ಅಧ್ಯಾತ್ಮದಿಂದ ಸಾರ್ಥಕ ಬದುಕು
ಹಾಸನ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಜ್ಞಾನದಿಂದ ಮಾತ್ರ ಸಾರ್ಥಕ ಬದುಕು ನಡೆಸಲು ಸಾಧ್ಯ ಎಂದು ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಾಹಿತಿ ಚಟ್ನಳ್ಳಿ ಮಹೇಶ್ ಅಭಿಪ್ರಾಯಪಟ್ಟರು.
ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನವನಾಥಯಾಗ ಮಂಟಪದಲ್ಲಿ ಮಂಗಳವಾರ ರಾತ್ರಿ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದಲ್ಲಿ ಸಾರ್ಥಕ ಬದುಕು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪರಂಪರೆ ಮುಂದುವರಿಯಬೇಕು: ಸತ್ಸಂಗದಿಂದ ಮನಸ್ಸಿಗೆ ಸಂಸ್ಕಾರ ದೊರೆಯುತ್ತದೆ. ನಾನು ನನಗೆ ಏನನ್ನು ಬಯಸುತ್ತೇನೋ ಅದನ್ನೇ ಪರರಿಗೂ ಬಯಸುವುದೇ ನಿಜವಾದ ಧರ್ಮ. ಅದನ್ನು ಪಾಲಿಸುವುದೇ ಸಾರ್ಥಕ ಬದುಕು. ಧರ್ಮ ಮತ್ತು ಸಾಹಿತ್ಯ ಜನರನ್ನು ಒಂದುಗೂಡಿಸುವ ಕೆಲಸ ಮಾಡಬೇಕು. ಆ ಕೆಲಸವನ್ನು ನಮ್ಮ ಜನಪದರು, ವಚನಕಾರರು ಮಾಡಿದ್ದಾರೆ. ಆ ಪರಂಪರೆ ಮುಂದುವರಿಯಬೇಕು ಎಂದರು.
ಸಾಮರಸ್ಯ ಬೇಕು: ಇಂದು ಕಲ್ಪನೆಗೂ ಮೀರಿದ ರೀತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯುತ್ತಿದೆ. ಅಮೆರಿಕಾ ಹತ್ತಿರವಾಗುತ್ತಿದೆ. ಆದರೆ, ನೆರೆಹೊರೆಯವರು ದೂರವಾಗುತ್ತಿದ್ದಾರೆ. ನೆರೆಹೊರೆಯವರೊಂದಿಗೆ ಸಾಮರಸ್ಯ ಇಲ್ಲದಿದ್ದರೆ ಸಾರ್ಥಕ ಬದುಕು ನಡೆಸಲು ಸಾಧ್ಯವಿಲ್ಲ. ಅಧ್ಯಾತ್ಮಿಕ ಜ್ಞಾನ ಇಲ್ಲದಿದ್ದರೆ ತಂತ್ರಜ್ಞಾನದ ದುರ್ಬಳಕೆ ಹೆಚ್ಚುತ್ತದೆ ಎಂದು ಎಚ್ಚರಿಸಿದರು.
ಭಜನೆ: ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ, ಶ್ರೀ ಶೈಲವಲ್ಲಭ ಭಜನಾ ಮಂಡಳಿ, ಶ್ರೀ ಶುಕ್ತಿ ಯೋಗ ಕೇಂದ್ರ, ಶ್ರೀ ಆದಿಚುಂಚನಗಿರಿ ಮಹಿಳಾ ಸಮಾಜ ಮತ್ತು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ವ್ಯವಸ್ಥಾಪಕ ಎಚ್.ಕೆ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪ್ರಾಯೋಜಕರಾದ ಡಾ. ಹೇಮಲತಾ ಸುರೇಶ್, ಹುಣ್ಣಿಮೆ ಕಾರ್ಯಕ್ರಮದ ಸಂಯೋಜಕ ಎಚ್.ಬಿ. ಮದನಗೌಡ ಮತ್ತು ಹಾಸನ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಎನ್. ಹೇಮಲತಾ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಶುಕ್ತಿ ಯೋಗ ಕೇಂದ್ರದ ಲಕ್ಷ್ಮೀ ನಟರಾಜ್ ಪ್ರಾರ್ಥಿಸಿದರು.
ಅಧ್ಯಾತ್ಮಿಕತೆ ಬೇಕು
ಹಣ, ಐಷಾರಾಮಿ ಬದುಕಿನ ಹಿಂದೆ ಓಡುತ್ತಿರುವ ಮಾನವನ ಅಂತರಂಗ ಬಿಸಿಯಾಗಿದೆ. ಅದನ್ನು ತಂಪು ಮಾಡಲು ಯಾವ ತಂತ್ರಜ್ಞಾನದಿಂದಲೂ ಸಾಧ್ಯವಿಲ್ಲ. ಅಧ್ಯಾತ್ಮಿಕ ಜ್ಞಾನದಿಂದ ಮಾತ್ರ ಅಂತರಂಗವನ್ನು ತಣಿಸಲು ಸಾಧ್ಯ ಎಂದು ಚಟ್ನಳ್ಳಿ ಮಹೇಶ್ ಪ್ರತಿಪಾದಿಸಿದರು.
ಹಿರಿಯರಿಂದ ಸಂಸ್ಕಾರ
ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಾ ಬಂದಂತೆ ಯುವಜನರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಏರುತ್ತಾ ಬರುತ್ತಿದೆ. ಇದಕ್ಕೆ ಎಳವೆಯಲ್ಲಿ ಉತ್ತಮ ಸಂಸ್ಕಾರ ದೊರೆಯದಿರುವುದೇ ಕಾರಣ. ಘನತೆಯಿಂದ ಬದುಕುವುದನ್ನು ವಿಶ್ವವಿದ್ಯಾನಿಲಯಗಳಿಂದ ಕಲಿಯಲು ಸಾಧ್ಯವಿಲ್ಲ. ಅದಕ್ಕೆ ಹಿರಿಯ ಮಾರ್ಗದರ್ಶನ ಅಗತ್ಯ ಎಂದು ಕಿವಿಮಾತು ಹೇಳಿದರು.