6 ತಿಂಗಳಲ್ಲಿ ನೀರಾವರಿ
ಚನ್ನರಾಯಪಟ್ಟಣ: 20ವರ್ಷದಿಂದ ನೆನೆಗುದಿಗೆ ಬಿದ್ದಿರುವ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯಿಂದ ಮುಂದಿನ 6ತಿಂಗಳಲ್ಲಿ ನೀರೆತ್ತುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ತಿಳಿಸಿದರು.
ತಾಲೂಕಿನ ಉದಯಪುರದಲ್ಲಿ ತಮ್ಮ ಪರ ಯಾಚನೆ ಮಾಡಿ ಮಾತನಾಡಿ ಕಳೆದ 20 ವರ್ಷದಿಂದ ನೆನೆಗುದಿಗೆ ಬಿದ್ದಿರುವ ಕಾಚೇನಹಳ್ಳಿ ಏತ ನೀರಾವರಿ ಯೋಜನೆಗೆ ಅಗತ್ಯ ಹಣ ನೀಡಿ ಮುಂದಿನ 6ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉಧ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದರು.
ಕರ್ತವ್ಯ: 20 ವರ್ಷಗಳ ಹಿಂದೆ ಪುಟ್ಟಸ್ವಾಮಿಗೌಡ ಅವರು ಕಾಮಗಾರಿಗೆ ಚಾಲನೆ ನೀಡಿದರೆಂಬ ಕಾರಣದಿಂದ ದಂಡಿಗನಹಳ್ಳಿ ಹೋಬಳಿಯ ಜನತೆಯನ್ನು ನೀರಿಲ್ಲದೆ ಬರಗಾಲದಲ್ಲಿ ದೇವೇಗೌಡ ಮತ್ತು ಅವರ ಮಕ್ಕಳು ಜನತೆಯನ್ನು ಪರಿತಪಿಸುವಂತೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಂದ ಕಾಮಗಾರಿಗೆ ಹಣ ನೀಡಿಸಿ ಕಾಮಗಾರಿ ಪೂರ್ಣಗೊಳಿಸುವುದು ತಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಮುಂದಿನ ಯಾವುದೇ ಚುನಾವಣೆ ವೇಳೆಗೆ ದಂಡಿಗನಹಳ್ಳಿ ಜನತೆಯ ಮುಂದೆ ಬರುವಷ್ಟರಲ್ಲಿ ಈ ಭಾಗದ ಜನತೆ ಕೇಳುತ್ತಿರುವ ಕುಡಿಯುವ ನೀರು ಹಾಗೂ ಏತ ನೀರಾವರಿ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದರು.
ರಾಜ್ಯ ಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಜ್ಜೇಗೌಡ ಇದ್ದರು.