ಜಾವಗಲ್‌ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಜಾವಗಲ್: ಜಾವಗಲ್ ಹೋಬಳಿಯ ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಡಾ. ಬಿ,ಆರ್. ಅಂಬೇಡ್ಕರ್ ಅವರ 123ನೇ ಜಯಂತಿಯನ್ನು ಆಚರಿಸಲಾಯಿತು. ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಉಪ ಪ್ರಾಂಶುಪಾಲ ಯೋಗೀಶ್ ಮತ್ತು ಶಿಕ್ಷಕ ವರ್ಗ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಉಪ ಪ್ರಾಂಶುಪಾಲ ಯೋಗೀಶ್ ಮಾತನಾಡಿ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾದ ಭಾರತದ ಸಂವಿಧಾನದ ಶಿಲ್ಪಿಯಾಗಿ ದೇಶದ ಪ್ರಗತಿಗೆ ಭದ್ರ ಬುನಾದಿ ಹಾಕಿ ಕೊಟ್ಟ ಮಹಾನ್ ಚೇತನ ಅಂಬೇಡ್ಕರ್ ಅವರ ಆದರ್ಶ ಜೀವನ ನಮ್ಮೆಲ್ಲರಿಗೂ ದಾರಿ ದೀಪವಾಗಬೇಂದರು. ಶಿಕ್ಷಕರಾದ ಪುಟ್ಟಶಂಕರಪ್ಪ, ಚಂದ್ರೇಗೌಡ, ರಾಮಲಿಂಗಯ್ಯ, ಮರಳುಸಿದ್ದಪ್ಪ, ಶಿವಲಿಂಗಮೂರ್ತಿ, ಮಮತ, ವಿದ್ಯಾ, ಸೌಮ್ಯ, ಸುನಂದ ಭಾಗವಹಿಸಿದ್ದರು.
ಪುಷ್ಪಾರ್ಚನೆ ಮಾಡಿದ ಶಿವಣ್ಣ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಶಿವಣ್ಣ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಸಂವಿಧಾನ ಶಿಲ್ಪಿ, ಜ್ಞಾನಿ, ಸ್ವಾಭಿಮಾನಿಯಾಗಿದ್ದ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಿ, ಅವರ ಕನಸನ್ನು ನನಸು ಮಾಡಿದಾಗ ಅವರ ಜನ್ಮ ದಿನ ಆಚರಿಸಿದ್ದಕ್ಕೆ ಅರ್ಥ ಸಿಗುತ್ತದೆ ಎಂದರು. ಶಿಕ್ಷಕರಾದ ದಾನೇಗೌಡ, ಧರ್ಮಪ್ಪ, ಸರಸ್ವತಿ, ಸರ್ವಮಂಗಳ ಇದ್ದರು. ಜಾವಗಲ್ ಗ್ರಾಪಂ ಕಚೇರಿಯಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆ ಆಚರಿಸಲಾಯಿತು.
'ಸಮಾನತೆ ತಂದ ಅಂಬೇಡ್ಕರ್'
ಸಕಲೇಶಪುರ: ಸಂವಿಧಾನದ ರಚನೆಯ ಮೂಲಕ ಸಮಾನತೆ ತಂದು ಕೊಟ್ಟವರು ಡಾ. ಬಾಬಾ ಸಾಹೆಬ್ ಅಂಬೇಡ್ಕರ್ ಎಂದು ಉಪ ವಿಭಾಗಾಧಿಕಾರಿ ಡಾ. ಮಧುಕೇಶ್ವರ್ ಅಭಿಪ್ರಾಯಿಸಿದರು. ಅವರು ಇತ್ತೀಚೆಗೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 123 ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆಯ ಅವಕಾಶ ಸಿಗಬೇಕು ಎಂಬ ನಿಟ್ಟಿನಲ್ಲಿ ವಿಶ್ವದಲ್ಲಿಯೇ ಸರ್ವಶ್ರೇಷ್ಠವಾದ ಸಮಾನತೆಯ ಸಂವಿಧಾನವನ್ನು ಕೊಟ್ಟ ಮಹಾಪುರುಷ ಎಂದು ಬಣ್ಣಿಸಿದರು. ಪ್ರಸ್ತುತ ಸಮಾಜದಲ್ಲಿ ಅವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ತಿಳಿಯುವುದು ಅವಶ್ಯಕ ಎಂದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪಾರ್ವತಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪ್ರಕಾಶ್, ಡಿ.ವೈ.ಎಸ್.ಪಿ. ಕುಮಾರ್ ಸ್ವಾಮಿ ವೃತ್ತ ಆರಕ್ಷಕ ನಿರೀಕ್ಷಕ ಗುರುರಾಜ್ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.
ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವು
ಹಿರೀಸಾವೆ: ಸಮೀಪದ ಕಬ್ಬಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಮಂಡಲೀಕನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬ ಸಾವನಪ್ಪಿರುವ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಗ್ರಾಮದ ನಿವಾಸಿ ಪಟೇಲ್ ಕಿರಿಯಪ್ಪ ಮೃತಪಟ್ಟ ದುರ್ದೈವಿಯಾಗಿದ್ದು, ಅವರು ಮನೆಯಿಂದ ಜಮೀನಿಗೆ ಹೋಗುವಾಗ ವಿದ್ಯುತ್ ಕಂಬಕ್ಕೆ ಅಳವಡಿಸಿರುವ ಅರ್ತಿಂಗ್ ತಂತಿಯು ತಗಲಿದೆ. ಅದರಲ್ಲಿ ವಿದ್ಯುತ್ ಹರಿಯುತ್ತಿದ್ದರಿಂದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಿಷಯ ತಿಳಿದ ತಕ್ಷಣ ಸೆಸ್ಕ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದು, ಈ ಬಗ್ಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೌಡರಿಂದ ದಲಿತರಿಗೆ ಸ್ಥಾನಮಾನ
ಅರಸೀಕೆರೆ: ಸೂಕ್ತ ರಾಜಕೀಯ ಸ್ಥಾನಮಾನ ನೀಡುವ ಮೂಲಕ ದಲಿತರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಲೋಕಸಭಾ ಚುನಾವಣೆಯಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿ ಸಂಪೂರ್ಣ ಬೆಂಬಲಿಸುತ್ತದೆ ಎಂದು ಜಿಲ್ಲಾಧ್ಯಕ್ಷ ವಿಜಯಕುಮಾರ್ ತಿಳಿಸಿದರು.ಪಟ್ಟಣದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿಗಳು ಸ್ಪರ್ಧಿಸುವ ಮೂಲಕ ರಾಷ್ಟ್ರದ ಗಮನ ಹಾಸನ ಕ್ಷೇತ್ರದ ಕಡೆಗೆ ಸೆಳೆಯುವಂತೆ ಮಾಡಿದ್ದಾರೆ ಎಂದರು. ಈ ರಾಜ್ಯದ ಮುಖ್ಯಮಂತ್ರಿ, ಹಾಗೂ ರಾಷ್ಟ್ರದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿರುವ ಎಚ್.ಡಿ. ದೇವೇಗೌಡರು ತಮ್ಮ ಅಧಿಕಾರದ ಅವಧಿಯಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಎಲ್ಲಾ ಸಮಾಜದ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರನ್ನೂ ಕರೆದೊಯ್ಯುವ ಪ್ರಾಮಾಣಿಕ ಹೋರಾಟವನ್ನು ಇದುವರೆಗೂ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಕರಿಯಮ್ಮ ಜಾತ್ರಾ ಮಹೋತ್ಸವ
ಜಾವಗಲ್: ಜಾವಗಲ್‌ನ ಪ್ರಸಿದ್ಧ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿಯ(ಮುದಿಮಾರಮ್ಮ) ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಏ. 18ರವರೆಗೆ ನಡೆಯಲಿದೆ. ಮಂಗಳವಾರ ದೇವಿಯ ಉತ್ಸವವು ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೂಲ ದೇವಾಲಯದಲ್ಲಿ ದೇವಿಯ ಗದ್ದುಗೆಯಾಗಿ ಮಾರ್ಪಟ್ಟಿತ್ತು. ದೊಡ್ಡ ಬಾನ ನಡೆದು ದೇವಿಗೆ ಭಕ್ತಾದಿಗಳು ಎಡೆ ನೈವೇದ್ಯಗಳನ್ನು ಅರ್ಪಿಸಿದ ನಂತರ ಮಹಾಮಂಗಳಾರತಿ ನಡೆಯಿತು. ಇಂದು ರಥೋತ್ಸವ: ಗುರುವಾರ ಸಂಜೆ ಗಂಗಾಸ್ನಾನ ಹಾಗೂ ಸುಮಂಗಲಿಯರಿಂದ ತಂಬಿಟ್ಟಿನ ಆರತಿ ನಡೆಯುತ್ತದೆ. ಶುಕ್ರವಾರ ಬೆಳಗ್ಗೆ ದೇವಿಗೆ ಹರಕೆ ಒಪ್ಪಿಸಲಾಗುತ್ತದೆ. ಮಧ್ಯಾಹ್ನ 3ಕ್ಕೆ ದೇವಿಯ ದಿವ್ಯ ರಥೋತ್ಸವ ನಡೆಯುತ್ತದೆ. ರಥೋತ್ಸವದ ಅಂಗವಾಗಿ ಅನ್ನ ಸಂತರ್ಪಣೆ, ಉಚಿತ ಶುದ್ಧ ನೀರಿನ ವ್ಯವಸ್ಥೆ ಮತ್ತು ಚಿಕ್ಕ ಮಕ್ಕಳಿಗೆ ಬಿಸಿ ಹಾಲು ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಿಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಮಿತಿಯ ಸಂಚಾಲಕ ಜೆ. ಆರ್. ನಾಗರಾಜು ತಿಳಿಸಿದ್ದಾರೆ.
ವೀರಭದ್ರಸ್ವಾಮಿ ದಿವ್ಯ ರಥೋತ್ಸವ
ಸಕಲೇಶಪುರ: ತಾಲೂಕಿನ ಕುದರಂಗಿ ಶ್ರೀ ವೀರಭದ್ರಸ್ವಾಮಿ ದಿವ್ಯರಥೋತ್ಸವ ಮಂಗಳವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ವೀರಭದ್ರಸ್ವಾಮಿ ದೇವರ ವಿಗ್ರಹಕ್ಕೆ ವಿಶೇಷ ಪೂಜೆ ಪುನಸ್ಕಾರಗಳು ನಡೆದ ನಂತರ ದೇವರವಿಗ್ರಹವನ್ನು ರಥಕ್ಕೆ ತಂದಿಡಲಾಯಿತು ನಂತರ ಭಕ್ತಾಧಿಗಳು ಹಣ್ಣು, ಕಾಯಿ ಸಮರ್ಪಿಸಿ ಕೃತಾರ್ಥರಾದರೆ, ರಥದ ಮೇಲೆ ಬಾಳೆಹಣ್ಣು ಎಸೆಯುವಲ್ಲಿ ಭಕ್ತರು ನಿರತರಾಗಿದ್ದರು. ಮಧ್ಯಾಹ್ನ 12ರಲ್ಲಿ ಅರೆಕೆರೆ ಆರುಮಂದೆಯ ಮುಖಂಡರನ್ನು ರಥೋತ್ಸವಕ್ಕೆ ಗೌರವ ಪೂರ್ವಕವಾಗಿ ಕರೆತರುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.