ಸ್ಟ್ರಾಂಗ್ ರೂಂನಲ್ಲಿ 'ಭವಿಷ್ಯ' ಭದ್ರ
ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಮತಯಂತ್ರಗಳನ್ನು ಹಾಸನ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿ ಇಡಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ನೇತೃತ್ವದಲ್ಲಿ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮತಯಂತ್ರಗಳ ಕಾವಲಿಗಾಗಿ ಪ್ರತಿ ನಿತ್ಯ 72 ಜನ ಪೊಲೀಸರು, 24 ಮಂದಿ ಸಿಐಎಸ್ಎಫ್ ಸಿಬ್ಬಂದಿ ಜೊತೆಗೆ ಕೆಎಸ್ಆರ್ಪಿ ತುಕಡಿ ಮತ್ತು ಸ್ಥಳೀಯ ಪೊಲೀಸರನ್ನು ಕಾವಲಿಗೆ ನಿಯೋಜಿಸಲಾಗಿದೆ.
ಜೊತೆಗೆ ಜಿಲ್ಲಾಡಳಿತ ವತಿಯಿಂದ ಒಬ್ಬ ಗೆಜೆಟೆಡ್ ಆಫೀಸರ್ ಹಾಗೂ ಒಬ್ಬ ಎಲೆಕ್ಟ್ರಿಕಲ್ ಎಂಜಿನಿಯರ್ ಅವರನ್ನು ನೇಮಿಸಲಾಗಿದೆ. ಇದಲ್ಲದೆ, ಜನರೇಟರ್ ವ್ಯವಸ್ಥೆ ಜೊತೆಗೆ ಸಿಸಿ ಟಿವಿಯನ್ನೂ ಸ್ಟ್ರಾಂಗ್ ರೂಂ ಬಳಿ ಅಳವಡಿಸಲಾಗಿದೆ. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ, ಉಪ ವಿಭಾಗಾಧಿಕಾರಿ ಶರತ್, ಡಿವೈಎಸ್ಪಿ ಬೀಮಕ್ಕ ನಾಯಕ್ ಹಾಗೂ ಇತರರು ಇದ್ದರು.
ಮತದಾರರಿಗೆ ರೇವಣ್ಣ ಅಭಿನಂದನೆ
ಹಾಸನ: ಹದಿನಾರನೇ ಲೋಕಸಭಾ ಚುನಾವಣೆಯು ಶಾಂತಿಯುತವಾಗಿ ನಡೆಯಲು ಹಾಗೂ ಎಚ್.ಡಿ. ದೇವೇಗೌಡರ ಪರ ಮತ ನೀಡಿದಂತಹ ಕ್ಷೇತ್ರದ ಎಲ್ಲಾ ಮತ ಬಾಂಧವರಿಗೆ ಶಾಸಕ ಎಚ್.ಡಿ. ರೇವಣ್ಣ ಅಭಿನಂದನೆ ಸಲ್ಲಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವ ಲೋಪ ಆಗದಂತೆ ಮತದಾನ ನಡೆಯಲು ಮತದಾರ ಪ್ರಭುಗಳು ಸಹಕಾರ ನೀಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ದೇವೇಗೌಡರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಆದ್ದರಿಂದ ಪಕ್ಷದ ಪರವಾಗಿ ಹೆಚ್ಚಿನ ಮತದಾನ ಮಾಡಿದ ಎಲ್ಲರಿಗೂ ಪಕ್ಷದ ವತಿಯಿಂದ ಅಭಿನಂದಿಸುವುದಾಗಿ ಹೇಳಿದರು.
ರೇವಣ್ಣ ಕ್ಷಮೆ: ದೇವೇಗೌಡರು ಮತದಾನ ಮಾಡುವ ವೇಳೆ ಮಾಧ್ಯಮದವರನ್ನು ರೇವಣ್ಣನವರೇ ಸ್ವತಃ ಮಾಧ್ಯಮದವರನ್ನು ಹೊರದಬ್ಬಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮತದಾನದ ವೇಳೆ ಹೆಚ್ಚು ಜನ ಒಟ್ಟಿಗೆ ಬಂದ ಕಾರಣ ಚುನಾವಣಾಧಿಕಾರಿಗಳು ನಮಗೆ ನೋಟಿಸ್ ನೀಡುವುದಾಗಿ ಹೇಳಿದರು.
ಹಾಗಾಗಿ, ನಾನು ದೇವೇಗೌಡರು ಮತದಾನ ಮಾಡುವುದನ್ನು ಪೋಟೋ ಹಾಗೂ ದೃಶ್ಯವನ್ನು ತೆಗೆಯಬೇಡಿ ಅಂದೆ ಅಷ್ಟೇ. ಇದರಿಂದ ಮಾದ್ಯಮದವರು ಅನ್ಯಥಾ ಭಾವಿಸಬಾರದು. ಇದರಿಂದ ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ಅರಕಲಗೂಡು: ಶೇ.79.86 ಮತದಾನ
ಅರಕಲಗೂಡು: ಇಲ್ಲಿನ ವಿಧಾನಸಭಾ ಕ್ಷೇತ್ರದ ಒಟ್ಟು 285 ಮತಕಟ್ಟೆಗಳ ಶೇಕಡಾವಾರು ಸರಾಸರಿ 79.86 ಮತದಾನ ನಡೆದಿದೆ. 2ಲಕ್ಷದ 3 ಸಾವಿರದ211 ಮತದಾರರ ಪೈಕಿ 1,62,289 ಮತದಾರರು ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ 105146 ಪುರುಷ ಮತದಾರರಿದ್ದು, ಇವರಲ್ಲಿ 83,416 ಮತದಾರರು ಮತ ಚಲಾಯಿಸಿದರೆ, 98054 ಮಹಿಳಾ ಮತದಾರರ ಪೈಕಿ 78873 ಮತದಾರರು ಮತ ಚಲಾಯಿಸಿದ್ದಾರೆ.
ಮತ ಚಲಾಯಿಸಿಲ್ಲ: ಕ್ಷೇತ್ರದಲ್ಲಿ 11 ಮಂದಿ ಮಂಗಳಮುಖಿಯರು ಇದ್ದು, ನಿನ್ನೆ ನೆಡೆದ ಚುನಾವಣೆಯಲ್ಲಿ ಯಾವೊಬ್ಬ ಮಂಗಳಮುಖಿಯೂ ಮತ ಚಲಾವಣೆ ಮಾಡಿಲ್ಲ.
ಗೋಹಳ್ಳಿಯಲ್ಲಿ ಅಧಿಕಮತದಾನ- ಅರಕಲಗೂಡು ವಿಧಾನಸಭಾ ಕ್ಷೇತ್ರದ ಹಳ್ಳಿ ಮೈಸೂರು ಹೋಬಳಿ ಗೋಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಮತಕಟ್ಟೆಯಲ್ಲಿ ಅತ್ಯಧಿಕ ಮತದಾನ ನಡೆದಿದೆ. ಶೇಕಡಾವಾರು 94ರಷ್ಟು ಮತದಾನ ನಡೆದಿದ್ದು, 530 ಮತದಾರರಲ್ಲಿ 496 ಮತದಾರರು ಮತ ಚಲಾಯಿಸಿದ್ದಾರೆ. 279 ಪುರುಷ ಮತದಾರರ ಪೈಕಿ 207 ಮಂದಿ ಪುರುಷ ಮತದಾರರು ಮತ ಚಲಾಯಿಸಿದರೆ, 251 ಮಹಿಳಾ ಮತದಾರರ ಪೈಕಿ 250 ಮತದಾರರು ಮತ ಚಲಾಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಚಿತ್ರಕಲಾ ಮೇಳ ಉದ್ಘಾಟನೆ
ಹೊಳೆನರಸೀಪುರ: ಪಟ್ಟಣದ ಮೈಸ್ ಕಂಪ್ಯೂಟರ್ಸ್ ತರಬೇತಿ ಕೇಂದ್ರದಲ್ಲಿ ಬೇಸಿಗೆ ಶಿಬಿರದ ಚಿತ್ರಕಲಾ ಮೇಳದಲ್ಲಿ ಚಿತ್ರ ಬಿಡಿಸುವುದರ ಮುಖಾಂತರ ಜೆಎಸ್ಎಸ್ ವಿದ್ಯಾಸಂಸ್ಥೆಯ ಚಿತ್ರಕಲಾಶಿಕ್ಷಕ ಬಿ. ಸೋಮಶೇಖರ್ ಉದ್ಘಾಟನೆ ನೆರವೇರಿಸಿ, ಚಿತ್ರಕಲೆಯ ಮಹತ್ವವನ್ನು ವಿವರಿಸಿದರು. ಮೈಸ್ ಸಂಸ್ಥೆಯ ವ್ಯವಸ್ಥಾಪಕ ಎಚ್.ಬಿ. ತಮ್ಮಯ್ಯ ಮಾತನಾಡಿ, ಮೈಸ್ ಸಂಸ್ಥೆ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿದ್ದು, ಈ ಶಿಬಿರದಲ್ಲಿ ಬೇಸಿಕ್ ಕಂಪ್ಯೂಟರ್, ಇಂಗ್ಲೀಷ್ ಗ್ರಾಮರ್, ಚಿತ್ರಕಲೆ, ಯೋಗ, ಮನರಂಜನೆಯ ಆಟಗಳು, ಸಂಗೀತ, ಹೊರ ಪ್ರವಾಸ, ವ್ಯಕ್ತಿತ್ವ ವಿಕಸನ, ಭಗವದ್ಗೀತೆ, ವೇದಿಕ್ ಗಣಿತ, ಕನ್ನಡ ವ್ಯಾಕರಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಕ್ಕಳಿಗೆ ಆಯೋಜಿಸಲಾಗಿದೆ. ಇಂತಹ ಶಿಬಿರವನ್ನು ಹಮ್ಮಿ ಕೊಳ್ಳುವುದರಿಂದ ಮಕ್ಕಳು ಓದುವುದರಜೊತೆಗೆ ಈ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಅವರ ಜ್ಞಾನಾರ್ಜನೆ ಹೆಚ್ಚಿಸಲು ಅನುಕೂಲವಾಗುತ್ತದೆ ಎಂದರು.
ಕರಿಯಮ್ಮ ದೇವಿ ಜಾತ್ರೆ ಆರಂಭ
ಜಾವಗಲ್: ಜಾವಗಲ್ ಹೋಬಳಿ ನೇರ್ಲಿಗೆ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿಯವರ ಜಾತ್ರಾ ಮಹೋತ್ಸವ ಏ. 18 ರಿಂದ ಪ್ರಾರಂಭವಾಗಿದ್ದು, ಏ. 22 ರವರೆಗೆ ನಡೆಯಲಿದೆ. ಶುಕ್ರವಾರ ಬಾನ, ಶನಿವಾರ ಬಿಡದಿ, ಭಾನುವಾರ ಸಂಜೆ ಬೇವಿನ ಉಡುಗೆ, ಚಂದ್ರಮಂಡಲೋತ್ಸವ., ಅಶ್ವವಾಹನೋತ್ಸವ, ಗಜವಾಹನೋತ್ಸವಗಳು ನಡೆದವು. ಏ. 21ರಂದು ಮಧ್ಯಾಹ್ನ 1.30ಕ್ಕೆ ದಿವ್ಯ ರಥೋತ್ಸವವು ನಡೆಯಲಿದೆ. ಮಂಗಳವಾ ಓಕುಳಿ ಉತ್ಸವವು ನಡೆಯಲಿದೆ. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯವರ ಕೃಪೆಗೆ ಪಾತ್ರರಾಗುವಂತೆ ಸಮಿತಿಯ ಪರವಾಗಿ ಎನ್.ಎಂ. ಮಲ್ಲೇಗೌಡ ತಿಳಿಸಿದ್ದಾರೆ.
ಕಡೂರಲ್ಲಿ ಶೇ. 65 ಮತದಾನ
ಕಡೂರು: ಕಡೂರು ಹಾಸನ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಲೋಕಸಭೆ ವ್ಯಾಪ್ತಿಯ 127ನೇ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಮನವೊಲಿಕೆಯ ಮೂಲಕ ಮತದಾನ ಬಹಿಷ್ಕಾರ ಹಿಂಪಡೆದ ಘಟನೆ ಸೇರಿದಂತೆ ಸಣ್ಣ ಪುಟ್ಟ ಪ್ರಕರಣಗಳು ನಡೆದದ್ದು ಬಿಟ್ಟರೆ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯುವ ಮೂಲಕ ಸುಮಾರು ಶೇ. 65ರಷ್ಟು ಮತದಾನವಾಯಿತು.
'ತ್ವರಿತ ನ್ಯಾಯವೇ ಉದ್ದೇಶ'
ಅರಕಲಗೂಡು: ತಾಲೂಕಿನ ಜನತೆಗೆ ಶೀಘ್ರ ಮತ್ತು ತ್ವರಿತಗತಿಯಲ್ಲಿ ನ್ಯಾಯ ಒದಗಿಸುವುದು ನ್ಯಾಯಾಲಯದ ಉದ್ದೇಶವಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕಂಬೇಗೌಡ ತಿಳಿಸಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಇತ್ತೀಚೆಗೆ ನೂತನವಾಗಿ ಪ್ರಾರಂಭವಾಗಿರುವ ಅಪರ ಸಿವಿಲ್ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಹೆಚ್ಚು ಪ್ರಕರಣಗಳು ಇತ್ಯರ್ಥಗೊಳ್ಳದೆ ಬಾಕಿ ಉಳಿದಿರುವುದರಿಂದ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಮತ್ತೊಂದು ನ್ಯಾಯಾಲಯ ಪ್ರಾರಂಭ ಮಾಡಲಾಗಿದೆ. ಈಗಾಗಲೇ ಸರ್ಕಾರ ನ್ಯಾಯಾಧೀಶರನ್ನು ನೇಮಕ ಮಾಡಿದ್ದು, ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಕಿರಿಯ ಶ್ರೇಣಿ ನಾಯಾಧೀಶ ಗಿರೀಶ್, ನೂತನ ನ್ಯಾಯಾಧೀಶ ಕುರಾಣಿಕಾಂತ್, ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಖಜಾಂಚಿ ಮಹೇಶ್, ಹಿರಿಯ ವಕೀಲರುಗಳಾದ ನಂಜುಂಡೇಗೌಡ, ವಕೀಲರಾದ ವಿಜಯಕುಮಾರ, ಓದೇಗೌಡ, ಚಲುವೇಗೌಡ, ಯೋಗೇಶ್ ಹಾಗೂ ಇತರರು ಇದ್ದರು.
ಜೋಸೆಫ್ ಕಾಲೇಜ್ ವಾರ್ಷಿಕೋತ್ಸವ
ಹಾಸನ: ನಗರದ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತಾಧಿಕಾರಿ ಐವನ್ ಮಂಡೋನ್ಸಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲೇಖಕ ಜ.ಹೊ. ನಾರಾಯಣಸ್ವಾಮಿ ಪಾಲ್ಗೊಂಡು ಮಾತನಾಡಿದರು.
ಶ್ರಮಪಟ್ಟು ಓದಿದರೆ ಸಾಧನೆ ಸಾಧ್ಯ: ಮಲ್ಲೇಶ್
ಹಾಸನ: ವಿದ್ಯಾರ್ಥಿಗಳು ಉದಾಸೀನತೆ ಬಿಟ್ಟು ಶ್ರಮಪಟ್ಟು ಓದಿದರೆ ಸಾಧನೆ ಸಾಧ್ಯ ಎಂದು ಹಾಸನದ ದೇವೇಗೌಡ ನಗರದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪಿ.ಎಂ. ಮಲ್ಲೇಶ್ ತಿಳಿಸಿದರು. ನಗರದ ಬಿಳಿಯಮ್ಮ ಈರೇಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಗುರುಕುಲದ ವಿದ್ಯಾಭ್ಯಾಸ ರೂಢಿಯಲ್ಲಿತ್ತು. ಆಧುನಿಕ ಯುಗದಲ್ಲಿ ಇಂದು ಮನೆಯ ಬಾಗಿಲಿಗೇ ಶಿಕ್ಷಣ ನೀಡುವ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದರು. ಸಲಹೆ: ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ರಾಜಾನಾಯಕ್, ವಿದ್ಯೆಯ ಮಹತ್ವವನ್ನು ತಿಳಿಸಿದರು. ಕಾಲೇಜಿನಲ್ಲಿ ಇರುವ ವ್ಯವಸ್ಥೆಯ ಸದುಪಯೋಗ ಪಡೆಯುವಂತೆ ನೀಡಿ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶೇ. 50ರಷ್ಟು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಇರುವುದನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಶಿಕ್ಷಣದ ಗುರಿ: ಬಿಈಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಅಜಿತ್ ಪ್ರಸಾದ್ ಮಾತನಾಡಿ, ಮನೋವಿಕಾಸ ಶಿಕ್ಷಣ ಗುರಿ ಎಂದು ತಿಳಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಅನಿಸಿಕೆ ಮತ್ತು ಕಾಲೇಜಿನ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಿಈಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎ. ರೇಖಾ ಮಾತನಾಡಿ, ಸತತ ಪರಿಶ್ರಮದಿಂದ ವಿದ್ಯಾರ್ಥಿಗಳು ಸಾಧನೆ ಮಾಡಿದಲ್ಲಿ ಶಿಕ್ಷಕರ ಪ್ರಯತ್ನ ಸಾರ್ಥಕ ಎಂದರು.