ಪ್ರಥಮ ಪ್ರಜೆಯ ವಿಶೇಷ
ಸಕಲೇಶಪುರ: ಪಟ್ಟಣದ ಪ್ರಥಮ ಪ್ರಜೆ ಎರಡು ಮತಗಟ್ಟೆಗಳಲ್ಲಿ ಮತದಾನದ ಹಕ್ಕು ಹೊಂದಿರುವುದು ಪಟ್ಟಣದಲ್ಲಿಗ ಚರ್ಚೆಯ ವಿಷಯವಾಗಿದೆ. ಹೌದು ಪಟ್ಟಣದ ಪ್ರಥಮ ಪ್ರಜೆ ಎಸ್.ಎನ್. ಸತೀಶ್ ಅವರು ಪಟ್ಟಣದ ಮತಗಟ್ಟೆ ಸಂಖ್ಯೆ 85ರಲ್ಲಿ ಇದೇ ಹೆಸರಿನಲ್ಲಿದ್ದಾರೆ. ಇದಲ್ಲದೇ, ಮತಸಂಖ್ಯೆ 68ರಲ್ಲಿ ಎಸ್.ಎನ್. ಸತೀಶ್ ಎಂಬ ಹೆಸರನ್ನು ಹೊಂದಿದ್ದಾರೆ ಹಾಗೂ ಮತ ಸಂಖ್ಯೆ 69ರಲ್ಲಿ ಪಲ್ಲವಿ ಎಸ್.ಎನ್. ಸತೀಶ್, ಮತಗಟ್ಟೆ ಸಂಖ್ಯೆ 83ರಲ್ಲಿ ಮತ ಸಂಖ್ಯೆ 197ರಲ್ಲಿ ಎಸ್.ಎನ್. ಸತೀಶ್ ಹಾಗೂ 198ರಲ್ಲಿ ರಾಧಾ ಸತೀಶ್ ಹೆಸರಿನಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶ್ರೀ ಸಾಮಾನ್ಯನಿಂದ ಹಿಡಿದು ರಾಷ್ಟ್ರಪತಿವರೆಗೆ ಒಂದೇ ಮತದ ಹಕ್ಕು ಇದ್ದರೂ ಇಲ್ಲಿ ಹೇಗೆ ಎರಡು ಮತ ಹೊಂದಿದ್ದಾರೆ ಎಂಬುದು ಸದ್ಯದ ಚರ್ಚೆಯ ವಿಷಯವಾಗಿದೆ.
ಸಕಲೇಶಪುರ ಸಿದ್ಧ
ಸಕಲೇಶಪುರ: ಲೋಕಸಭಾ ಚುನಾವಣೆಗೆ ತಾಲೂಕಿನಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಸುರಕ್ಷತಾ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಧಿಕಾರಿ ಉಪವಿಭಾಗಾಧಿಕಾರಿ ಡಾ. ಮಧುಕೇಶ್ವರ್ ತಿಳಿಸಿದ್ದಾರೆ. ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ತಾಲೂಕಿನಲ್ಲಿ ಒಟ್ಟು 281 ಮತ ಕೇಂದ್ರಗಳಿದ್ದು ಹೆಚ್ಚುವರಿಯಾಗಿ ಮತ ಯಂತ್ರಗಳನ್ನು ತರಿಸಿಕೊಳ್ಳಲಾಗಿದೆ. ಹಾಗಾಗಿ, ಒಟ್ಟು 310 ಮತ ಯಂತ್ರಗಳು ಮತದಾನದ ದಿನ ಕಾರ್ಯ ನಿರ್ವಹಿಸಲಿವೆ. ಒಟ್ಟು 1740 ಸಿಬ್ಬಂದಿ ಈ ಬಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ವ್ಯಾಪಕ ಭದ್ರತೆ: ಕಾನೂನು ಸುವ್ಯವಸ್ಥೆಗಾಗಿ ಡಿವ್ಯೆಸ್ಪಿ, ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಸುಮಾರು 700 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿರುವುದಲ್ಲದೆ, ಒಂದು ಕೇಂದ್ರ ಪೊಲೀಸ್ ಮೀಸಲು ಪಡೆಯನ್ನೂ ಕರೆಸಿಕೊಳ್ಳಲಾಗಿದೆ. ಆನೆ ಹಾವಳಿ ಇರುವ ಪ್ರದೇಶಗಳಲ್ಲಿ ಮತಕೇಂದ್ರಗಳ ಹಾಗೂ ಮತದಾರರ ರಕ್ಷಣೆಗಾಗಿಅರಣ್ಯ ಇಲಾಖೆಯ ನೆರವು ಪಡೆಯಲಾಗಿದೆ ಎಂದ ಅವರು, 16 ವಾಹನಗಳಲ್ಲಿ ತಲಾ 4 ಸಿಬ್ಬಂದಿ ಬಂದೂಕು ಮತ್ತು ಸಿಡಿಮದ್ದುಗಳೊಂದಿಗೆ ಗಸ್ತು ನಡೆಸಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವಿಶೇಷ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು. ಡಿವೈಸ್ಪಿ ಕುಮಾರಸ್ವಾಮಿ, ತಹಸೀಲ್ದಾರ್ ಪಾರ್ವತಿ, ಪೊಲೀಸ್ ವೃತ್ತನಿರೀಕ್ಷಕ ಗುರುರಾಜ್ ಇದ್ದರು.
ಮತದಾರರ ಜಾಗೃತಿ
ಹಾಸನ: ನಗರದ ಅನನ್ಯ ಟ್ರಸ್ಟ್ ಮತ್ತು ನಗರದ ಸರ್ಕಾರಿ ಕಲಾ ಕಾಲೇಜಿನ ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ ಇತ್ತೀಚೆಗೆ ಶ್ರೀನಗರ ಬಡಾವಣೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅನನ್ಯ ಟ್ರಸ್ಟ್ನ ಕೆ.ಟಿ. ಜಯಶ್ರೀ ಕಾರ್ಯಕ್ರಮದ ಉದ್ದೇಶದ ಬಗ್ಗೆ ಹೇಳಿದರು. ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ. ಸುನೀತ ಮತದಾನದ ಪ್ರಾಮುಖ್ಯತೆ ತಿಳಿಸಿದರು. ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು ಎಂದು ಕರೆ ನೀಡಿದ ಅವರು, ಪ್ರತಿಯೊಬ್ಬರೂ ಮತ ಚಲಾಯಿಸಿದಾಗ ಮಾತ್ರ ನಮ್ಮ ಬಡಾವಣೆಗಳಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಒತ್ತಾಯಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಿ. ವನಿತಾ ಮತ್ತು ಸಾಮಾಜಿಕ ಕಾರ್ಯಕರ್ತೆ ಪ್ಯಾರಿಜಾನ್, ನಿರ್ಮಲ ಹಾಗೂ ಇತರರು ಇದ್ದರು. ಈ ಸಂದರ್ಭದಲ್ಲಿ ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಮತದಾನದ ಜಾಗೃತಿ ಮೂಡಿಸಿದರು.