ಯುವಕ ಸಂಘಗಳು ಜ್ಞಾನ ಕೇಂದ್ರಗಳಾಗಲಿ
ಜಾವಗಲ್: ಯುವಕ ಸಂಘಗಳು ಜ್ಞಾನ ಪ್ರಸಾರ ಮಾಡುವ ಕೇಂದ್ರಗಳಾಗಬೇಕೆಂದು ಜಾವಗಲ್ ಸರ್ಕಾರಿ ಪ್ರಥಮ ಕಾಲೇಜಿನ ಪ್ರಾಂಶುಪಾಲ ಡಾ.ಕೆ. ಬಾಷಾ ಅಭಿಪ್ರಾಯಪಟ್ಟರು.
ಜಾವಗಲ್ ಹೋಬಳಿ ದೊಡ್ಡಘಟ್ಟ ಗ್ರಾಮದಲ್ಲಿ ಸ್ಪೂರ್ತಿ ಚೇತನ ಯುವಕರ ಸಂಘ ಹಾಗೂ ಸಂಭ್ರಮ ಸುಗ್ಗಿ-2014 ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿ, ಸಮಾಜದ ಏಳಿಗೆಗಾಗಿ ಸಂಘವಿರಬೇಕೆ ವಿನಹ ಸ್ವಹಿತಕ್ಕಾಗಿ ಅಲ್ಲ ಎಂದರು. ಭಾರತದಲ್ಲಿ ಆನೇಕ ಯುವ ಸಂಘಗಳು ಸ್ಥಾಪನೆಯಾಗಿದ್ದರೂ ತಮ್ಮ ಮೂಲ ಉದ್ದೇಶವನ್ನೇ ಮರೆತು ರಾಜಕೀಯ ಪಕ್ಷಗಳ ಕೈಗೊಂಬೆಯಂತೆ ವರ್ತಿಸುತ್ತಿವೆ ಎಂದು ಅವರು ವಿಷಾದಿಸಿದರು.
ಮಕ್ಕಳನ್ನೇ ಆಸ್ತಿಯಾಗಿಸಿ: ಸಂಘಗಳು ಶಿಕ್ಷಣ, ಆರೋಗ್ಯ, ಬಡತನ ನಿವಾರಣೆ, ಗ್ರಾಮ ನೈರ್ಮಲ್ಯ, ಅಪೌಷ್ಠಿಕತೆ ನಿವಾರಣೆಮುಂತಾದವುಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕೆಂದ ಅವರು, ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೆಂದರು.
ಈ ಸಂದರ್ಭದಲ್ಲಿ, ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥ್ಥಿಗಳಾದ, ಗಿರೀಶ, ರಾಧಿಕ, ಭರತ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ, ಗ್ರಾಮದ ಪ್ರಪ್ರಥಮ ಸರ್ಕಾರಿ ನೌಕರ ಶಿಕ್ಷಕ ಡಿ.ಎನ್. ನಿಂಗೇಗೌಡ, ಕಲಾವಿದ ಹುಚ್ಚಹನುಮೇಗೌಡ, ಕೃಷಿಕ ದೊಡ್ಡೇಗೌಡ, ಯೀಶದಲ್ಲಿರುವ ಇಂಜಿನಿಯರ್ ಡಿ.ಎಂ. ದಾನಂದಗೌಡ, ಗಂಗಾಧರ ಶೆಟ್ಟಿ ಉಪನ್ಯಾಸಕ ವಿಜಯಕುಮಾರ, ಡಿ.ಎಮ್. ಹನುಮೇಗೌಡ ಅವರನ್ನು ಸನ್ಮಾನಿಸಲಾಯಿತು.
ಬಾಳ ಬೆಳಕು ಯೋಜನೆಯಡಿ ಅಂಗವಿಕಲೆ ಜಯಮ್ಮನವರಿಗೆ ಆರ್ಥಿಕ ನೆರವು ನೀಡಿ ಗೌರವಿಸಲಾಯಿತು ಸನ್ಮಾನಿತರ ಪರವಾಗಿ ಡಿ.ಎನ್. ನಿಂಗೇಗೌಡ, ಡಿ.ಎಂ. ದಾನನಂದಗೌಡ, ಗಂಗಾಧರ ಶೆಟ್ಟಿ, ಕವಿತ ಗ್ರಾಪಂ ಸದಸ್ಯ ಲಕ್ಷ್ಮೇಗೌಡ, ಸಂದೀಪ್, ಲೋಕೆಗೌಡ ಶಾಂತರಾಜು ಮಾತನಾಡಿದರು. ಸಂಘದ ಅಧ್ಯಕ್ಷ ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು.
ಬಿರುಗಾಳಿ, ಮಳೆಯಿಂದ ಕೈಗಾರಿಕಾ ಘಟಕಕ್ಕೆ ಹಾನಿ
ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಕಾಮಸಮುದ್ರದಲ್ಲಿ ಬಿದ್ದ ಬಿರುಗಾಳಿ ಮಿಶ್ರಿತ ಮಳೆಯ ಪರಿಣಾಮ ತೆಂಗಿನ ನಾರಿನ ಹಗ್ಗದ ತಯಾರಿಸುವ ಕೈಗಾರಿಕಾ ಘಟಕ ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾದ ಘಟನೆ ನಡೆದಿದೆ.
ತಾಲೂಕಿನ ಕಾಮಸಮುದ್ರ ಗ್ರಾಮದ ಪಾರ್ವತಮ್ಮ ಮತ್ತಯ ರಾಮಸ್ವಾಮಿ ಎಂಬುವರ ಜಮೀನಿನಲ್ಲಿ ಸ್ಥಾಪಿಸಲಾಗಿದ್ದ ಶಾಂತವೀರ ಕಾಯರ್ ಇಂಡಸ್ಟ್ರೀಸ್ ಘಟಕದ ಮೇಲ್ಛಾವಣಿಯು ತೀವ್ರವಾದ ಬೀರುಗಾಳಿ ಮಳೆಯ ಕಾರಣ ಕಿತ್ತು ಹೋಗಿ, ಮೇಲ್ಛಾವಣೆಗೆ ಹಾಕಲಾಗಿದ್ದ ತೀರುಗಳು ಮತ್ತು ಸೀಟ್‌ಗಳು ಮಾಯವಾಗಿದ್ದು, ಕೈಗಾರಿಕಾ ಘಟಕದಲ್ಲಿ ಸಂಗ್ರಹಿಸಿ ಇಟ್ಟಿದ ತೆಂಗಿನನಾರು ಸೇರಿದಂತೆ ನಾನಾ ನಾರಿನ ಉತ್ಪನ್ನಗಳು ಹಾಳಾಗಿದ್ದು, ಸುಮಾರು ರು. 1 ಲಕ್ಷಕ್ಕೂ ಹೆಚ್ಚಿನ ಹಾನಿ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ.
ಕೆಲವೇ ತಿಂಗಳ ಹಿಂದೆ ಪ್ರಾರಂಭಿಸಿದ್ದ ಈ ಕೈಗಾರಿಕಾ ಘಟಕವು ಪ್ರಾಕೃತಿಕ ವಿಕೋಪಕ್ಕೆ ಸಿಕ್ಕಿ ಹಾನಿಯಾಗಿರುವ ಕಾರಣ ಕೆಲಸಗಾರರಿಗೆ ನಿರುದ್ಯೋಗ ಸಮಸ್ಯೆ ಕಾಡುವಂತಾಗಿದ್ದು, ಬ್ಯಾಂಕಿನ ಸಾಲ ಮಾಡಿ ಕೈಗಾರಿಕಾ ಘಟಕವನ್ನು ಪ್ರಾರಂಭಿಸಿದ್ದ ಪಾರ್ವತಮ್ಮ ಅವರು ಮುಂದೆ ಏನು ಮಾಡುವುದೆಂದು ಕಂಗಲಾಗಿದ್ದಾರೆ. ಅದೃಷ್ಟವಶಾತ್ ಇಲ್ಲಿನ ಕೆಲಸಗಾರರಿಗೆ ಯಾವುದೇ ರೀತಿಯ ಪ್ರಾಣಾಪಯವಾಗದೆ ಪಾರಾಗಿದ್ದಾರೆ.