ಅರಕಲಗೂಡಿಗೆ ಮತಯಂತ್ರಗಳ ರವಾನೆ
ಅರಕಲಗೂಡು: ಇಲ್ಲಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 285 ಮತಕಟ್ಟೆಗಳಿಗೆ ಮತಯಂತ್ರಗಳು ಬುಧವಾರ ಮಧ್ಯಾಹ್ನದ ವೇಳೆಗೆ ರವಾನೆಗೊಂಡವು. ಬೆಳಗಿನಿಂದಲೇ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೇರಿದ್ದ ಎಲ್ಲಾ ಚುನಾವಣಾ ಸಿಬ್ಬಂದಿಗಳಿಗೆ ಅವರ ಮತಕಟ್ಟೆಗಳನ್ನು ನಿಯೋಜನೆಗೊಳಿಸಿ ಕಳುಹಿಸಿಕೊಡಲಾಯಿತು.ಸಹಾಯಕ ಚುನಾವಣಾಧಿಕಾರಿ ಡಾ. ಜಗದೀಶ್ ಕುಮಾರ್ ಅವರ ನೇತೃತ್ವದಲ್ಲಿ ಚುನಾವಣಾ ಸಿದ್ದತೆ ಕಾರ್ಯ ವ್ಯವಸ್ಥಿತವಾಗಿ ನೆರವೇರಿತು. ಬಹುತೇಕ ಎಲ್ಲಾ ಮತಕೇಂದ್ರಗಳೂ ಮತದಾನಕ್ಕೆ ಸಿದ್ಧವಾಗಿದ್ದು, ಯಾವುದೇ ಗೊಂದಲಕ್ಕೂ ಕಾರಣವಿಲ್ಲದ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದು ಅವರು ಕನ್ನಡಪ್ರಭಕ್ಕೆ ತಿಳಿಸಿದರು.
ಇಲ್ಲಿನ ವಿಧಾನಸಭಾ ಕ್ಷೇತ್ರದ ಎಲ್ಲಾ ಮತ ಕೇಂದ್ರಗಳಲ್ಲಿ ಗುರುವಾರ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆ ವರೆಗೆ ಮತದಾನಕ್ಕೆ ವ್ಯವಸ್ಥೆಗೊಳಿಸಲಾಗಿದೆ. ಕ್ಷೇತ್ರದಲ್ಲಿ 2 ಲಕ್ಷದ 3 ಸಾವಿರದ 211 ಮತದಾರರಿದ್ದು, 1,5,146 ಪುರುಷ ಮತದಾರರು ಮತ್ತು 98,054 ಮಹಿಳಾ ಮತದಾರರಿದ್ದಾರೆ. ಇತರೆ 11 ಮಂದಿ ಇದ್ದಾರೆ. ಅತ್ಯಂತ ಸೂಕ್ಷ್ಮ ಮತ್ತು ಕಠಿಣ ಮತಕಟ್ಟೆಗಳು-21, ಅತಿ ಸೂಕ್ಷ್ಮ ಮತಕಟ್ಟೆಗಳು-23, ಸೂಕ್ಷ್ಮ ಮತಕಟ್ಟೆಗಳು-114 ಮತ್ತು ಸಾಮಾನ್ಯ ಮತಕಟ್ಟೆಗಳು -114 ಇದ್ದು, ಮತಕಟ್ಟೆಗಳಲ್ಲಿ ಅಕ್ರಮಗಳು ನಡೆಯದಂತೆ ಹಾಗೂ ಕಟ್ಟೆಚ್ಚರ ವಹಿಸಿದ್ದು, ಈ ಸಂಬಂಧ 70 ವಿಡಿಯೋ ಕ್ಯಾಮರಾ ಸೇರಿದಂತೆ ಸಿಸಿ ಕ್ಯಾಮರಾ ಗಳನ್ನು ಅಳವಡಿಸಲಾಗಿದೆ. ಕ್ಷೇತ್ರದಲ್ಲಿ 38 ಅಂತರ ರಾಜ್ಯ ಪೊಲೀಸರು ಕರ್ತವ್ಯದಲ್ಲಿ ಭಾಗಿಗಳಾಗಿದ್ದಾರೆ. ಹೆಚ್ಚುವರಿಯಾಗಿ ಓರ್ವ ಡಿಎಸ್ಪಿ,ಇಬ್ಬರು ಸರ್ಕಲ್ ಇನ್ಸ್ಪೆಕ್ಟರ್ಗಳು ಮತ್ತು ಓರ್ವ ಹೆಚ್ಚುವರಿ ಪಿಎಸ್ಐ ನಿಯೋಜನೆಗೊಂಡಿದ್ದಾರೆ.
ಸನ್ನದ್ಧವಾದ ಅರಸೀಕೆರೆಯ 275 ಮತಗಟ್ಟೆಗಳು
ಅರಸೀಕೆರೆ: ಅರಸೀಕೆರೆ ವಿಧಾನಸಭಾ ಕ್ಷೇತ್ರದ 275 ಮತಗಟ್ಟೆಗಳಲ್ಲಿ 1,01,721 ಪುರುಷರು ಹಾಗೂ 1,01,687 ಮಹಿಳೆಯರು, ಇತರೆ 24 ಮತದಾರರು ಸೇರಿದಂತೆ ಒಟ್ಟು 2,03,432 ಮತದಾರರು, ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಶಕೀಲ್ ಅಹಮದ್ ಬುಧವಾರ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಸಂತಮೇರಿ ಶಾಲೆಯಲ್ಲಿ ಚುನಾವಣಾ ಮತಗಟ್ಟೆಗಳ ಅಧಿಕಾರಿಗಳ ನಿಯೋಜನೆ ಕಾರ್ಯದಲ್ಲಿ ಭಾಗಿಯಾಗಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿನ ವಿಧಾನಸಭಾ ವ್ಯಾಪ್ತಿಗೆ ಸೇರಿದಂತೆ ಮತದಾರರ ಅಂಕಿ ಅಂಶಗಳು, ಮತಗಟ್ಟೆಗಳ ವಿವರ, ಮತಗಟ್ಟೆ ಸಿಬ್ಬಂದಿ ತರಬೇತಿ, ಚುನಾವಣಾ ಕಾರ್ಯಕ್ಕೆ ಎಂದು ಬಳಸಲಾಗುವ ವಾಹನಗಳ ಸೇವೆ, ಮತದಾರರ ಚೀಟಿ ಹಂಚಿಕೆ ವಿಷಯ ಕುರಿತಂತೆ ಮಾಹಿತಿ ನೀಡಿದರು.
ಇಲ್ಲಿನ ವಿಧಾನಸಭಾ ಕ್ಷೇತ್ರದ 275 ಮತಗಟ್ಟೆಗಳಲ್ಲಿ ಸೂಕ್ಷ್ಮ 50, ಅತಿ ಸೂಕ್ಷ್ಮ 37, ಹಾಗೂ ವಾರ್ನಬಲ್ 14 ಎಂದು ಗುರುತಿಸಲಾಗಿದ್ದು, ಇದಕ್ಕೆ ಅನುಸಾರವಾಗಿ ಪ್ರತಿಯೊಂದು ಮತಗಟ್ಟೆಗಳಿಗೂ ಸೂಕ್ತವಾದ ಪೊಲೀಸ್ ರಕ್ಷಣೆಯನ್ನು ಏರ್ಪಡಿಸಲಾಗಿದೆ. ಮತಗಟ್ಟೆ ಸಿಬ್ಬಂದಿಗಳ ನೇಮಕದಲ್ಲಿ 305 ಮಂದಿ ಪಿ.ಆರ್.ಓ, 305 ಮಂದಿ ಎಪಿಆರ್ಒ ಹಾಗೂ 610 ಮಂದಿ ಪೋಲಿಂಗ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ತಹಸೀಲ್ದಾರ್ ನಟರಾಜ್ ಹಾಗೂ ಚುನಾವಣಾ ಶಿರಸ್ತೇದಾರ್ ಶಿವಶಂಕರ್ ಸಭೆಯಲ್ಲಿ ಉಪಸ್ಥಿತರಿದ್ದರು.