ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲಾದ್ಯಂತ ಭಾರೀ ಮಳೆ, ಅಪಾರ ನಷ್ಟ

Srinivasa Murthy VN
Updated On : 18 Apr 2014, 11:41 am

ಹಾಸನ: ಹಾಸನ ಜಿಲ್ಲಾದ್ಯಂತ ಶುಕ್ರವಾರ ಗುಡುಗು ಸಹಿತ ಮಳೆಯಾದ ಪರಿಣಾಮ ಕೆಲವು ಕಡೆಗಳು ಮರಗಳು ಧರೆಗೆ ಉರುಳಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಹಾಸನ, ಆಲೂರು, ಸಕಲೇಶಪುರ ಸೇರಿದಂತೆ ಜಿಲ್ಲಾದ್ಯಾಂತ ಮಧ್ಯಾಹ್ನದ ನಂತರ ಇದ್ದಕ್ಕಿದ್ದಂತೆ ಭಾರಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಿದೆ. ಇದರಿಂದ ಆಲೂರು ಸೇರಿದಂತೆ ಇತರೆ ಕಡೆಗಳಲ್ಲಿ ಮರಗಳು ಧರೆಗೆ ಉರಳಿ, ವಿದ್ಯುತ್ ಕಂಬಗಳ ತಂತಿಗಳು ಕಟ್ ಆಗಿ ಕೆಲವು ಸಮಯ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮತ್ತೆ ಭಾರೀ ಗಾಳಿ ಉಂಟಾಗಿದ್ದರಿಂದ ಬೋರ್ಡ್‌ಗಳು, ಕಂಬಗಳು ಮುರಿದು ಬಿದ್ದವು.
ಆಲೂರಿನಲ್ಲೂ ಹಾನಿ: ಆಲೂರಿನ ತಾಲೂಕಿನ ವಿವಿದೆಡೆ ಸಂಜೆ ಸುರಿದ ಧಾರಾಕಾರವಾಗಿ ಗುಡುಗು, ಗಾಳಿ ಸಮೇತ ಸುರಿದ ಮಳೆಗೆ ಮಾವನೂರು, ಕಿರಗಡಲು, ಹಂಪನಕುಪ್ಪೆ, ಚೆನ್ನಾಪುರ ಸೇರಿದಂತೆ ನಾನಾ ಗ್ರಾಮದಲ್ಲಿ ಮರಗಳು ಮನೆಯ ಮೇಲೆ ಬಿದ್ದು, ರಸ್ತೆಗಳಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿ, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕಿರುಗಡಲು ಗ್ರಾಮ ಹಾಗೂ ಕೊಪ್ಪಲು ಗ್ರಾಮದ ಯೋಗೇಶ್, ಶಿವಣ್ಣ, ದ್ಯಾವೇಗೌಡ, ಸಣ್ಣಸ್ವಾಮಿ, ಚಿನ್ನಸ್ವಾಮಿ, ಜಯಣ್ಣ, ಮಲ್ಲೇಶ್, ದೇವರುಮನೆ ಕೊಪ್ಪಲು ಗ್ರಾಮದ ಮರೀಗೌಡ, ಬಸಪ್ಪ, ವೀರಭದ್ರ, ನಂಜುಂಡೇಗೌಡ, ಶಿವಶಂಕರ್, ಜವರಶೆಟ್ಟರ್, ಬಾಲಕೃಷ್ಣ, ಸಣ್ಣಶೆಟ್ಟಿ, ಸ್ವಾಮಿಗೌಡ, ದೇವರಾಜೇಗೌಡ ಹಾಗೂ ಮುಂತಾದವರ ಮನೆಯ ಹೆಂಚುಗಳು ಹಾಗೂ ಚಾವಣಿಗಳು ಹಾರಿಹೋಗಿದೆ.
ಮುರಿದ ಹೆಬ್ಬಾಗಿಲು: ಕಿರಗಡಲು ಗ್ರಾಮದ ಹೆಬ್ಬಾಗಿಲು ಗಾಳಿಯ ರಭಸಕ್ಕೆ ಮುರಿದು ಬಿದ್ದಿದೆ. ಈ ಭಾಗದಲ್ಲಿ ಇದು ಈ ವರ್ಷದ ಪ್ರಥಮ ಮಳೆಯಾಗಿದ್ದು, ಕಳೆದ ವರ್ಷ ಕೂಡ ವರ್ಷದ ಪ್ರಥಮ ಮಳೆಯಲ್ಲಿ ಗಾಳಿ ಹಾಗೂ ಮಳೆಯ ರಭಸಕ್ಕೆ ಮಾವನೂರು, ಕಿರಗಡಲು, ಹಂಪನಕುಪ್ಪೆ ಗ್ರಾಮದಲ್ಲಿ ಹಾನಿಯಾಗಿತ್ತು. ಈವರೆಗೂ ಪರಿಹಾರ ಬಂದಿಲ್ಲ ಎಂದು ಜನರು ಆರೋಪಿಸಿದ್ದಾರೆ.
ರಜೆಯಂದೇ ಅವಗಢ: ಅಪಾರ ಪ್ರಮಾಣ ನಷ್ಟ ಉಂಟಾಗಿದ್ದು, ಪುನಃ ಮಳೆ ಬಂದರೆ ಅವರು ಪಾಡು ಹೇಳತೀರದಾಗಿದೆ. ಏಕೆಂದರೆ ಗ್ರಾಮಲೆಕ್ಕಿಗರು, ರೆವಿನ್ಯೂ ಇನ್ಸ್‌ಪೆಕ್ಟರ್‌ಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ನಷ್ಟಕ್ಕೆ ಪರಿಹಾರ ನೀಡಬೇಕಾಗಿದೆ. ಆದರೆ ಚುನಾವಣೆಯ ಕಾರ್ಯಕ್ಕೆ ಹೋಗಿದ್ದ ಇವರೆಲ್ಲರೂ ಇಂದು ಗುಡ್‌ಫ್ರೈಡೇ ಪ್ರಯುಕ್ತ ರಜೆ ಇದ್ದ ಕಾರಣ ಮನೆಯಲ್ಲಿ ಇದ್ದ ಕಾರಣ ವಿಶ್ರಾಂತಿಗೆ ಮೊರೆ ಹೋಗಿದ್ದರು. ಶನಿವಾರ ಕೆಲಸಕ್ಕೆ ಬರಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement