ನಿಯಮ ಪಾಲಿಸಿದರೆ ಅಪಘಾತವಿಲ್ಲ
ಹಾಸನ: ರಸ್ತೆ ಅಪಘಾತಗಳು ಹೆಚ್ಚಾಗಲು ಚಾಲಕರ ನಿರ್ಲಕ್ಷ್ಯವೇ ಪ್ರಮುಖ ಕಾರಣ. ಆದ್ದರಿಂದ ಪ್ರತಿಯೊಬ್ಬರೂ ರಸ್ತೆ ನಿಯಮ ಪಾಲಿಸಿದಾಗ ಮಾತ್ರ ಅಪಘಾತ ತಡೆಯಲು ಸಾಧ್ಯ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಡಿ. ಅಲ್ಮೇಡ ತಿಳಿಸಿದರು.
ಅವರು ನಗರದ ಎನ್‌ಡಿಆರ್‌ಕೆ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಾರಿಗೆಯ ಹುಟ್ಟು ಬೆಳವಣಿಗೆಯನ್ನು ತಿಳಿಸುತ್ತಾ ಪ್ರಥಮ ಬಾರಿಗೆ 1770ರಲ್ಲಿ ಪ್ರಾನ್ಸ್‌ನಲ್ಲಿ ಜಾಸೆಫ್ ಕಾಪ್ಟರ್ ಮೋಟಾರು ವಾಹನ ಕಂಡುಹಿಡಿದರು. 1885ರಲ್ಲಿ ಜರ್ಮನಿಯ ಕಾರ್ಲೆ ಬೆಂಜ್ ಮತ್ತು ರುಡಾಲ್ಸ್ ಡೀಸಲ್ ಅವರು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಮೋಟಾರು ವಾಹನ ಕಂಡು ಹಿಡಿದರು. 1903ರಿಂದ ಡ್ರೈವಿಂಗ್ ಲೈಸೆನ್ಸ್ ಜಾರಿಗೆ ತರಲಾಯಿತು ಎಂದರು.
ಲೈಸನ್ಸ್ ಮಾಡಿಸಬೇಕು: 1918ರಂದು ನ್ಯೂಯಾರ್ಕ್‌ನಲ್ಲಿ ಮೊದಲಿಗೆ ರಸ್ತೆಯ ರೈಟ್‌ಸಿಗ್ನಲ್ ಬಳಕೆ ಕಂಡು ಹಿಡಿಯಲಾಯಿತು ಎಂದು ವಿವರಿಸಿದರು. ಮುಖ್ಯ ಅತಿಥಿಯಾಗಿದ್ದ ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕ ಎಸ್.ಎಸ್. ಪಾಷಾ ಮಾತನಾಡುತ್ತಾ, ಯುವಕರು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ ಇತರರಿಗೂ ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು. ಹಾಗೆಯೇ ಪ್ರತಿಯೊಬ್ಬರೂ ತಪ್ಪದೇ ಲೈಸೆನ್ಸ್ ಮಾಡಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ. ಶಾಮಭಟ್ ಮಾತನಾಡಿದರು. ರಾಜಶೇಖರ್ ನಿರೂಪಿಸಿದರು. ಎಚ್.ಕೆ. ಜಯರಾಮು ಸ್ವಾಗತಿಸಿದರು. ಅಶೋಕ್ ಕಶ್ಯಪ್ ಪ್ರಾರ್ಥನೆ ಮಾಡಿದರು. ಗೋಪಾಲ್ ಡಿ.ಎಸ್. ವಂದಿಸಿದರು. ಅಧ್ಯಾಪಕ ವೃಂದ ಇತ್ತು.