ವಿದ್ಯುತ್ ವ್ಯತ್ಯಯ: ನೀರಿಗೆ ಹಾಹಾಕಾರ
ಹೊಳೆನರಸೀಪುರ: ಪಟ್ಟಣದಲ್ಲಿನ ನಾನಾ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದರೂ, ನಿಯಮಿತವಾಗಿ ವಿದ್ಯುತ್ ಸರಬರಾಜಿಗೆ ಗಮನ ಹರಿಸದ ವಿದ್ಯುತ್ ಇಲಾಖೆ ಹಾಗೂ ಜನರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸದ ಪುರಸಭೆಯ ಕಾರ್ಯವೈಖರಿಯಿಂದ ಪರಿತಪಿಸುವಂತಾಗಿದೆ ಎಂದು ಪಟ್ಟಣದ ನಾಗರೀಕರು ದೂರುತ್ತಿದ್ದಾರೆ.
ಕಳೆದ ಕೆಲವು ತಿಂಗಳಿನಿಂದಲೂ ಪಟ್ಟಣದ ಒಂದಿಲ್ಲೊಂದು ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ಪದೇ ಪದೇ ತೊಂದರೆಯಾಗುತ್ತಿದ್ದರೂ, ಸಕಲ ಸವಲತ್ತುಗಳನ್ನೂ ಹೊದ್ದು ಮಲಗಿರುವ ಪುರಸಭೆಗೆ ನಾಗರಿಕರ ಗೋಳು ಕಾಣುತ್ತಿಲ್ಲ. ಕುಡಿಯುವ ನೀರಿನ ಸರಬರಾಜಿಗೆ ಸಾಕಷ್ಟು ಅನುದಾನ ಬರುತ್ತಿದ್ದು, ಕಾಲ ಕಾಲಕ್ಕೆ ಬರುವ ಎಲ್ಲಾ ಅನುದಾನಗಳನ್ನು ಬಳಸಿಕೊಳ್ಳುತ್ತಲೇ ಲೆಕ್ಕ ತೋರುವ ಪುರಸಭೆಗೆ ಅಷ್ಟೇ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿಲ್ಲ.
ಸಂವಹನ ಕೊರತೆ: ಕುಡಿಯುವ ನೀರಿನ ಅಸಮರ್ಪಕ ವಿತರಣೆಯ ಕುರಿತಂತೆ ಪುರಸಭೆಯಲ್ಲಿ ನಾಗರಿಕರು ವಿಚಾರಿಸಿದರೆ, ಅನಿಯಮಿತ ವಿದ್ಯುತ್ ಕಡಿತದಿಂದ ಪಂಪ್ ಹೌಸ್ನಲ್ಲಿ ನೀರನ್ನು ಪಂಪ್ ಮಾಡಿ ಸರಬರಾಜು ಮಾಡಲು ಆಗುತ್ತಿಲ್ಲ ಎಂಬ ಉತ್ತರ ಬರುತ್ತದೆ. ಆದರೆ ಇದೇ ಸಮಸ್ಯೆಯನ್ನು ವಿದ್ಯುತ್ ಇಲಾಖೆಯವರ ಬಳಿ ಯಾರೂ ಹೇಳಿಲ್ಲವಾದ್ದರಿಂದ ನೀರಿನ ವ್ಯತ್ಯಯ ಪರಿಸ್ಥಿತಿ ಮುಂದುವರಿದಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ವಿದ್ಯುತ್ ವ್ಯತ್ಯಯ ಕುರಿತ ಯಾವುದೇ ಸಮಸ್ಯೆಗಳಿಗೂ ಸಂಬಂಧಿಸಿದ ಅಧಿಕಾರಿಗಳು ಯಾರಿಗೂ ಲಭ್ಯವಾಗುವುದಿಲ್ಲ ಎಂಬ ದೂರು ಸಾಮಾನ್ಯವಾಗಿದೆ.
ಹೊಣೆಗೇಡಿತನ: ಸಮುದ್ರದ ದಡದಲ್ಲಿದ್ದರೂ ಉಪ್ಪಿಗೆ ಬಡತನ ಎಂಬಂತಾಗಿದೆ ಇಲ್ಲಿನ ನಿವಾಸಿಗಳ ಪರಿಸ್ಥಿತಿ. ಪಟ್ಟಣದ ಪಕ್ಕದಲ್ಲೇ ಹೇಮಾವತಿ ನದಿಯು ಹರಿಯುತ್ತಿದ್ದರೂ, ನಾನಾ ಸಮಸ್ಯೆಗಳನ್ನು ಮುಂದಿಡುವ ಪುರಸಭೆ ಹಾಗೂ ವಿದ್ಯುತ್ ಇಲಾಖೆಗಳ ಹೊಣೆಗೇಡಿತನದಿಂದಾಗಿ ಹಿಂದಿನ ದಿನಗಳಲ್ಲಿ ಎಂದೂ ಕಂಡುಬರದಷ್ಟು ಸಮಸ್ಯೆ ಕುಡಿಯುವ ನೀರಿಗೆ ಈಗ ಎದುರಾಗಿದೆ. ಆದರೂ ಪುರಸಭೆಯ ಸದಸ್ಯರು ತಮ್ಮ ವಾರ್ಡ್ಗಳಲ್ಲಿನ ಸಮಸ್ಯೆಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲವಾದ ಕಾರಣದಿಂದಾಗಿ ಪಟ್ಟಣದಲ್ಲಿ ದಿನೇ ದಿನೇ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಲೇ ಇದೆ.
ದಸರಾ ಆನೆಗಳ ಆಭರಣ ಪ್ರದರ್ಶನ
ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ದಸರಾ ಆನೆಗಳ ಆಭರಣ ಪ್ರದರ್ಶಿಸಲಾಗಿದೆ. ಗಜಪಯಣ, ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕ ಸ್ವಾಗ, ಜಂಬೂಸವಾರಿಯಲ್ಲಿ ಆನೆಗಳಿಗೆ ಈ ಆಭರಣ ಹಾಕಲಾಗಿದೆ. ಅರಮನೆಯ ಸೊಬಗು ಸವಿಯಲು ದೇಶ, ವಿದೇಶಗಳಿಂದ ಬರುತ್ತಿರುವ ಹೆಚ್ಚಿನ ಪ್ರವಾಸಿಗರು ದಸರಾ ಆನೆಗಳ ಆಭರಣಗಳ ಪ್ರದರ್ಶನವನ್ನು ವೀಕ್ಷಿಸುತ್ತಿದ್ದಾರೆ. ಜತೆಗೆ ಸಮೀಪ ಇರುವ ಜಗನ್ಮೋಹನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟಕ್ಕೂ ತೆರಳುತ್ತಿದ್ದಾರೆ.