧಿಕಾರಿ, ವಿನೋದ್ ಚಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಹಾಸನ ತಹಸೀಲ್ದಾರ್ ಮಂಜುನಾಥ್, ತರಬೇತಿ ವೇಳೆ ಬಿ.ಎಲ್.ಒ.ಗಳಿಗೆ ಮಾಹಿತಿ ನೀಡಿದರು.
ಕ್ಯೂ ಮಾಹಿತಿ: ಪ್ರತಿ ಮತಗಟ್ಟೆಯತ್ತ ಸೆಳೆಯಲು ಅಧಿಕಾರಿಗಳು ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಆಯಾಯ ಮತಗಟ್ಟೆಯಲ್ಲಿ ಮತದಾರರು ನಿಂತಿರುವ ಸರದಿ ಸಾಲಿನಲ್ಲಿ ಎಷ್ಟು ಮಂದಿ ಇದ್ದಾರೆ ಎಂಬ ಮಾಹಿತಿಯನ್ನು ಮತದಾರರ ಅನುಕೂಲಕ್ಕಾಗಿ ಸ್ಥಾಪಿಸಲಾಗುವ ಮಾಹಿತಿ ಕೇಂದ್ರಕ್ಕೆ ಎಸ್.ಎಂ.ಎಸ್. ರವಾನಿಸಲಿದ್ದಾರೆ. ಮತದಾರರು 9664172929 ಸಂಖ್ಯೆಗೆ ಡಿ.ಜಿ.ಒ. ಎಚ್.ಎಸ್.ಎನ್. (ಉಊಕಏಖಃ) ಎಂದು ಟೈಪ್ ಮಾಡಿ ಸ್ಪೇಸ್ ನೀಡಿ ತಮ್ಮ ಮತಗಟ್ಟೆ ಸಂಖ್ಯೆ ನಮೂದಿಸಿ, ಎಸ್.ಎಂ.ಎಸ್. ಮಾಡಿದರೆ ಆ ಮತಗಟ್ಟೆಯ ಹೆಸರು ಮತ್ತು ಮತಗಟ್ಟೆಯಲ್ಲಿ ಮತದಾರರ ಸರದಿಯಲ್ಲಿ ಹಾಲಿ ಇರುವ ಮತದಾರರ ಸಂಖ್ಯೆ ಎಷ್ಟು ಎಂಬ ಸಂದೇಶ ರವಾನೆಯಾಗಲಿದೆ. ಕಡಿಮೆ ಸರದಿ ಇದ್ದಾಗ ಮತಗಟ್ಟೆಗೆ ತೆರಳಿ ಮತದಾರ ಮಾಡಲು ಇದರಿಂದ ಅನುಕೂಲವಾಗಲಿದೆ. ಸ್ಥಳೀಯ ಅಮೋಘ ಕೇಬಲಲ್ವಾಹಿನಿಯಲ್ಲಿ ಈ ಮಾಹಿತಿಯನ್ನು ಸ್ಕ್ರಾಲಿಂಗ್ ಮೂಲಕ ನೀಡಲಾಗುವುದು. ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಮಾಹಿತಿ ಅಪ್ಲೋಡ್ ಆಗಲಿದೆ.
ಮೈಸೂರಿನ ಸಪ್ತಾ ಟೆಕ್ನೋ ಸಾಫ್ಟ್ ಇಂಡಿಯಾ ಪ್ರೈ.ಲಿ. ಸಂಸ್ಥೆಯು ಇದಕ್ಕಾಗಿ ಸ್ವೀಪ್ ಸಮಿತಿಗೆ ತಾಂತ್ರಿಕ ನೆರವು ಒದಗಿಸುತ್ತದೆ.
ಎಸ್.ಎಂ.ಎಸ್. ಮೂಲಕ ಮಾಹಿತಿ ದೊರೆಯುವುದರಿಂದ ಕಡಿಮೆ ಮಂದಿ ಇರುವ ಸಂದರ್ಭ ಹೋಗಿ ಮತದಾನ ಮಾಡಲು ಅನುಕೂಲವಾಗಲಿದೆ ಎಂಬುದು ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಹಾಗೂ ಸ್ವೀಪ್ ಸಮಿತಿ, ಅಧ್ಯಕ್ಷರು ಯು.ಪಿ. ಸಿಂಗ್ ಅವರ ಅಭಿಪ್ರಾಯವಾಗಿದೆ ಸಾರ್ವಜನಿಕರು, ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ.
ಎಸ್.ಎಂ.ಎಸ್ ಸೇವೆ
ಮತದಾನದಿಂದ ದೂರ ಉಳಿಯುವ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಚುನಾವಣಾಧಿಕಾರಿಯವರು ಜಿಲ್ಲಾ ಸ್ವೀಪ್ ಸಮಿತಿಯ ಮೂಲಕ ವಿನೂತನ ಸೇವೆಗೆ ಮುಂದಾಗಿದ್ದಾರೆ. ಹಾಸನ ನಗರದಲ್ಲಿ ಈ ಬಾರಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರುವ ನಿರ್ಧರಿಸಲಾಗಿದೆ.