ರೇವಣ್ಣ ವಿರುದ್ಧ ದೂರು
ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತದಾನ ಮಾಡುವಾಗ ಶಾಸಕ ಎಚ್.ಡಿ. ರೇವಣ್ಣ ಮಾದ್ಯಮದವರನ್ನು ಹೊರದಬ್ಬಿ, ಕಿಟಕಿ ಬಾಗಿಲು ಹಾಕಿದ್ದರ ವಿರುದ್ಧ ಚುನಾವಣಾಧಿಕಾರಿಗೆ ದೂರು ನೀಡುವುದಾಗಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆಯಲ್ಲಿ ದೇವೇಗೌಡರು ಮತದಾನ ಮಾಡುವಾಗ ರೇವಣ್ಣ ಮಾಧ್ಯಮದವರನ್ನು ಹೊರಹಾಕಿ, ಕಿಟಕಿ ಬಾಗಿಲು ಹಾಕಿ ಮಾಧ್ಯಮದವರು ಚಿತ್ರೀಕರಿಸದಂತೆ ಅಡ್ಡಿಪಡಿಸಿದ್ದಾರೆ. ಮತಗಟ್ಟೆಗೆ ಯಾರು ಬರಬೇಕು, ಯಾರು ಬರಬಾರದು ಎಂದು ಹೇಳಲು ಮತಗಟ್ಟೆ ಅಧಿಕಾರಿಗಳಿದ್ದಾರೆ. ರೇವಣ್ಣನೇ ಮತಗಟ್ಟೆ ಅಧಿಕಾರಿಯಂತೆ ನಡೆದುಕೊಂಡು ಮಾಧ್ಯಮದವರಿಗೆ ಅವಮಾನ ಮಾಡಿದ್ದಾರೆ ಎಂದರು.
ರೇವಣ್ಣನಿಗೆ ಕಿಟಕಿ ಮತ್ತು ಬಾಗಿಲು ಮುಚ್ಚಲು ಅವಕಾಶ ಮಾಡಿಕೊಡುವ ಮೂಲಕ ಮತಗಟ್ಟೆ ಅಧಿಕಾರಿಗಳೂ ಕರ್ತವ್ಯ ಲೋಪ ಎಸಗಿದ್ದಾರೆ. ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದರು.
ಗೆಲುವು ನಿಶ್ಚಿತ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿವೆ. ಆದರೆ ಮತದಾರರು ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಹಾಗಾಗಿ ಕನಿಷ್ಟ 75 ಸಾವಿರ ಮತಗಳ ಅಂತರದಿಂದ ನನ್ನ ಗೆಲುವು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಹಿರಂಗ ಒಪ್ಪಂದ: ನನಗೆ ಟಿಕೆಟ್ ಸಿಕ್ಕ ಕೂಡಲೇ ಬಿ.ಬಿ. ಶಿವಪ್ಪನವರ ಮನೆಗೆ ಹೋಗಿ ಭೇಟಿ ಮಾಡಿದ ಬಗ್ಗೆ ತಪ್ಪು ಅಭಿಪ್ರಾಯ ಕಲ್ಪಿಸಿದ್ದರು. ಅವರು ನನಗೆ ತಂದೆ ಸಮಾನ. ಅವರ ಮನೆಯ ನಾಮಕರಣ ಸಮಾರಂಭಕ್ಕೆ ನನ್ನನ್ನು ಕರೆದಿದ್ದರು. ಹಾಗಾಗಿ ಅಲ್ಲಿಗೆ ಹೋಗಿದ್ದೆ ಅಷ್ಟೇ. ಇದರಲ್ಲಿ ಯಾವುದೇ ರಾಜಕಾರಣವಿಲ್ಲ. ಈ ಬಗ್ಗೆ ತಪ್ಪು ಕಲ್ಪಿಸಬಾರದು. ಆದರೆ, ಬಿಜೆಪಿ ಮತ್ತು ಜೆಡಿಎಸ್ ಬಹಿರಂಗವಾಗಿಯೇ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಮತದಾರರು ಒಪ್ಪಂದ ಮಾಡಿಕೊಂಡಿಲ್ಲ ಎಂದರು.
ಪಕ್ಷದ ಪರವಾಗಿ ಜಿಲ್ಲಾಧ್ಯಕ್ಷ ಬಿ. ಶಿವರಾಂ ಶ್ರಮವಹಿಸಿ ಸಾಕಷ್ಟು ಚುನಾವಣಾ ಕೆಲಸ ಮಾಡಿದ್ದಾರೆ ಎಂದ ಅವರು, ಅವರು ಕೆಲಸ ಮಾಡಿಲ್ಲ ಎಂಬುದು ಸುಳ್ಳು ವದಂತಿ ಎಂದರು.
ರೇವಣ್ಣಗೆ ಕಾಳಜಿಯಿಲ್ಲ: ಶಾಸಕ ಎಚ್.ಡಿ. ರೇವಣ್ಣ ತಮ್ಮ ಅಧಿಕಾರವಧಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಿರುವುದೇ ದೊಡ್ಡ ಅಭಿವೃದ್ಧಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಚನ್ನಪಟ್ಟಣದ ಕೆರೆ ಒಡೆದು ನಗರದ ಅಂತರ್ಜಲ ಬತ್ತಿ ಹೋಗುವಂತೆ ಮಾಡಿದ್ದಾರೆ. ಅವರಿಗೆ ಸ್ವಲ್ಪವೂ ಜನರ ಬಗ್ಗೆ ಕಾಳಜಿ ಹಾಗೂ ಅರಿವಿಲ್ಲವೇ ಎಂದು ಪ್ರಶ್ನಿಸಿದರು.
ಕೆಲಸ ಮಾಡುತ್ತೇನೆ: ಚುನಾವಣೆಗೆ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಇಷ್ಟು ದಿನ ನನ್ನ ಕ್ಷೇತ್ರದಲ್ಲಿ ಇದ್ದ ನಾನು ಜಿಲ್ಲೆಯಾದ್ಯಂತ ಸುತ್ತಾಡಿ ಜನರ ಸಮಸ್ಯೆ ಏನು ಎಂಬುದು ಅರಿವಾಗಿದೆ. ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಚುನಾವಣೆಯಲ್ಲಿ ಗೆದ್ದರೂ, ಸೋತರು ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದರು.
ಈಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆನಂದ್, ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಇತರರು ಇದ್ದರು.
ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆಯಲ್ಲಿ ದೇವೇಗೌಡರು ಮತದಾನ ಮಾಡುವಾಗ ರೇವಣ್ಣ ಮಾಧ್ಯಮದವರನ್ನು ಹೊರಹಾಕಿ, ಕಿಟಕಿ ಬಾಗಿಲು ಹಾಕಿ ಮಾಧ್ಯಮದವರು ಚಿತ್ರೀಕರಿಸದಂತೆ ಅಡ್ಡಿಪಡಿಸಿದ್ದಾರೆ. ಮತಗಟ್ಟೆಗೆ ಯಾರು ಬರಬೇಕು, ಯಾರು ಬರಬಾರದು ಎಂದು ಹೇಳಲು ಮತಗಟ್ಟೆ ಅಧಿಕಾರಿಗಳಿದ್ದಾರೆ. ರೇವಣ್ಣನೇ ಮತಗಟ್ಟೆ ಅಧಿಕಾರಿಯಂತೆ ನಡೆದುಕೊಂಡು ಮಾಧ್ಯಮದವರಿಗೆ ಅವಮಾನ ಮಾಡಿದ್ದಾರೆ
-ಎ. ಮಂಜು, ಕಾಂಗ್ರೆಸ್ ಅಭ್ಯರ್ಥಿ