ಬಿರುಗಾಳಿಗೆ ಉರುಳಿದ ತೆಂಗಿನ ಮರ, ಮನೆ ಜಖಂ
ಅರಸೀಕೆರೆ: ಬಿರುಗಾಳಿ ಸಹಿತ ಮಳೆಗೆ ತೆಂಗಿನ ಮರವೊಂದು ಮನೆಯ ಮೇಲೆ ಉರುಳಿ ಬಿದ್ದಿದ್ದು ಮನೆಯಲ್ಲಿದ್ದ ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಹಿರಿಸಾದರಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಹಿರಿಸಾದರಹಳ್ಳಿ ಎಚ್.ಎನ್. ಮಹಾಲಿಂಗಪ್ಪ ಎಂಬುವವರಿಗೆ ಸೇರಿದ ಮನೆಯ ಮೇಲೆ ಜಯಣ್ಣ ಎಂಬುವವರಿಗೆ ಸೇರಿದ ಈ ಮರ ಗಾಳಿಯ ಹೊಡೆತಕ್ಕೆ ಬುಡಸಮೇತ ಉರುಳಿ ಬಿದ್ದಿದೆ. ಇದರಿಂದಾಗಿ ಮನೆಯ ಸುಮಾರು 500ಕ್ಕೂ ಹೆಂಚುಗಳು ಪುಡಿ ಪುಡಿಯಾಗಿವೆ. ಅಲ್ಲದೇ ಸೂರು ನಿರ್ಮಿಸಲು ಹಾಕಲಾಗಿದ್ದ ಮರದ ಕಂಟಿಗಳು ಕೂಡ ಜಖಂಗೊಂಡಿವೆ.
ಗ್ರಾಮಸ್ಥರ ಅಸಮಾಧಾನ
ಘಟನೆ ಜರುಗಿ ದಿನ ಕಳೆದರೂ ಸಂಬಂಧಿಸಿದ ಗ್ರಾಮ ಪಂಚಾಯತಿ ಅಧಿಕಾರಿಗಳಾಗಲಿ, ಅಥವಾ ಕಂದಾಯ ಅಧಿಕಾರಿಗಳಾಗಲಿ ಇತ್ತ ಆಗಮಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಕೂಡಲೇ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಹಾನಿಗೊಂಡಿರುವ ಮನೆ ಮಾಲೀಕರಿಗೆ ಸೂಕ್ತ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದ್ದಾರೆ.