ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮರುಚುನಾವಣೆಗೆ ಬಿಎಸ್ಪಿ ಆಗ್ರಹ

Srinivasa Murthy VN
Updated On : 19 Apr 2014, 9:43 am

ಹಾಸನ: ಮತದಾರರಿಗೆ ಮದ್ಯ ಹಾಗೂ ಹಣವನ್ನು ಹಂಚುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಅಕ್ರಮ ಎಸಗಿರುವುದರಿಂದ ಚುನಾವಣಾ ಆಯೋಗವು  ಮರು ಚುನಾವಣೆ ನಡೆಸಬೇಕು ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಜಿಲ್ಲಾಧ್ಯಕ್ಷ ಬಿ.ಸಿ. ರಾಜೇಶ್ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 17ರಂದು ನಡೆದ ಲೋಕಸಭಾ ಚುನಾವಣೆಯು ನ್ಯಾಯಯುತವಾಗಿ ಮತ್ತು ಸಂವಿಧಾನ ಬದ್ಧವಾಗಿ ನಡೆದಿಲ್ಲ. ಚುನಾವಣೆಯ ಹಿಂದಿನ ದಿನಗಳಾದ ಏ. 15 ಮತ್ತು 16ರಂದು ರಾತ್ರಿ ಎರಡು ದಿವಸ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಮದ್ಯ ಮತ್ತು ಹಣವನ್ನು ಎರಡೂ ಪಕ್ಷದವರು ಹಂಚಿ ಅಕ್ರಮ ಎಸಗಿದ್ದಾರೆ. ಈ ರೀತಿ ಅಕ್ರಮ ನಡೆಯುತ್ತಿರುವುದು ಚುನಾವಣಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಇದು ಗೊತ್ತಿದ್ದರೂ ಜಾಣ ಕುರುಡರಂತೆ ನಡೆದುಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.
ದೂರು ನೀಡಲು ನಿರ್ಧಾರ: ಚುನಾವಣಾ ಕ್ಷೇತ್ರದಲ್ಲಿ ಚುನಾವಣೆ ಆಯೋಗಕ್ಕೆ ಸಂವಿಧಾನದಲ್ಲಿ ನಂಬಿಕೆ ಇದ್ದರೇ ಸಂವಿಧಾನ ಬದ್ಧವಾಗಿ ನಡೆಯಬೇಕೆಂಬ ಇಚ್ಛೆ ಹೊಂದಿದ್ದರೆ ತಕ್ಷಣವೇ ನಡೆದಿರುವ ಚುನಾವಣೆಯನ್ನು ರದ್ದುಪಡಿಸಿ, ನ್ಯಾಯಯುತವಾದ ಮರು ಮತದಾನ ನಡೆಸಲು ಮುಂದಾಗಬೇಕೆಂದು ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡಿದ ಅವರು, ಚುನಾವಣಾ ಅಕ್ರಮದ ಬಗ್ಗೆ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದರು.
ದೂರು: ರಾಜ್ಯದಲ್ಲಿ ಚುನಾವಣಾ ಆಯೋಗದವರು ಒಂದೇ ಹಂತದಲ್ಲಿ 28 ಕ್ಷೇತ್ರಗಳಲ್ಲಿ ಯಾವ ಪುರುಷಾರ್ಥಕ್ಕೆ ಚುನಾವಣೆ ನಡೆಸಿದರು ಅಂತ ಗೊತ್ತಿಲ್ಲ ಎಂದ ಅವರು, ಈ ಕ್ಷೇತ್ರದಲ್ಲಿ ಸುಮಾರು 19 ದಿನ ಚುನಾವಣಾ ಪ್ರಚಾರಕ್ಕಾಗಿ ಸಮಯ ನಿಗದಿಪಡಿಸಿದ್ದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ನವರು ಕಡೆಯ ಎರಡು ದಿನ ಹಳ್ಳಿಗಳಿಗೆ ಭೇಟಿ ನೀಡಿ ಮನೆ- ಮನೆಗೆ ತೆರಳಿ ಹಣ ಮತ್ತು ಮದ್ಯವನ್ನು ಹಂಚುವ ಮೂಲಕ ಮುಗ್ಧ ಜನರನ್ನು ಭ್ರಷ್ಟರನ್ನಾಗಿಸಿದ್ದಾರೆ ಎಂದು ದೂರಿದರು.
ರಾತ್ರಿ ಪಾಳಿಗೆ ಆಗ್ರಹ: ಮರು ಮತದಾನದ ಸಂದರ್ಭದಲ್ಲಿ ಚುನಾವಣಾ ಸಿಬ್ಬಂದಿಯನ್ನು ಕಟ್ಟುನಿಟ್ಟಾಗಿ ಪಾಳಿಗಳ ರೀತಿ ನಿಯೋಜನೆ ಮಾಡಬೇಕು ಮತ್ತು ರಾತ್ರಿ ವೇಳೆಯಲ್ಲೂ ಸಿಬ್ಬಂದಿಯನ್ನು ನಿಯೋಜಿಸಬೇಕು. ರಾತ್ರಿ ವೇಳೆಯಲ್ಲಿಯೇ ಚುನಾವಣಾ ಅಕ್ರಮಗಳು ನಡೆಯುತ್ತವೆ. ಕೇವಲ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ನಿಂತರೆ ಸಾಲದು ಎಂದರು.
ಈ ರೀತಿ ಅಕ್ರಮದಿಂದ ಮುಗ್ಧ ದಲಿತರು ನ್ಯಾಯಯುತವಾಗಿ ಮತದಾನ ಮಾಡಲು ಸಾಧ್ಯವಾಗಿರುವುದಿಲ್ಲ. ಆದ ಕಾರಣ ಚುನಾವಣೆ ರದ್ದುಪಡಿಸಿ ಮರು ಮತದಾನ ಮಾಡಬೇಕು ಎಂದು ಚುನಾವಣ ಆಯೋಗಕ್ಕೆ ಒತ್ತಾಯಿಸಲಾಗುತ್ತದೆ ಹಾಗೂ ದೂರು ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಅತ್ನಿ ಹರೀಶ್, ಕುಮಾರ್ ಗೌರವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement