ನೆಪ ಸೈಡಿಗಿಡಿ, ವೋಟ್ ಮಾಡಿ
ಇಂದು ಮತದಾನ ಬಿಗಿ ಭದ್ರತೆಯೊಂದಿಗೆ ಮತಗಟ್ಟೆಗಳು ಸನ್ನದ್ಧ ಎಲ್ಲೆಡೆ ಹೈ ಅಲರ್ಟ್
ಕ.ಪ್ರ. ವಾರ್ತೆ ಹಾಸನ ಏ. 16
ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಲ್ಲೂ ಚುನಾವಣೆಯದ್ದೇ ಸದ್ದು, ಜಯ ಯಾರಿಗೆ ಎಂಬುದರ ಬಗ್ಗೆಯೇ ಗುಲ್ಲು. ಈ ಜಂಗೀಕುಸ್ತಿಯಲ್ಲಿ ಮತದಾರ ಯಾರ ಕೈ ಹಿಡಿಯುತ್ತಾನೆಂಬುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
16ನೇ ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳ ಮತಯಂತ್ರಗಳನ್ನು ಪಡೆದು ಬುಧವಾರ ತಾವು ನಿಯೋಜಿಸಲ್ಪಟ್ಟಿದ್ದ ಮತಕೇಂದ್ರಗಳಿಗೆ ತೆರಳಿದರು. ಹಾಸನ ಜಿಲ್ಲೆ ಹಾಗೂ ಕಡೂರು ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ 2196 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 9837 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 667 ಪುರುಷ ಹಾಗೂ 3180 ಮಹಿಳಾ ಸಿಬ್ಬಂದಿಯನ್ನು ಚುನಾವಣೆಯ ಕಾರ್ಯಕ್ಕೆ ನಿಯೋಜಿಸಿಕೊಂಡಿದ್ದು, ಅವರು ತಮ್ಮ ತಮ್ಮ ಮತಕೇಂದ್ರಗಳಿಗೆ ತೆರಳಿದರು.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ 270 ಮತಗಟ್ಟೆಗಳು, ಅರಸೀಕೆರೆ ಕ್ಷೇತ್ರದಲ್ಲಿ 275 ಮತಗಟ್ಟೆಗಳು, ಬೇಲೂರಿನಲ್ಲಿ 268 ಮತಗಟ್ಟೆಗಳು, ಹಾಸನ ಕ್ಷೇತ್ರದಲ್ಲಿ 265 ಮತಗಟ್ಟೆಗಳು, ಹೊಳೆನರಸೀಪುರದಲ್ಲಿ 316 ಮತಗಟ್ಟೆಗಳು, ಅರಕಲಗೂಡಿನಲ್ಲಿ 285 ಮತಗಟ್ಟೆಗಳು, ಸಕಲೇಶಪುರದಲ್ಲಿ 281 ಮತಗಟ್ಟೆಗಳು, ಕಡೂರು ಕ್ಷೇತ್ರದಲ್ಲಿ 236 ಮತಗಟ್ಟೆಗಳು ಸೇರಿದಂತೆ 2196 ಮತಗಟ್ಟೆಗಳಿಗೆ ಸಿಬ್ಬಂದಿ ಬುಧವಾರ ವಾಹನಗಳಲ್ಲಿ ತೆರಳಿದರು.
ಮೂಲಭೂತ ಸೌಕರ್ಯ
ಮತಕಟ್ಟೆ ಕೇಂದ್ರಗಳಿಗೆ ತೆರಳಿರುವ ಅಧಿಕಾರಿಗಳೊಂದಿಗೆ ಔಷಧ ಪಾಕ್ಸ್, ನೀರು, ಅವರಿಗೆ ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಚುನಾವಣೆಗೆ ನಿಯೋಜನೆಗೊಂಡಿರುವಂತಹ ಅಧಿಕಾರಿಗಳಿಗೆ ನೀಡುವಂತಹ ಗೌರವಧನವನ್ನು ಸಹ ಅವರಿಗೆ ಈಗಾಗಲೇ ನೀಡಲಾಗಿದೆ. ಒಟ್ಟಿನಲ್ಲಿ ಮತದಾನಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರವಹಿಸಲಾಗಿದೆ ಎಂದು ಹೇಳಿದರು.
ಬಸ್ಗಾಗಿ ಸಿಬ್ಬಂದಿ ಪರದಾಟ
8 ವಿಧಾನಸಭಾ ಕ್ಷೇತ್ರಗಳ ಪೈಕಿ ಬೇಲೂರು ಹಾಗೂ ಒಂದೆರಡು ಕ್ಷೇತ್ರಗಳಿಗೆ ಚುನಾವಣಾ ಅಧಿಕಾರಿಗಳು ತೆರಳಲು ನಿಯೋಜಿಸಲಾಗಿದ್ದ ಬಸ್ಗಳ ಕೊರತೆಯಿಂದ ಅಧಿಕಾರಿಗಳು ಕಾದು ನಿಂತಿದ್ದರು. ಕಡಿಮೆ ವಾಹನದ ವ್ಯವಸ್ಥೆ ಇದ್ದ ಪರಿಣಾಮ ಮಹಿಳೆಯರೋಪಾದಿಯಲ್ಲಿ ಎಲ್ಲರೂ ಬಸ್ಗಾಗಿ ಮುಗಿಬಿದ್ದಿದ್ದರು. ಬಸ್ ಒಳ ಹತ್ತಲು ಮುಖ್ಯದ್ವಾರವಲ್ಲದೇ ಚಾಲಕರು ಹತ್ತುವ ದ್ವಾರದಿಂದಲೂ ಬಸ್ ಹತ್ತಲು ಪ್ರಯತ್ನಿಸಿದರು. ನಂತರ ಅಧಿಕಾರಿಗಳು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿದ್ದರಿಂದ ಸರಾಗವಾಗಿ ನಡೆಯಿತು.
ಡಿಸಿ ಮನವಿ
ಜಿಲ್ಲೆಯ ಮತದಾರರು ಕಡ್ಡಾಯ ಹಾಗೂ ಶಾಂತಿಯುತ ಮತದಾನಕ್ಕೆ ಮುಂದಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮನವಿ ಮಾಡಿದರು.
ಸಂಜೆ 6ರವರೆಗೆ ಮತದಾನ
ಎಲ್ಲಾ ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಿಗಿಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಏ. 17ರಂದು ಬೆಳಗ್ಗೆ 7ರಿಂದ ಮತದಾನ ಆರಂಭವಾಗಿ ಸಂಜೆ 6ರವರೆಗೆ ನಡೆಯಲಿದೆ.
ತಂತ್ರಜ್ಞಾನದ ಮೊರೆ...
ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಅಧಿಕಾರಿಳು ಮತಯಂತ್ರಗಳನ್ನು ಅಧಿಕಾರಿಗಳು ಪರಿಶೀಲಿಸಿಕೊಂಡು ತರಬೇತಿ ಪಡೆದುಕೊಂಡಂತಹ ಸಿಬ್ಬಂದಿಗಳು ಮತಗಟ್ಟೆಗಳಿಗೆ ಸುವ್ಯವಸ್ಥಿತಿವಾಗಿ ತೆರಳಿದರು. 2196 ಮತಗಟ್ಟೆಗಳಲ್ಲಿಯೂ ಕೇಂದ್ರ ಮೀಸಲು ಪಡೆ ಪೊಲೀಸರು ಸೇರಿದಂತೆ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 383 ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗಿದ್ದು, 605 ಮೈಕ್ರೋ ಅಬ್ಸರ್ವರ್ಗಳನ್ನು ನೇಮಕ ಮಾಡಲಾಗಿದೆ. 240 ವಿಡಿಯೋ ಕ್ಯಾಮೆರಾ, 214 ಡಿಜಿಟಲ್ ಕ್ಯಾಮೆರಾ ಅಳವಡಿಸಲಾಗಿದೆ. ಕಣದಲ್ಲಿ ಇರುವ ಅಭ್ಯರ್ಥಿಗಳು ಮತದಾನ ಕೇಂದ್ರಕ್ಕಿಂತ 200 ಮೀಟರ್ ದೂರದಲ್ಲಿ ಬೂತ್ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. 2 ಕುರ್ಚಿ, 1 ಟೇಬಲ್ ಹಾಗೂ 4.6 ಅಡಿ ಉದ್ದ ಮತ್ತು 3ಅಡಿ ಅಗಲದ ಬ್ಯಾನರ್ ಕಟ್ಟಿಕೊಟ್ಟಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಅನುಕೂಲಕ್ಕೆ ಬಿಳಿ ಚೀಟಿಯಲ್ಲಿ ಮತದಾರರ ಕ್ರಮ ಸಂಖ್ಯೆ ಮತ್ತು ಹೆಸರು ಮಾತ್ರ ಇರುವ ವೋಟರ್ ಸ್ಲಿಪ್ಗಳನ್ನು ನೀಡಬಹುದು. ಈ ಚೀಟಿಯ ಮೇಲೆ ಪಕ್ಷದ ಚಿಹ್ನೆ ಇರಬಾರದು ಮತ್ತು ಯಾವುದೇ ಪ್ರಚಾರ ನಡೆಸುವಂತಿಲ್ಲ.
ಚುನಾವಣಾಧಿಕಾರಿ ಪರಿಶೀಲನೆ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ ಮಾಧ್ಯಮಗಳಿಗೆ ವಿವರ ನೀಡಿದರು. ಚುನಾವಣೆಯ ಮತದಾನ ನಡೆದ ನಂತರ ಮತಯಂತ್ರಗಳನ್ನು ಸೂಕ್ತವಾದ ವ್ಯವಸ್ಥ್ಥೆಯಲ್ಲಿ ಇಡಲು ಸ್ಟ್ರಾಂಗ್ ರೂಂಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕವಾದ ಸ್ಟ್ರಾಂಗ್ ರೂಂಗಳಿದ್ದು, ಸೂಕ್ತ ಭದ್ರತೆ ಹಾಗೂ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಆಯಾ ಕ್ಷೇತ್ರದ ಸ್ಟ್ರಾಂಗ್ ರೂಂ ಪಕ್ಕದಲ್ಲಿಯೇ ಮತ ಎಣಿಕೆಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದ ಜಿಲ್ಲಾಧಿಕಾರಿ, ಒಂದು ಮತ ಎಣಿಕೆ ಕೇಂದ್ರದಲ್ಲಿ 14 ಟೇಬಲ್ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.
ಸೇವೆಗೆ ಹಾಜರ್
ಹಾಸನದಿಂದ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳ ಮತಕೇಂದ್ರಗಳಿಗೆ ತೆರಳಲು ಹಾಸನ ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮಸ್ಟರಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಚುನಾವಣಾ ಅಧಿಕಾರಿಗಳು ಬೆಳಗ್ಗೆ ಕಾಲೇಜಿಗೆ ತೆರಳಿ ತಮ್ಮ ತಮ್ಮ ವಿಧಾನ ಸಭಾ ಕ್ಷೇತ್ರಗಳಿಗೆ ತೆರಳಿದರು. ಹಾಸನ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳು ಮತಯಂತ್ರಗಳನ್ನು ಹಾಗೂ ಅವಶ್ಯಕ ವಸ್ತುಗಳನ್ನು ಪಡೆದುಕೊಂಡು ಸೇವೆಗೆ ತೆರಳಿದರು.