ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಾಸನ ಮತದಾನ ಸಮಾಧಾನ

Srinivasa Murthy VN
Updated On : 17 Apr 2014, 10:32 am

ಕ.ಪ್ರ.ವಾರ್ತೆ ಹಾಸನ ಏ. 17
ಕೆಲವೆಡೆ ಮತಯಂತ್ರಗಳು ಕೈಕೊಟ್ಟಿದ್ದರಿಂದ ಕೆಲವು ಕಡೆ ಮತದಾನ ವಿಳಂಬವಾಗಿದನ್ನು ಬಿಟ್ಟರೆ ಜಿಲ್ಲಾದ್ಯಂತ ಗುರುವಾರ ನಡೆದ ಮತದಾನ ಶಾಂತಿಯುತವಾಗಿ ನಡೆಯಿತು. ಸಕಲೇಶಪುರ ತಾಲೂಕಿನಲ್ಲಿ ಮಧ್ಯಾಹ್ನದ ನಂತರ ಮಳೆಯಾದ ಪರಿಣಾಮ ಸ್ವಲ್ಪ ಹೊತ್ತು ಮತದಾನಕ್ಕೆ ಅಡಚಣೆ ಉಂಟಾಯಿತು. ವಯೋವೃದ್ಧರು ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಕೆಲವು ಮತದಾರರ ಹೆಸರು ಪಟ್ಟಿಯಲ್ಲಿ ನಾಪತ್ತೆ ಹಾಗೂ ಮತಯಂತ್ರ ಕೈಕೊಟ್ಟ ಪರಿಣಾಮವಾಗಿ ಮತದಾನ ವಿಬಂಳವಾಗಿ ಮತದಾನ ನಡೆದಿದ್ದನ್ನು ಬಿಟ್ಟರೆ ಜಿಲ್ಲೆಯಾದ್ಯಂತ ಮತದಾನ ಶಾಂತಿಯುತವಾಗಿ ನಡೆಯಿತು. ಬೇಲೂರು ತಾಲೂಕು ಮಾಳೇನಹಳ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ಮುಂದಾಗಿದ್ದರು.  
ಕೆಲವೆಡೆ ಅವಾಂತರ: ಕೆಲವು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಗೊಂದಲ ಉಂಟಾಗಿ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ತೆರಳಿದರು. ಗುರುತಿನ ಚೀಟಿ ಇದ್ದರೂ ಸಹ ಮತಪಟ್ಟಿಯಲ್ಲಿ ಹೆಸರು ತೆಗೆದುಹಾಕಲಾಗಿತ್ತು. ಮತ್ತೆ ಕೆಲವು ಕಡೆಗಳಲ್ಲಿ ಪತಿ ಮೃತಪಟ್ಟಿದ್ದರೆ ಪತ್ನಿಯ ಹೆಸರನ್ನು ಸಹ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಿದ್ದು ಕಂಡು ಬಂತು. ಇಂಥವರು ಮತದಾನ ಮಾಡದೆ ವಾಪಸ್ ತೆರಳಿದ ಘಟನೆಗಳು ನಡೆದವು.
ಜಿಲ್ಲೆಯಲ್ಲಿ ಒಟ್ಟು 383 ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗಿದ್ದು, 605 ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದೆ.  240 ವಿಡಿಯೋ ಕ್ಯಾಮೆರಾ, 214 ಡಿಜಿಟಲ್ ಕ್ಯಾಮೆರಾ ಅಳವಡಿಕೆ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರಿಂದ ಮತದಾನ ಶಾಂತಿಯುತವಾಗಿ ನಡೆಯಿತು.

ಮುಪ್ಪಿನ ಹಂಗಿಲ್ಲ!
ರಾಮನಾಥಪುರ: ಮತದಾನ ಎಲ್ಲರ ಆದ್ಯ ಕರ್ತವ್ಯ. ಮತದಾನ ಎಲ್ಲರ ಹಕ್ಕು. ಇದು ಗೊತ್ತಿದ್ದರೂ, ಇಂಥ ಮಹತ್ವದ ಕರ್ತವ್ಯದಿಂದ ಕೆಲವರು ನುಣುಚಿಕೊಳ್ಳುವುದು ಸಹಜ. ಆದರೆ, ಇಲ್ಲೊಬ್ಬರು ತಮ್ಮ ಇಳಿಯಸ್ಸಿನಲ್ಲೂ ಓರ್ವ ಪ್ರಜೆಯಾಗಿ ತಮ್ಮ ಕರ್ತವ್ಯ ನಿಭಾಯಿಸಿ, ಸೋಮಾರಿ ಪ್ರಜೆಗಳು ನಾಚಿಕೆಪಟ್ಟುಕೊಳ್ಳುವಂತೆ ಮಾಡಿದ್ದಾರೆ.  ಅವರ ಹೆಸರು ಎಸ್. ನರಸಮ್ಮ. ಇವರಿಗೀಗ 99 ವರ್ಷ. ಮತ್ತೊಬ್ಬರ ಆಶ್ರಯ ವಹಿಸುವಂಥ ದುರ್ಬಲ ಸ್ಥಿತಿ. ಆದರೂ, ಇವರು ಮತದಾನ ಮಾಡಿದರು.  ಕೊಣನೂರು ಗ್ರಾಮದ ಇವರು, ತಮ್ಮ ಸೊಸೆ ರಮಾಮಣಿ ಹಾಗೂ ಮಗ ವಾಸುದೇವ್ ಅವರ ಸಹಾಯದಿಂದ ಕೊಣನೂರು ಗ್ರಾಮದ ಮತಗಟ್ಟೆ ಸಂಖ್ಯೆ 181ರಲ್ಲಿ ಬೆಳಗ್ಗೆ 10:30ರ ಸುಮಾರಿಗೆ ಮತ ಚಲಾಯಿಸಿದರು.

ಕೈಕೊಟ್ಟ ಮತಯಂತ್ರ
ಈ ಬಾರಿ ಮತದಾನವು ಬೆಳಗ್ಗೆ 7ರಿಂದ ಪ್ರಾರಂಭವಾಗಿ ಸಂಜೆ 6ರವರೆಗೆ ನಡೆಯಿತು. ಹಾಸನ ನಗರದ ಕುವೆಂಪುನಗರದ ಅರವಿಂದ ಶಾಲೆಯಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ಅರ್ಧ ತಾಸಿಗೂ ಹೆಚ್ಚು ಕಾಲ ಮತದಾನ ವಿಳಂಭವಾಗಿ ಪ್ರಾರಂಭವಾಯಿತು. ಅದೇ ರೀತಿ ಚನ್ನರಾಯಪಟ್ಟಣದ ನವೋದಯ ಕಾಲೇಜಿನಲ್ಲಿ 201ನೇ ಬೂತ್‌ನಲ್ಲಿ ಮತಯಂತ್ರ ಕೆಟ್ಟ ಪರಿಣಾಮ ಬದಲಿ ಯಂತ್ರದ ವ್ಯವಸ್ಥೆ ಕಲ್ಪಿಸಲಾಯಿತು. ಅಲ್ಲಿಯವರೆಗೆ ಕೆಲ ಸಮಯ ಮತದಾನಕ್ಕೆ ಅಡ್ಡಿಯಾಯಿತು.

ನಿಯಮ ಉಲ್ಲಂಘನೆ
ಮತಗಟ್ಟೆ ವ್ಯಾಪ್ತಿಯಲ್ಲಿ ಯಾವುದೇ ವಾಹನ ನಿಲ್ಲಿಸದಂತೆ ನಿಷೇಧವಿದ್ದರೂ ಸಹ ಕೆಲವು ಕಡೆ ವಾಹನಗಳನ್ನು ಮತಗಟ್ಟೆ ಕೇಂದ್ರಕ್ಕೆ ಬಿಡಲಾಗಿತ್ತು. ಮತ್ತೆ ಕೆಲವರು ವಾಹನಗಳಲ್ಲಿ ಮತದಾರರನ್ನು ಕರೆತಂದು ಮತದಾನ ಮಾಡಿದರು. ಮತಗಟ್ಟೆಗಳಲ್ಲಿ ಅವಶ್ಯಕ ಇರುವಷ್ಟು ವಿದ್ಯುನ್ಮಾನ ಮತಯಂತ್ರಗಳನ್ನು ಒದಗಿಸಿದ್ದರಿಂದ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದೆ ಸುಲಲಿತವಾಗಿ ಮತದಾನ ನಡೆಯಿತು. ಕೈಕೊಟ್ಟಂತಹ ಮಂತ್ರಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಾಧ್ಯಮಗಳಿಗೆ ರೇವಣ್ಣ ಅಡ್ಡಿ
ದೇವೇಗೌಡರು ಮತಚಲಾಯಿಸುವುದನ್ನು ಸುದ್ದಿ ಮಾಡಲು ತೆರಳಿದ್ದ ಮಾದ್ಯಮದವರನ್ನು ಶಾಸಕ ಎಚ್.ಡಿ. ರೇವಣ್ಣ ಅವರು ಫೋಟೋ ಮತ್ತು ವೀಡಿಯೋ ಚಿತ್ರೀಕರಣ ಮಾಡದಂತೆ ತಡೆಹಾಕಿದರು. ಮತಗಟ್ಟೆಯ ಕಿಟಕಿಗಳನ್ನು ಮುಚ್ಚಿ, ಬಲವಂತವಾಗಿ ಹೊರಗೆ ಕಳುಹಿಸಲು ಯತ್ನಿಸಿದ ಘಟನೆ ನಡೆಯಿತು. ಇದನ್ನು ಮಾಧ್ಯಮದವರು ಪ್ರತಿಭಟಿಸಿದರು. ಶಾಸಕ ಎಚ್.ಡಿ. ರೇವಣ್ಣ ಅವರ ದಿಢೀರ್ ವರ್ತನೆಯ ವಿರುದ್ಧ ಅಸಮಾಧಾನಗೊಂಡರು.

ವೃದ್ಧರಿಂದ ಮತದಾನ
ವೃದ್ಧರು ತಪ್ಪದೇ ಮತದಾನ ಮಾಡಿದ್ದು ಈ ಬಾರಿಯ ವಿಶೇಷ. ಇವರ ಜೊತೆಗೆ ಅಂಗವಿಕಲರೂ ಮತದಾನ ಮಾಡಿ ಗಮನ ಸೆಳೆದರು. ವೃದ್ಧರಾದ ದೇವಮ್ಮ (89), ವೆಂಕಟಪ್ಪ (91), ಲಕ್ಷ್ಮಮ್ಮ (93), ಸಣ್ಣ ತಿಮ್ಮಯ್ಯ(83), ಜೋಸೆಫ್ ಷರೀಫ್ (76), ಅಂಗವಿಕಲ ಸ್ವಾಮಿ (45) ಮತಕೇಂದ್ರಗಳಿಗೆ ತೆರಳಿ ಮತದಾನ ಮಾಡಿದರು. ಅರಕಲಗೂಡು ತಾಲೂಕು ಕೊಣನೂರು ಗ್ರಾಮದಲ್ಲಿ 99 ವರ್ಷದ ವಯೋವೃದ್ಧೆ ಮತ ಚಲಾಯಿಸಿದರು.

ಕೆಲದಿನ ವಿಶ್ರಾಂತಿ
ಚುನಾವಣೆಯ ನಂತರ ಬೆಂಗಳೂರಿಗೆ ತೆರಳದೆ ಒಂದಷ್ಟು ದಿನ ವಿಶ್ರಾಂತಿ ಪಡೆಯುವುದಾಗಿ ದೇವೇಗೌಡರು ತಿಳಿಸಿದ್ದಾರೆ. ಮತ ಚಲಾಯಿಸಿದ ನಂತರ, ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಫಲಿತಾಂಶದವರೆವಿಗೂ ಜಿಲ್ಲೆಯಲ್ಲೇ ಉಳಿದು ಒಂದಿಷ್ಟು ದಿನ ಪ್ರಕೃತಿ ಚಿಕಿತ್ಸೆ ಪಡೆದು, ನಂತರ ಜಿಲ್ಲೆಯ ಪ್ರವಾಸ ಕೈಗೊಂಡು ತಮ್ಮ ಹಳೆಯ ಗೆಳೆಯರನ್ನು ಭೇಟಿ ಮಾಡಿ ಅವರೊಂದಿಗೆ ಕಾಲ ಕಳೆಯುವುದಾಗಿ ಹೇಳಿದರು.

ಮತಗಟ್ಟೆ ಬಳಿ ಮತಯಾಚನೆ
2196 ಮತಕೇಂದ್ರಗಳ ಪೈಕಿ ಕೆಲವು ಕಡೆಗಳಲ್ಲಿ ಅಭ್ಯರ್ಥಿಯ ಪರ ಕಾರ್ಯಕರ್ತರು, ಮುಖಂಡರು ಅಂತಿಮ ಕ್ಷಣದಲ್ಲಿ ಮತಯಾಚನೆ ಮಾಡಿದರು. ಮತ್ತೆ ಕೆಲವು ಮತಕೇಂದ್ರಗಳ ಕಡೆಗಳಲ್ಲಿ ಅಭ್ಯರ್ಥಿಗಳ ಪರವಾಗಿ ಇದ್ದಂತವರು ಅಂತಿಮ ಕ್ಷಣದ ಮತಯಾಚನೆ ಮಾಡದೆ ಮತಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸಿದ್ದರು. ಅಲ್ಲದೇ, ಕೆಲವೆಡೆ ಕೆಲ ಅಭ್ಯರ್ಥಿಗಳ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತಾದರೂ, ಘರ್ಷಣೆ ನಡೆಯಲಿಲ್ಲ.

ಹೊಸಬರ ಪರದಾಟ
ಇದೇ ಮೊಟ್ಟಮೊದಲ ಬಾರಿಗೆ ಮತದಾನ ಮಾಡಿದ ಯುವಕರು ಮತದಾನದ ಸಂದರ್ಭದಲ್ಲಿ ವಿಚಲಿತರಾದರು. ಕೆಲವರು ಮತದಾನ ಮಾಡುವ ವಿಧಾನ ಅರಿಯದ ಕಾರಣ ಪರಿತಪ್ಪಿಸಿದರೆ, ಮತ್ತೆ ಕೆಲವು ಮತದಾನ ಮಾಡಲು ಬರದೇ ತಬ್ಬಿಬ್ಬಾದರು. ಈ ಸಂದರ್ಭದಲ್ಲಿ ಯುವಕರ ನೆರವಿಗೆ ಚುನಾವಣಾಧಿಕಾರಿಗಳು ಬಂದು ಮತದಾನ ಮಾಡುವ ಬಗ್ಗೆ ಮಾರ್ಗದರ್ಶನ ಮಾಡಿದರು.

ಅಧಿಕಾರಿಗಳಿಂದ ಮತದಾನ
ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಸಹ ಬೆಳಗ್ಗೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು. ಇದಲ್ಲದೇ, ಜಿಲ್ಲೆಯ ಹಲವಾರು ಅಧಿಕಾರಿ ವರ್ಗ ಹಾಗೂ ಸರ್ಕಾರಿ ನೌಕರರು ಮತ ಚಲಾಯಿಸಿ ತಮ್ಮ ಹಕ್ಕುನ್ನು ಸಾರ್ಥಕಪಡಿಸಿಕೊಂಡರು.

ಹನ್ಯಾಳು ಗ್ರಾಮದಲ್ಲಿ ಮತ ಚಲಾಯಿಸಿದ ಮಂಜು
ಅರಕಲಗೂಡು: ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಎ. ಮಂಜು ಅವರು ಸ್ವಗ್ರಾಮ ಹನ್ಯಾಳು ಗ್ರಾಮದ ಮತಕಟ್ಟೆ ಸಂಖ್ಯೆ 276ರಲ್ಲಿ ಮತಚಲಾಯಿಸಿದರು. ಬೆಳಿಗ್ಗೆ 8.25ಕ್ಕೆ ಸರಿಯಾಗಿ ಮತಕಟ್ಟೆಗೆ ಪತ್ನಿ ತಾರಾ ಅವರೊಂದಿಗೆ ತೆರಳಿದ ಅವರು ಮತಚಲಾವಣೆ ಮಾಡಿದರು. 363ನೇ ಕ್ರಮಸಂಖ್ಯೆಯ ಎ. ಮಂಜು 63ನೇಯವರಾಗಿ ಮತ ಹಾಕಿದರು.  ನಂತರ ಎರಡು ಬೆಟ್ಟುಗಳನ್ನು ತೋರಿ ಗೆಲುವಿನ ಸಂಕೇತದ ಮೂಲಕ ಹರ್ಷ ವ್ಯಕ್ತಪಡಿಸಿದರು. ನಂತರ ಅವರ ಪತ್ನಿ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ತಾರಾ ಅವರು 64ನೆಯವರಾಗಿ ಮತ ಚಲಾಯಿಸಿದರು. ಇದಕ್ಕೂ ಮುನ್ನ ಮನೆಯಲ್ಲಿ ದೇವರ ಪೂಜೆ ಸಲ್ಲಿಸಿ ಮನೆಯಿಂದ ಹೊರಬರುವ ವೇಳೆ ಪತ್ನಿ ತಾರಾ ಅವರು ಆರತಿ ಎತ್ತಿ, ತಿಲಕವನ್ನಿರಿಸಿದರು.

'ಪಕ್ಷ ಸುತ್ತಿ ಬಂದವರ ವರ್ತನೆ ನಾಚಿಕೆಗೇಡು'
ಸಕಲೇಶಪುರ: ಜಾತ್ಯಾತಿತ ಜನತಾದಳ, ಬಿಎಸ್ಪಿ, ಕೆಜೆಪಿ ಹೀಗೆ ಎಲ್ಲ ಪಕ್ಷಗಳನ್ನು ಸುತ್ತಿ ಬಂದವರು ಇಂದು  ಪ್ರಗತಿಪರರ ಹೆಸರಿನಲ್ಲಿ ಇಂದು ಕಾಂಗ್ರೆಸ್ ಬೆಂಬಲಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಜೈಭೀಮ್ ಮಂಜು ಟೀಕಿಸಿದ್ದಾರೆ.
ಕೆಜೆಪಿ ಪಕ್ಷ ಪ್ರಾರಂಭವಾದ ಸಂದರ್ಭದಲ್ಲಿ ದಲಿತ ಮುಖಂಡ ಬೆಳಗೋಡು ಉಮೇಶ ಅವರನ್ನು ಕರೆತಂದು ಗೆಲ್ಲಿಸುತ್ತೇವೆ ಎಂದು ಹೇಳಿ ಸಾಕಷ್ಟು ಅನ್ಯಾಯ ಮಾಡಿದವರು ಈಗ ಪ್ರಗತಿಪರರ ಬ್ಯಾನರ್ ಹಿಡಿದುಕೊಂಡು ಕಾಂಗ್ರೆಸ್‌ಗೆ ಬೆಂಬಲಿಸುತ್ತಿದ್ದಾರೆ. ಯಾವ ಅಂಶದಲ್ಲೂ ನಾಯಕತ್ವ ಗುಣದ ಇಲ್ಲದ ಕೆಲವು ಪಟ್ಟಭದ್ರ ಹಿತಶಕ್ತಿಗಳು ಪ್ರಗತಿ ಪರರ ಹೆಸರಿನಲ್ಲಿ ಮತದಾರರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಆದರೆ ಕ್ಷೇತ್ರದ  ಪ್ರಜ್ಞಾವಂತ  ಮತದಾರರು ಈ ಬಾರಿ ಅಭ್ಯರ್ಥಿಯ ವ್ಯಕ್ತಿತ್ವ, ಚಾರಿತ್ರ್ಯ ನೋಡಿ ಮತ ಹಾಕುವರು ಎಂದು ಹೇಳಿದ್ದಾರೆ. ತಾಲೂಕಿನ ಸ್ವಾಭಿಮಾನಿ ದಲಿತರು ಕುಮಾರಸ್ವಾಮಿಯವರ ನಾಯಕತ್ವದ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದು ಜೈಭೀಮ್ ಮಂಜು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement