ಯುವ ಒಲವೇ ವರದಾನ
ಅರಸೀಕೆರೆ: ನರೇಂದ್ರ ಮೋದಿಯ ಅಲೆ ದೇಶಾದ್ಯಂತ ಬೀಸುತ್ತಿದ್ದು ಅದು ಹಾಸನ ಜಿಲ್ಲೆಗೂ ಸಹ ವ್ಯಾಪಿಸಿದೆ. ಪರಿಣಾಮ ಯುವಕ, ಯುವತಿಯರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಇದು ತಮಗೆ ವರದಾನವಾಗಿ ಪರಿಣಮಿಸಿ, ವಿಜಯಶಾಲಿ ಆಗುತ್ತೇನೆ ಎಂಬ ವಿಶ್ವಾಸವನ್ನು ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದ ಅವರು ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ತಾವು ಕ್ಷೇತ್ರಾದ್ಯಂತ ಪ್ರವಾಸ ಮಾಡಿದ್ದು ಎಲ್ಲೆಡೆ ಕಾರ್ಯಕರ್ತರು ಒಗ್ಗಟ್ಟಿನಿಂದ ತಮ್ಮನ್ನು ಬೆಂಬಲಿಸುವ ಮೂಲಕ ಶಕ್ತಿ ತುಂಬಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ಪುತ್ರಿ ಚಂದ್ರಪ್ರಭಾ ಅರಸ್ ಅವರನ್ನು ಸೋಲಿಸಿ ಶಾಸಕನಾಗಿ, ಮೈಸೂರು ಮಹಾರಾಜರನ್ನು ಸೋಲಿಸಿ ಸಂಸದನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೆ. ಅದೇ ರೀತಿ ಪ್ರಭಾವಿಗಳನ್ನು ಸೋಲಿಸಿ ಈ ಬಾರಿಯೂ ಗೆಲ್ಲುತ್ತೇನೆಂಬ ಭರವಸೆಯಿದೆ ಎಂದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ರಸ್ತೆಗಳ ಜೋಡಣೆ, ಸರ್ವಶಿಕ್ಷಣ ಅಭಿಯಾನ, ಗ್ರಾಮ ಸಡಕ್ ಯೋಜನೆ, ಸ್ವಜಲಧಾರ, ಚತುಷ್ತಥ ಹೆದ್ದಾರಿಗಳ ನಿರ್ಮಾಣ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಆದರೆ, ಅವರ ಕನಸಾದ ಅಂತಾರಾಜ್ಯ ನದಿ ಜೋಡಣೆ ಕನಸಾಗಿಯೇ ಉಳಿದಿದೆ. ಇದನ್ನು ಸಾಕಾರಗೊಳಿಸಬೇಕಾದರೆ ಮತದಾರರು ಬಿ.ಜೆ.ಪಿಯನ್ನು ಬೆಂಬಲಿಸಬೇಕು ಎಂದರು.
ಜನಪ್ರತಿನಿಧಿಗಳ ವೈಫಲ್ಯ: ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಪ್ರದೇಶ ಹೊಂದಿರುವ ಅರಸೀಕೆರೆ ಕ್ಷೇತ್ರ ರಾಜ್ಯದಲ್ಲೇ ವಿಶಿಷ್ಟವಾದ ಕ್ಷೇತ್ರ. ಮಳೆಯನ್ನಾಧರಿಸಿದ ಕೃಷಿ ಭೂಮಿ ಇದಾಗಿದ್ದು, ಕುಡಿಯುವ ನೀರಿಗೂ ಹಾಹಾಕಾರಪಡುವ ಪರಿಸ್ಥಿತಿ ಇಲ್ಲಿನ ಜನರಿಗೆ ಎದುರಾಗಿದೆ. ಅನೇಕ ಭಾಗಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ಈವರೆಗೆ ಆಡಳಿತ ನಡೆಸಿರುವ ಜನಪ್ರತಿನಿಧಿಗಳು ಜನರ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲರಾಗಿರುವುದು ಎದ್ದು ಕಾಣುತ್ತಿದೆ ಎಂದು ಅವರು ತಾಲೂಕಿನ ಸ್ಥಿತಿಗತಿಗಳನ್ನು ವಿವರಿಸಿದರು.
ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ತಾವು ಉತ್ಸುಕರಾಗಿದ್ದು, ಜನರು ತಮಗೆ ಈ ಬಾರಿ ಆ ಅವಕಾಶ ನೀಡಲಿದ್ದಾರೆಂಬ ಆಶಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ದೇಶದ ಆಂತರಿಕ ಭದ್ರತೆಗೆ ಆತಂಕ ಎದುರಾಗಿದೆ. ಸಮಸ್ಯೆ ಸವಾಲುಗಳು ತಾಂಡವವಾಡುತ್ತಿದ್ದು ಇವುಗಳ ನಿರ್ಮೂಲನೆಗೆ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮಾತ್ರ ಸಾಧ್ಯವಿದೆ ಎಂಬ ಅಭಿಪ್ರಾಯ ಮತದಾರರಲ್ಲಿ ಬೇರೂರಿದ್ದು ಅದು ತಮಗೆ ವರದಾನವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎ.ಎಸ್. ಬಸವರಾಜು, ಗುರುದೇವ್, ಜಿ.ಪಂ. ಮಾಜಿ ಅದ್ಯಕ್ಷೆ ರೇಖಾ ಹುಲಿಯಪ್ಪಗೌಡ, ಬಿ.ಜೆ.ಪಿ ವಕ್ತಾರ ಎನ್.ಡಿ. ಪ್ರಸಾದ್, ಬಿ.ಜೆ.ಪಿ ಅಧ್ಯಕ್ಷ ರೇಣುಕುಮಾರ್, ತಾ. ಅಧ್ಯಕ್ಷ ಹರಳಕಟ್ಟ ರಮೇಶ್, ಹಾರನಹಳ್ಳಿ ಸಿದ್ದಪ್ಪ, ಗಂಜಿಗೆರೆ ಬಸವರಾಜು, ತಾ.ಪಂ ಸದಸ್ಯ ಬಾಣಾವರ ಜಯಣ್ಣ, ರಾಜ್ಯ ಮುಖಂಡ ವಿಜಯ್ ವಿಕ್ರಮ್, ದಿನೇಶ್, ನಗರಾಧ್ಯಕ್ಷ ಹಿರಿಯಣ್ಣ, ವಕ್ತಾರ ವೈ.ಕೆ.ದೇವರಾಜ್, ಉಮಾ ಕುಮಾರ್, ಶೈಲಜಾ, ಸುವರ್ಣ, ಕೆಂಪಮ್ಮ ಹಾಗೂ ಇನ್ನಿತರರು ಇದ್ದರು.