ಮಂಜು ಗೆಲವು ಖಚಿತ: ಪ್ರಸನ್ನಕುಮಾರ್
ಅರಕಲಗೂಡು: ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಗೆಲುವು ಖಚಿತವಾಗಿದ್ದು, ಅವರ ಸಮರ್ಥ ನಾಯಕತ್ವ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 8 ತಿಂಗಳ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ರಾಜ್ಯಕ್ಕೆ ನೀಡಿರುವ ಯೋಜನೆಗಳು ಗೆಲವಿಗೆ ಸಹಕಾರಿಯಾಗಲಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಮಂಜು ಈ ಬಾರಿ ಗೆದ್ದು ಬಂದರೆ, ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು. ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾರವುಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ವಿರುದ್ಧ ಮಾಡಿರುವ ಆರೋಪ ಹಸಿ ಸುಳ್ಳು ಎಂದ ಅವರು, ಮಂಜು ಅವರ ಹೆಸರಿಗೆ ಕಳಂಕ ತರುವಂತೆ ಮಾಡಲು ಅವರು ಪಿತೂರಿ ನಡೆಸಿ ತಾವೇ ಕೆಲವು ಕೂಪನ್ಗಳನ್ನು ಅಚ್ಚು ಹಾಕಿಸಿ, ಮಂಜು ಹೆಸರಿನಲ್ಲಿ ಹಂಚಿಸಿದ್ದಾರೆ ಎಂದು ಆರೋಪಿಸಿದರು. ನಿಜವಾಗಿಯೂ ಮಂಜು ಅವರು ಕೂಪನ್ಗಳನ್ನು ಹಂಚಿಸಿದ್ದರೆ ಅಂತಹ ವ್ಯಕ್ತಿಗಳ ಸಹಿತ ಹಿಡಿದು ಪೊಲೀಸರಿಗೆ ಒಪ್ಪಿಸಬಹುದಿತ್ತು ಎಂದರು.
ಜಿಲ್ಲಾದ್ಯಂತ ಶೇ.72 ಮತ
ಹಾಸನ: ಜಿಲ್ಲಾದ್ಯಂತ ಶೇ.72 ರಷ್ಟು ಮತದಾನವಾಗಿದೆ. ಹಾಸನ ನಗರದಲ್ಲಿ ನಿಧಾನವಾಗಿ ಮತದಾನದ ಬಿರುಸುಗೊಂಡರೇ, ಗ್ರಾಮಾಂತರ ಪ್ರದೇಶದಲ್ಲಿ ಬೆಳಗ್ಗೆಯಿಂದಲೇ ಮತದಾನ ಚುರುಕುಗೊಂಡಿತ್ತು. ಜಿಲ್ಲೆಯಲ್ಲಿ ಬೆಳಗ್ಲೆ 11 ಕ್ಕೆ ಶೇ. 24.47 ಆಗಿದ್ದರೇ, ಮಧ್ಯಾಹ್ನ 1 ಕ್ಕೆ ಶೇ. 40 ರಷ್ಟು ಆಗಿತ್ತು. ಮಧ್ಯಾಹ್ನ 3 ಕ್ಕೆ ಶೇ. 54.04 ಮತ್ತು 5 ಕ್ಕೆ ಶೇ. 67 ರಷ್ಟು ಮತದಾನವಾಗಿತ್ತು, ಅಂತಿಮವಾಗಿ ಸಂಜೆ 6 ಕ್ಕೆ ಶೇ. ಮತದಾನವಾಯಿತು.
ಜಿಲ್ಲಾಧಿಕಾರಿ ಕೃತಜ್ಞತೆ
ಹಾಸನ: ಹಾಸನ ಲೋಕಸಭಾ ಚುನಾವಣೆಗೆ ಶಾಂತಿಯುತ ಮತದಾನ ನಡೆದಿದ್ದು, ಯಶಸ್ವಿ ಮತದಾನ ಪ್ರಕ್ರಿಯೆಗೆ ಸಹಕರಿಸಿದ ಎಲ್ಲಾ ನಾಗರಿಕರು, ಮತದಾರರು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ, ರಕ್ಷಣಾ ವ್ಯವಸ್ಥೆ ನಡೆಸಿದ ಪೊಲೀಸ್ ಮತ್ತು ಅರೆಸೇನಾಪಡೆ, ಹೋಂಗಾರ್ಡ್ಸ್, ಸುದ್ದಿ ಮಾಧ್ಯಮದವರಿಗೆ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
ಕಡ್ಡಿಯಾಡಿಸಿದ ಮತದಾರ!
ಚನ್ನರಾಯಪಟ್ಟಣ: ಮತದಾರನೊಬ್ಬ ತನ್ನ ಚಾಲಾಕಿತನ ತೋರಿದ ಪರಿಣಾಮವಾಗಿ ಮತದಾನ ಕೆಲ ನಿಮಿಷಗಳ ಕಾಲ ನಿಂತುಹೋದ ಘಟನೆ ಗುರುವಾರ ನಡೆಯಿತು. ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿನ ಮತಗಟ್ಟೆಗೆ ಬಂದಿದ್ದ ಮತದಾರನೋರ್ವ ಅತಿ ಬುದ್ಧಿವಂತಿಕೆ ಉಪಯೋಗಿಸಿ, ತನ್ನ ಆಯ್ಕೆಯ ಅಭ್ಯರ್ಥಿಯ ಮುಂದಿನ ಮತ ಚಲಾಯಿಸುವ ಬಟನ್ ಒತ್ತಿ, ಸಣ್ಣ ಕಡ್ಡಿಯಿಂದ ಅದನ್ನು ಲಾಕ್ ಮಾಡಿದ್ದಾನೆ. ಪ್ರತಿಯೊಬ್ಬ ಮತದಾರ ಬಂದಾಗ ಮತಯಂತ್ರವನ್ನು ಬೂತ್ನಲ್ಲಿನ ಚುನಾವಣಾಧಿಕಾರಿ ಆನ್ ಮಾಡಿದಾಗ, ತಾನು ಇಷ್ಟಪಡುವ ಅಭ್ಯರ್ಥಿಯ ಚಿಹ್ನೆಯ ಮುಂದಿರುವ ಬಟನ್ ತಾನೇ ತಾನಾಗಿ ಒತ್ತಲ್ಪಡಬೇಕೆಂಬ ಆಸೆಯಿಂದ ಆತಈ ಕೆಲಸ ಮಾಡಿದ್ದ. ಆದರೆ, ಆತನ ಈ ನಡೆಯಿಂದ ಮತಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ತಕ್ಷಣವೇ ಇದನ್ನು ಅರಿತ ಮತಗಟ್ಟೆಯ ಅಧಿಕಾರಿಗಳು ಪರಿಶೀಲಿಸಿದಾಗ ಕೃತ್ಯ ಬಯಲಿಗೆ ಬಂದಿದೆ. ತಕ್ಷಣವೇ ಎಚ್ಚರಗೊಂಡ ಚುನಾವಣಾಧಿಕಾರಿಗಳು ಬಿಇಎಲ್ ಕಂಪನಿ ಇಂಜನಿಯರ್ನ್ನು ಮತ ಕೇಂದ್ರಕ್ಕೆ ಕರೆದೊಯ್ದು ರಿಪೇರಿ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, 20 ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿತ್ತು.
ಮಳೆ ಅಡ್ಡಿ
ಹಾಸನ: ಲೋಕಸಭಾ ಚುನಾವಣೆಯ ಮತದಾನಕ್ಕೆ ಸಕಲೇಶಪುರ, ಬೇಲೂರು ಅರಕಲಗೂಡು, ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ತಾಲೂಕುಗಳ ಹಲವು ಗ್ರಾಮಗಳಲ್ಲಿ ಮಳೆ ಕೆಲ ಕಾಲ ಅಡ್ಡಿಯುಂಟು ಮಾಡಿತು. ಮಳೆ ನಿಂತ ನಂತರ ಮತದಾರರು ಮತಹಾಕಿದರು.
ಸಂಭ್ರಮದ ಮುತ್ತುಮಾರಿಯಮ್ಮ ಕರಗ
ಅರಸೀಕೆರೆ: ಮಂಗಳವಾರ ಬೆಳಿಗ್ಗೆ ಪಟ್ಟಣದ ಕಂತೇನಹಳ್ಳಿ ಸಮೀಪವಿರುವ ಶನೇಶ್ವರ ದೇವಾಲಯದ ಮುಂಭಾಗ ಅಧಿಕೃತವಾಗಿ ಚಾಲನೆ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತಸಮೂಹ ಕಂತೇನಹಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಮೆರವಣಿಗೆ ನಡೆಸಿ ಮುತ್ತುಮಾರಿಯಮ್ಮನವರಿಗೆ ಜಯಘೋಷ ಕೂಗುವ ಮೂಲಕ ಭಕ್ತಿ ಸಮರ್ಪಿಸಿದರು. ಹರಕೆ ಹೊತ್ತ ಭಕ್ತರು ತಮ್ಮ ಬೆನ್ನಿಗೆ ಕಬ್ಬಿಣದ ಕೊಂಡಿಗಳನ್ನು ಹಾಕಿಕೊಂಡು ದೇವಿಯ ವಿಗ್ರಹ ಹೊತ್ತ ಟ್ರ್ಯಾಕ್ಟರ್ ಎಳೆಯುತ್ತಿದ್ದ ದೃಶ್ಯ ನೋಡುಗರನ್ನು ಬೆರಗುಗೊಳಿಸುವಂತಿತ್ತು. ಅಲ್ಲದೆ ಮತ್ತೋರ್ವ ಭಕ್ತ ಕ್ರೇನ್ನಲ್ಲಿ ನೇತಾಡುವ ಮೂಲಕ ದೇವಿಯ ಹರಕೆ ತೀರಿಸಿದರು. ಮೆರವಣಿಗೆ ರಾಪ್ಟ್ರೀಯ ಹೆದ್ದಾರಿಯ ಮೂಲಕ ಸಾಗಿ ಹಾಸನ ರಸ್ತೆಯ ಮುತ್ತುಮಾರಿಯಮ್ಮ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು.
ಸಿಡಿಲ ಆರ್ಭಟಕ್ಕೆ ಯುವಕ ಸಾವು
ಬೇಲೂರು: ಬೇಲೂರು ತಾಲೂಕು ಕೋನೋರ್ಲು ಗ್ರಾಮದಲ್ಲಿ ಸಿಡಿಲಿನ ಸದ್ದುಕೇಳಿ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲೂಕಿನ ಕೋನೇರ್ಲು ಗ್ರಾಮದಲ್ಲಿ ಮಧ್ಯಾಹ್ನ 2ರಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಜೀವನ್ ( 17 ) ಎಂಬುವರು ಮೃತಪಟ್ಟಿರುವ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಜಮೀನಿನಲ್ಲಿ 6 ಜನ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಗುಡುಗು ಸಿಡಿಲ ಸಹಿತ ಮಳೆ ಬಂತು. ಆಶ್ರಯಕ್ಕಾಗಿ ಅಲ್ಲೇ ಇದ್ದ ಮರದ ಕೆಳಗೆ ನಿಂತಿದ್ದಾಗ ಭಾರಿ ಸದ್ದಿನೊಂಡಿದೆ ಸಿಡಿಲ ಧ್ವನಿ ಕೇಳಿಬಂತು. ಮರದ ಕೆಳದೆ ನಿಂತಿದ್ದ ಜೀವನ್ ತನ್ನ ಎರಡೂ ಕೈಗಳನ್ನು ಕಿವಿಯ ಬಳಿ ಹಿಡಿದು ಕುಸಿದು ಬಿದ್ದಿದ್ದಾನೆ. ನಂತರ ಗೆಳೆಯರು ಕುಸಿದು ಕುಳಿತ ಜೀವನ್ನನ್ನು ಮೇಲೇಳಿಸಲು ಪ್ರಯತ್ನಿಸಿದಾಗ ಆತ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಬೇಲೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ.
ವೈದ್ಯರು ಜೀವನ್ ಮೃತಪಟ್ಟಿದ್ದಾಗಿ ಹೇಳಿದ್ದಾರೆ. ಶವ ಪರೀಕ್ಷೆಯ ನಂತರ ಮೃತ ದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿದೆ.
ಮಿಂಚು, ಗುಡುಗು ಸಹಿತ ಮಳೆ
ಚನ್ನರಾಯಪಟ್ಟಣ: ತಾಲೂಕಿನ ವಿವಿಧೆಡೆಗಳಲ್ಲಿ ಮಿಂಚು ಗುಡುಗು ಹಾಗೂ ಗಾಳಿ ಸೇರಿದಂತೆ ಮಳೆ ಬಿದ್ದಿದ್ದು, ಗುರುವಾರ ಸಂಜೆ ಪಟ್ಟಣದಲ್ಲಿ ಬಿದ್ದ ಮಳೆಯಿಂದ ಪಟ್ಟಣದ ನವೋದಯ ವಿದ್ಯಾಸಂಸ್ಥೆ ಬಳಿ ಮಳೆ ಗಾಳಿಗೆ ಎರಡು ಮರ ನೆಲಕ್ಕುರುಳಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತವಾಯಿದು. ಪಟ್ಟಣದಲ್ಲಿ ಬಿರುಗಾಳಿ ಸಮೇತ ಮಳೆ ಬಿದ್ದ ಪರಿಣಾಮ ಹಲವೆಡೆ ಮರಗಳು ದರೆಗುರುಳಿದಿದ್ದು, ನವೋದಯ ವಿದ್ಯಾಸಂಸ್ಥೆಯ ಬಳಿ ಎರಡು ಮರಗಳು ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ಅಡೆತಡೆಯಾದರೆ, ಪಟ್ಟಣದ ವಿವಿದೆಡೆಗಳಲ್ಲಿ ಮರಗಳು ಉರುಳಿ ಬಿದ್ದಿವೆ. ತಾಲೂಕಿನ ವಿವಿದೆಡೆಗಳಲ್ಲಿ ತೆಂಗು, ಅಡಕೆ ಮರಗಳು ಉರುಳಿದ್ದಲ್ಲದೆ, ಬಾಳೆ ಹಾಗೂ ತರಕಾರಿ ಗಿಡಗಳು ನೆಲಕ್ಕುರುಳಿವೆ.