ದುರಂತ ನಡೆಯೋಕೆ ಕಾಯ್ತಾ ಇದೀರಾ ?
-ಎಚ್.ಡಿ. ಗುರುಪ್ರಸಾದ್
ಹೊಳೆನರಸೀಪುರ: ಪಟ್ಟಣದ ಅರಕಲಗೂಡು ರಸ್ತೆಯಲ್ಲಿನ ಮುಖ್ಯ ಪಂಪ್ ಹೌಸ್ ಬಳಿಯೇ ಇರುವ ಮೂರು ದಶಕಗಳಿಗೂ ಹಳೆಯದಾದ ನೀರಿನ ಟ್ಯಾಂಕ್ ಶಿಥಿಲಗೊಳ್ಳುತ್ತಿರುವುದಲ್ಲದೇ, ನೀರು ಸೋರ ತೊಡಗಿ ಅಪಾಯದ ಮುನ್ಸೂಚನೆ ನೀಡುತ್ತಿದೆ.
ಸುಮಾರು ಮೂರು ದಶಕಗಳಿಗೂ ಹಳೆಯದಾದ ಅರಕಲಗೂಡು ರಸ್ತೆಯಲ್ಲಿನ 1 ಲಕ್ಷ ಗ್ಯಾಲನ್ ನೀರು ಸಂಗ್ರಹಣಾ ಸಾಮರ್ಥ್ಯದ ನೀರಿನ ಟ್ಯಾಂಕ್ನ ಸ್ಥಿತಿ ಗಮನಿಸಿದ ಪುರಸಭೆಯ ನಿರ್ಲಕ್ಷತೆಯಿಂದಾಗಿ ಟ್ಯಾಂಕ್ನಿಂದ ನಿತ್ಯವೂ ನೀರು ಸೋರತೊಡಗಿರುವುದಲ್ಲದೇ, ಟ್ಯಾಂಕ್ನ ಪಿಲ್ಲರ್ಗಳಲ್ಲಿನ ಗಾರೆ ಕಿತ್ತುಹೋಗಿ ಕಬ್ಬಿಣದ ಸರಳುಗಳು ಕಾಣತೊಡಗಿದೆ. ಅಷ್ಟೇ ಅಲ್ಲ, ಟ್ಯಾಂಕಿನ ತಳಭಾಗ ಸ್ವಲ್ಪ ಸ್ವಲ್ಪವಾಗಿಯೇ ಕಿತ್ತು ಬೀಳುತ್ತಿರುವುದಲ್ಲದೇ ತಳಭಾಗದಲ್ಲಿ ಕಬ್ಬಿಣದ ಸರಳುಗಳು ಕಾಣತೊಡಗಿರುವುದು ಅಪಾಯದ ಮುನ್ಸೂಚನೆ ತೋರುತ್ತಿವೆ.
ಪಟ್ಟಣ ವ್ಯಾಪ್ತಿಯಲ್ಲಿ ಅರಕಲಗೂಡು ರಸ್ತೆಯಲ್ಲಿನ 1 ಲಕ್ಷ ಗ್ಯಾಲನ್ ಸಾಮರ್ಥ್ಯದ 1 ಟ್ಯಾಂಕ್ ಅಲ್ಲದೇ, ಹಾಸನ-ಮೈಸೂರು ರಸ್ತೆಯಲ್ಲಿ ತಲಾ 1 ಲಕ್ಷ ಗ್ಯಾಲನ್ ಸಾಮರ್ಥ್ಯದ 2 ಟ್ಯಾಂಕ್ಗಳು, ಗ್ರೀನ್ ವುಡ್ ಶಾಲೆಯ ಬಳಿ 1 ಲಕ್ಷ ಗ್ಯಾಲನ್ ಸಾಮರ್ಥ್ಯದ 1 ಟ್ಯಾಂಕ್, ಅಂಬೇಡ್ಕರ್ ನಗರದಲ್ಲಿ 1 ಲಕ್ಷ ಗ್ಯಾಲನ್ ಸಾಮರ್ಥ್ಯದ 1 ಟ್ಯಾಂಕ್, ಕೋಟೆ ಪಂಪ್ ಹೌಸ್ನಲ್ಲಿ 1 ಲಕ್ಷ ಗ್ಯಾಲನ್ ಸಾಮರ್ಥ್ಯದ 1 ಟ್ಯಾಂಕ್ ಹಾಗೂ 30 ಸಾವಿರ ಗ್ಯಾಲನ್ ಸಾಮರ್ಥ್ಯದ 1 ಟ್ಯಾಂಕ್ ಹಾಗೂ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರಗೊಳಗಿರುವ 50 ಸಾವಿರ ಗ್ಯಾಲನ್ ಸಾಮರ್ಥ್ಯದ 1 ಟ್ಯಾಂಕ್ ಸೇರಿ ಒಟ್ಟು 11 ನೀರಿನ ಓವರ್ ಹೆಡ್ ಟ್ಯಾಂಕ್ಗಳಿವೆ.
ಇವೆಲ್ಲಕ್ಕೂ ಅರಕಲಗೂಡು ರಸ್ತೆಯಲ್ಲಿ ಹೇಮಾವತಿ ನದಿ ಪಕ್ಕದಲ್ಲಿಯೇ ಇರುವ ಪಂಪ್ಹೌಸ್ನಿಂದಲೇ ನೀರು ಸರಬರಾಜಾಗುತ್ತದೆ. ಇವುಗಳಲ್ಲಿ ಹಳೆಯ ಟ್ಯಾಂಕ್ ಆದ, ಅರಕಲಗೂಡು ರಸ್ತೆಯಲ್ಲಿನ ಪಂಪ್ಹೌಸ್ ಪಕ್ಕದಲ್ಲೇ ಇರುವ ನೀರಿನ ಟ್ಯಾಂಕ್ ನ ತಳಭಾಗದ ಗಾರೆಯು ದಿನೇ ದಿನೇ ಉದುರಿ ಹೋಗ ತೊಡಗಿ ಕಬ್ಬಿಣದ ಸರಳುಗಳು ಕಾಣತೊಡಗಿವೆ. ಅಲ್ಲದೇ ಇದೇ ಟ್ಯಾಂಕಿನ ಪಿಲ್ಲರ್ನ ಗಾರೆಯೂ ಕೂಡ ಬೀಳತೊಡಗಿದ್ದು, ಟ್ಯಾಂಕ್ ಹಳೆಯದಾಗಿ ಶಿಥಿಲವಾಗುತ್ತಿರುವ ಮುನ್ಸೂಚನೆಯನ್ನು ನೀಡುತ್ತಿದ್ದರೂ ಪುರಸಭೆಯ ಈ ಬಗ್ಗೆ ಕೊಂಚವೂ ಗಮನ ಹರಿಸಿಲ್ಲ ಎಂಬುದು ನಾಗರಿಕರ ದೂರು.
ಇದ್ದ ರಸ್ತೆಗೇ ಡಾಂಬರು ಹಾಕುವುದು, ಚೆನ್ನಾಗಿದ್ದ ರಸ್ತೆಯನ್ನು ಬಗೆದು ಮೂರು ತಿಂಗಳೂ ಬಾಳಿಕೆ ಬಾರದಂಥ ಕಾಂಕ್ರೀಟ್ ರಸ್ತೆ ಮಾಡುವುದು, ಸರಿಯಾಗಿರುವ ಚರಂಡಿಯನ್ನು ಕಿತ್ತು ಪುನಃ ಚರಂಡಿ ನಿರ್ಮಿಸುವುದು- ಇಂಥ ಕಾಮಗಾರಿಗಳು ಇಲ್ಲಿನ ಪುರಸಭೆಗೆ ಸಾಮಾನ್ಯದ ಸಂಗತಿ. ಆದರೆ, ಅತಿ ಅವಶ್ಯಕವಾದ ಹಾಗೂ ನಿರ್ಲಕ್ಷಿಸಲಾಗದ ವಿಚಾರದವಾದ ನೀರಿನ ಸೌಲಭ್ಯಕ್ಕೆ ಅತ್ಯಗತ್ಯವಾದ ಟ್ಯಾಂಕ್ನ ದುಸ್ಥಿತಿ ಕುರಿತಂತೆ ಕೂಡಲೇ ಪುರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಸಾರ್ವಜನಿಕರ ಅಳಲು...
ಈ ಟ್ಯಾಂಕಿನ ದುಸ್ಥಿತಿಯ ಕುರಿತಂತೆ ಪುರಸಭೆಯ ನೀರು ಸರಬರಾಜು ವಿಭಾಗದ ಉಸ್ತುವಾರಿ ಹೊತ್ತಿರುವ ಸಿಬ್ಬಂದಿಗಳು, ಈಗಾಗಲೇ ಪುರಸಭೆಯ ಮುಖ್ಯಾಧಿಕಾರಿ ಹಾಗು ಸಂಬಂಧಿಸಿದ ಇಂಜಿನೀಯರ್ ಗಮನಕ್ಕೆ ತರಲಾಗಿದೆ ಎನ್ನುತ್ತಿದ್ದಾರೆ. ಆದರೆ ಅತ್ಯಂತ ಶಿಥಿಲವಾಗಿರುವ ಈ ಟ್ಯಾಂಕನ್ನು ದುರಸ್ಥಿಗೊಳಿಸುವುದು ಇಲ್ಲವೇ ಬದಲಿಯಾಗಿ ನೂತನ ಟ್ಯಾಂಕಿನ ನಿರ್ಮಾಣಕ್ಕಾದರೂ ಪುರಸಭೆ ಮುಂದಾಗದೇ ಮೀನ ಮೇಷ ಎಣಿಸುತ್ತಿರುವ ಕಾರಣ ಯಾಕೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏನಾದರೂ, ಅಪಾಯ ಸಂಭವಿಸಿದಲ್ಲಿ ಹೊಣೆ ಯಾರು ಎಂಬುದು ಸಾರ್ವಜನಿಕರ ಪ್ರಶ್ನೆ.