ಗೌಡರ ವಿರುದ್ಧ ಸ್ಪರ್ಧಿಸುವ ಆಸೆ ಈಡೇರಿದೆ: ಮಂಜು
ರಾಮನಾಥಪುರ (ಅರಕಲಗೂಡು ತಾ.): ದೇವೇಗೌಡರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ತಮ್ಮ ಇಚ್ಛೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಈಡೇರಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ತಿಳಿಸಿದರು.
ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದಲ್ಲಿ ಗುರುವಾರ ತಮ್ಮ ಪತ್ನಿಯೊಂದಿಗೆ ಆಗಮಿಸಿ ತಮ್ಮ ಮತ ಚಲಾಯಿಸಿದ ನಂತರ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇದಕ್ಕೂ ಮುನ್ನ ಮನೆಯಿಂದ ಹೊರಟ ಅವರಿಗೆ ಪತ್ನಿ ತಾರಾ ಆರತಿ ಬೆಳಗಿದರು. ನಂತರ, ತಮ್ಮ ಮನೆದೇವರಿಗೆ ಹಾಗೂ ಊರಿನ ದೇವಾಲಯಗಳಿಗೆ ಹಾಗೂ ತಮ್ಮ ಮನೆಯ ಗೋಮಾತೆಗೆ ಪೂಜೆ ಸಲ್ಲಿಸಿದರು.
ನಂತರ, ಹನ್ಯಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಆಗಮಿಸಿದ ಅವರು ಸುಮಾರು 7:45ಕ್ಕೆ ಮತದಾನ ಮಾಡಿದರು. ನಂತರ ಅವರ ಪತ್ನಿ ತಾರಾ ಎ. ಮಂಜು ಸಹ ಮತದಾನ ಮಾಡಿದರು.
ಬೆಂಬಲ ನೀಡಿದ್ದಾರೆ: ಈ ಸಂದರ್ಭದಲ್ಲಿ ಮಾತನಾಡಿದ ಎ. ಮಂಜು, ಕಡೂರು ತಾಲೂಕು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರ ಹಾಗೂ ಹೋಬಳಿ ಕೇಂದ್ರಗಳಿಗೂ ನಾವು ಪ್ರಚಾರಕ್ಕೆ ತೆರಳಿದ್ದು ಎಲ್ಲಾ ಕಡೆ ಉತ್ತಮ ಸ್ವಾಗತ ನೀಡಿ ಬೆಂಬಲ ನೀಡಿದ್ದಾರೆ ಎಂದರು.
ಗೆಲ್ಲುವ ಭರವಸೆಯಿದೆ: ರಾಜ್ಯ ಸರ್ಕಾರದ ಅನೇಕ ಜನಪರ ಕಾರ್ಯಗಳನ್ನು ಮೆಚ್ಚಿ ಈ ದಿನ ನನಗೆ ಮತ ನೀಡುವುದರ ಮೂಲಕ ಆಶೀರ್ವಾದ ಮಾಡುತ್ತಾರೆ ಎಂಬ ಅಚಲವಾದ ನಂಬಿಕೆಯಿದೆ. ನನ್ನ ಜೀವನದಲ್ಲಿ ದೇವೇಗೌಡರ ಎದುರು ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಆಸೆಯಿತ್ತು. ಈ ಆಸೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಈಡೇರಿಸಿದ್ದಾರೆ ಎಂದರು.
ಈ ಬಾರಿ 1999ರ ಚುನಾವಣೆ ಮರುಕಳಿಸಲಿದ್ದು ಈ ಬಾರಿ ಜನತೆ ನನ್ನನ್ನು ಜಯಶೀಲನನ್ನಾಗಿ ಮಾಡುತ್ತಾರೆ ಎಂದು ತಿಳಿಸಿದರು.