ಮಾಜಿ ಯೋಧರ ವಾರ್ಷಿಕ ಸಭೆ
ಹಾಸನ: ಜಿಲ್ಲಾ ನಿವೃತ್ತ ಅರೆಸೇನಾ ಪಡೆ ಯೋಧರ ಒಕ್ಕೂಟದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಏ. 20ರಂದು ಭಾನುವಾರ ಬೆಳಗ್ಗೆ 10ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದ ಪಕ್ಕದಲ್ಲಿರುವ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಕರೆಯಲಾಗಿದೆ. ಅರೆಸೇನಾ (ಬಿಎಸ್ಎಫ್, ಸಿಆರ್ಪಿಎಫ್, ಸಿಐಎಸ್ಎಫ್, ಐಟಿಬಿಪಿ, ಎಸ್ಎಸ್ಬಿ ಮತ್ತು ಅಸ್ಸಾಂ ರೈಫಲ್ಸ್ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಜಿಲ್ಲೆಯ ಎಲ್ಲಾ ಮಾಜಿ ಯೋಧರು ತಪ್ಪದೆ ಸಭೆಯಲ್ಲಿ ಭಾಗವಹಿಸುವಂತೆ ಒಕ್ಕೂಟದ ಅಧ್ಯಕ್ಷ ಆರ್.ಎಂ. ಹನುಮಂತಪ್ಪ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 9686811183, 9483602262 ಸಂಪರ್ಕಿಸಲು ಕೋರಲಾಗಿದೆ.
'ಅಂಬೇಡ್ಕರ್ ಮಾದರಿಯಾಗಲಿ'
ಹಾಸನ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ನಮ್ಮೆಲ್ಲರಿಗೂ ಮಾದರಿಯಾಗಲಿ ಎಂದು ಕೃಷಿಕ್ ಸರ್ವೋದಯ ಫೌಂಡೇಷನ್ನ ಶೈಕ್ಷಣಿಕ ಸಮನ್ವಯಾಧಿಕಾರಿ ಹಾಗೂ ವೃತ್ತಿ ಸಲಹೆಗಾರ ಜಿ.ಎಚ್. ಅನಂತರಾಮು ತಿಳಿಸಿದರು. ನಗರದ ಕೃಷಿಕ್ ಸರ್ವೋದಯ ಫೌಂಡೇಷನ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಅಂಬೇಡ್ಕರ್ ಅವರನ್ನು ಕೇವಲ ಭಾರತ ಗೌರವಿಸುತ್ತಿಲ್ಲ. ಇಡೀ ವಿಶ್ವವೇ ಗೌರವಿಸುತ್ತಿದೆ. ಈ ಗೌರವಕ್ಕೆ ಕಾರಣ ಅವರು ಗಳಿಸಿದ್ದ ಜ್ಞಾನ. ಹಾಗಾಗಿ ನಾವೆಲ್ಲರೂ ಜ್ಞಾನ ಸಂಪಾದನೆಗೆ ಸತತ ಮತ್ತು ನಿರಂತರ ಪ್ರಯತ್ನ ನಡೆಸುತ್ತಲೇ ಇರಬೇಕು ಎಂದು ಸಲಹೆ ನೀಡಿದರು. ಸಮಾರಂಭದಲ್ಲಿ ಎಚ್.ಪಿ. ರಂಗಸ್ವಾಮಿ, ಬಿ. ಸಿದ್ದೇಗೌಡ, ಎಚ್.ಎಸ್. ಚಂದ್ರಶೇಖರ್, ಚರಣಕುಮಾರ್ ನೂರಾರು ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕ್ರಿಕೆಟ್ ಪಂದ್ಯಾವಳಿ
ಜಾವಗಲ್: ಇಲ್ಲಿಗೆ ಸಮೀಪದ ಸೂರನಾಯಕನಹಳ್ಳಿಯಲ್ಲಿ ಶ್ರೀ ಮಲ್ಲಿಕಾರ್ಜುನ ಕ್ರಿಕೆಟರ್ಸ್ ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ 2ನೇ ವರ್ಷದ ಆಹ್ವಾನಿತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಸಲಾಯಿತು. ಸುಮಾರು 20 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಜೋಡಿತಿಪ್ಪನಹಳ್ಳಿ ತಂಡವು ಪ್ರಥಮ ಸ್ಥಾನ ಗಳಿಸಿತು. ಸೂರನಾಯಕನಹಳ್ಳಿಯ ಎಸ್.ಎಂ.ಸಿ ಕ್ರಿಕೇಟರ್ಸ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಗೌರಿಶಂಕರ್ ಪಟೇಲ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ, ರಂಗಸ್ವಾಮಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
20ಕ್ಕೆ ಸಾಹಸ ಕ್ರೀಡಾಸ್ಪರ್ಧೆ
ಹಾಸನ: ನಗರದ ಸತ್ಯಮಂಗಲ ಬಡಾವಣೆಯ ಸತ್ಯಮಂಗಲ ಕೆರೆಯ ಅಂಗಳದಲ್ಲಿ ಏ.20 ರಂದು ರಾಷ್ಟ್ರಮಟ್ಟದ ಡರ್ಟ್ ಟ್ರ್ಯಾಕ್ ಎಂಬ ಮೈ ನವಿರೇಳಿಸುವಂತಹ ಸಾಹಸಮಯ ಕ್ರೀಡಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಹಕರಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಫೀ ಅಹಮ್ಮದ್ ತಿಳಿಸಿದ್ದಾರೆ. ಕ್ರೀಡಾ ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ರಾಜ್ಯಗಳಿಂದಲೂ ಸ್ಪರ್ಧಿಗಳು ಬರುವ ನಿರೀಕ್ಷೆ ಇದೆ. ಈ ಸ್ಪರ್ಧೆಯನ್ನು ಸಾರ್ವಜನಿಕರ ಮನರಂಜನೆಗಾಗಿ ಏರ್ಪಡಿಸಲಾಗಿದೆ. ಈ ಕ್ರೀಡೆಗೆ ಸಾರ್ವಜನಿಕರಿಂದ ಯಾವುದೇ ರೀತಿಯ ಪ್ರವೇಶ ಶುಲ್ಕವನ್ನು ಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಏ. 20ರಂದು ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ನಡೆಯಲಿರುವ ಈ ಸಾಹಸಮಯ ಕ್ರೀಡೆಗೆ ಸಾರ್ವಜನಿಕರು ಪಾಲ್ಗೊಳ್ಳುವಂತೆ ಕೋರಿದ್ದಾರೆ.
ಇಂದಿನಿಂದ ಬೇಸಿಗೆ ಶಿಬಿರ
ಆಲೂರು: ಪಟ್ಟಣದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆ ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿ ಆಶ್ರಯಯದಲ್ಲಿ ಏ. 18ರಿಂದ ಏ. 24ರವರೆಗೆ 4 ರಿಂದ 14 ವರ್ಷದೊಳಗಿರುವ ಮಕ್ಕಳ ಮನೋರಂಜನೆ ಹಾಗೂ ಬೌದ್ಧಿಕ ಬೆಳವಣಿಗೆಯ ಇಚ್ಛೆಯಿಂದ ಬೆಸಿಗೆ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಚ್ಛೆಯುಳ್ಳವರು ಭಾಗವಹಿಸಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ತಿಳಿಸಿದ್ದಾರೆ.