ಬಹಿಷ್ಕಾರ ನಿರ್ಧಾರ ವಾಪಸ್
ಬೇಲೂರು: ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮತದಾನ ಬಹಿಷ್ಕಾರಮೊಂದೇ ಪರಿಹಾರವಲ್ಲ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಹೇಳಿದರು.
ತಾಲೂಕಿನ ಮುದಿಗೆರೆ ಗ್ರಾಮಸ್ಥರು ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಮತದಾನವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ನಂತರ ಮಾತನಾಡಿ, ಮೂಲ ಸೌಕರ್ಯ ಕಲ್ಪಿಸಬೇಕು ಎಂಬ ನಿಮ್ಮ ಭಾವನೆಗಳಿಗೆ ಬೆಲೆ ಕೊಡುತ್ತೇನೆ, ಆದರೆ ಮತದಾನ ಎಂಬುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಮನುಷ್ಯ ಎಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ಬಹಿಷ್ಕಾರ ಒಂದೇ ಪರಿಹಾರ ಅಲ್ಲ ಎಂಬುದನ್ನು ಮನಗಾಣಬೇಕು ಎಂದರು.
ತಾವು ಈಗ ಗ್ರಾಮೀಣ ಸಮಸ್ಯೆಗಳಿಗೆ ಪರಿಹಾರ ಹೇಳಲು ಆಗುವುದಿಲ್ಲ, ಈಗ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಆಶ್ವಾಸನೆ, ಭರವಸೆಯನ್ನು ನೀಡುವಂತಿಲ್ಲ, ಇನ್ನು ಒಂದೆರಡು ದಿನದ ನಂತರ ಗ್ರಾಮದ ಮುಖಂಡರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಅವರ ಸಮಸ್ಯೆಯನ್ನು ಆಲಿಸಿ ನಂತರ ಪರಿಹರಿಸುವ ಮಾರ್ಗದ ಬಗ್ಗೆ ಆಲೋಚನೆ ಮಾಡೋಣ ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಮನವಿಗೆ ಒಪ್ಪಿದ ಗ್ರಾಮಸ್ಥರು ಮತದಾನ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದರು.
ನಂತರ ಮಾಳೇನಹಳ್ಳಿಗೆ ತೆರಳಿದ ಜಿಲ್ಲಾಧಿಕಾರಿ ಅನ್ಬುಕುಮಾರ್ ಅಲ್ಲಿನ ಗ್ರಾಮಸ್ಥರಿಗೂ ಮತದಾನ ಮಾಡುವಂತೆ ಮನವಿ ಮಾಡಿದರು. ಡಿಸಿ ಮನವಿಗೆ ಕೆಲವು ಗ್ರಾಮಸ್ಥರು ಒಪ್ಪಿದರೆ, ಕೆಲವರು ಒಪ್ಪಲಿಲ್ಲ. ಅಂತೂ ಒಲ್ಲದ ಮನಸ್ಸಿನಿಂದ ಮತಗಟ್ಟೆಗೆ ತೆರಳುತ್ತಿದ್ದುದು ಕಂಡುಬಂತು.