ಸಿಡಿಲು ಸಹಿತ ಮಳೆಗೆ ಅಪಾರ ನಷ್ಟ
ಅರಸೀಕೆರೆ: ತಾಲ್ಲೂಕಿನ ಹಾರನಹಳ್ಳಿ ಸಮೀಪ ಬೋರನಕೊಪ್ಪಲು ಗ್ರಾಮದಲ್ಲಿ ಸಿಡಿಲು ಬಡಿದು ಎತ್ತಿನಗಾಡಿ, ಹತ್ತಾರು ತೆಂಗಿನ ಮರಗಳು ಹಾಗೂ ಅಪಾರ ಪ್ರಮಾಣದ ಜಾನುವಾರು ಮೇವು ಸುಟ್ಟು ಕರಕಲಾದ ಘಟನೆ ತೋಟದ ಮನೆಯ ಸಮೀಪ ನಡೆದಿದ್ದು ಲಕ್ಷಾಂತರ ರು. ನಷ್ಟ ಸಂಭವಿಸಿದ್ದರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಸುತ್ತಮುತ್ತ ಮಿಂಚು, ಗುಡುಗು, ಆಲಿಕಲ್ಲು ಮಳೆಗೆ ಲಕ್ಷಾಂತರ ರು. ಮೌಲ್ಯದ ತೋಟಗಾರಿಕಾ ಬೆಳೆಗಳು ಸಂಪೂರ್ಣ ನಾಶಗೊಂಡಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಬೋರನಕೊಪ್ಪಲು ಗ್ರಾಮದ ನಿವಾಸಿ ನಂಜುಂಡೇಗೌಡ ಎಂಬುವವರ ತೋಟದಲ್ಲಿ ಸಂಜೆ ಆರಂಭವಾದ ಮಿಂಚು ಗುಡುಗಿನ ಆರ್ಭಟ ಜೋರಾದ ವೇಳೆ ಸಿಡಿಲು ಶೆಡ್ ಸಮೀಪದ ತೆಂಗಿನ ಮರಕ್ಕೆ ಬಡಿದಿದೆ. ಬೆಂಕಿಯ ಕೆನ್ನಾಲಗೆ ಮನೆಗೆ ತಗುಲಿದ ಪರಿಣಾಮ ಬೆಂಕಿ ಹತ್ತಿಕೊಂಡಿದೆ. ಶೆಡ್ ಕೆಳಭಾಗದಲ್ಲಿ ನಿಲ್ಲಿಸಿದ್ದ ಗಾಡಿ ಕೂಡ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದೆ. ಸಮೀಪದಲ್ಲಿಯೇ ಸಂಗ್ರಹಿಸಲಾಗಿದ್ದ ಜಾನುವಾರು ಮೇವಿಗೂ ಕೂಡ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿದೆ.
ಕಾರ್ಯಾಚರಣೆ: ಊರ ಹೊರಗಿನ ತೋಟದ ಮನೆಯಾಗಿದ್ದರಿಂದ ಸುದ್ದಿ ತಿಳಿಯುವುದು ವಿಳಂಭವಾದ್ದರಿಂದ ತೋಟದ ಮಾಲೀಕರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರಾದರೂ ಆ ವೇಳೆಗಾಗಲೇ ಬೆಂಕಿ ಸಂಪೂರ್ಣವಾಗಿ ಆವರಿಸಿದ್ದರಿಂದ ಯಾವುದೇ ಪ್ರಯೋಜನವಾಗಿಲ್ಲ. ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಒತ್ತಾಯ: ಸತತ ಬರಗಾಲದಿಂದ ತತ್ತರಿಸಿರುವ ಈ ರೈತ ಸಾಲ- ಸೋಲ ಮಾಡಿ ಎತ್ತಿನಗಾಡಿ ಮಾಡಿಸಿಕೊಂಡಿದ್ದು. ಆದರೆ ಈಗ ಆಗಿರುವ ಆಕಸ್ಮಿಕ ಘಟನೆಯಿಂದ ದಿಕ್ಕು ತೋರದಂತಾಗಿದ್ದು, ತಾಲ್ಲೂಕು ಆಡಳಿತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಹಾಗೂ ರೈತ ಮುಖಂಡ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ಒತ್ತಾಯ
ಹಾನಿಗೊಳಗಾಗಿರುವ ಗ್ರಾಮಗಳ ಪರಿಶೀಲನೆಗೆ ತಾಲ್ಲೂಕು ಆಡಳಿತ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಹಾನಿ ಪ್ರಮಾಣವನ್ನು ಪರಿಶೀಲಿಸಿ ನಷ್ಟ ಹೊಂದಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ಕೂಡಲೇ ವಿದ್ಯುತ್ ಸೌಲಭ್ಯ ಪುನರ್ ಕಲ್ಪಿಸಲು ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆಲಿಕಲ್ಲು ಮಳೆಗೆ ದಾಳಿಂಬೆ, ತೋಟಗಾರಿಕೆ ಬೆಳೆ ನಾಶ
ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಕೆ.ಶಂಕರನಹಳ್ಳಿ, ಹಿರೆಸಾದರಹಳ್ಳಿ, ಮದ್ದರಹಳ್ಳಿ, ಚಿಕ್ಕಹಲ್ಕೂರು, ಜೆ.ಸಿ.ಪುರ ಸೇರಿದಂತೆ ಇತರೆ ಕೆಲ ಹಳ್ಳಿಗಳ ಸುತ್ತಮುತ್ತ ಹತ್ತಾರು ಹೆಕ್ಟೇರ್ ದಾಳಿಂಬೆ ಬೆಳೆ ಮಿಂಚು, ಗುಡುಗು, ಆಲಿಕಲ್ಲು ಮಳೆಗೆ ತೋಟಗಾರಿಕೆ ಬೆಳೆ ನಾಶವಾಗಿ ಲಕ್ಷಾಂತರ ರು.ಗಳ ನಷ್ಟ ಸಂಭವಿಸಿದೆ.
ಕೆ. ಶಂಕರನಹಳ್ಳಿ ಗ್ರಾಮದ ಹಾಲಪ್ಪ ಎಂಬುವವರ ಜಮೀನಿನಲ್ಲಿ ಬೆಳೆಯಲಾಗಿದ್ದ 500 ದಾಳಿಂಬೆ ಗಿಡ ಹಾಗೂ ಕುಮಾರಣ್ಣ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ 400 ದಾಳಿಂಬೆ ಗಿಡ ಹಾಗೂ ರಾಮಪ್ಪ ಎಂಬ ರೈತನಿಗೆ ಸೇರಿದ ಜಮೀನಿನಲ್ಲಿ ಬೆಳೆಯಲಾಗಿದ್ದ 800ಕ್ಕೂ ಹೆಚ್ಚು ಫಲಭರಿತ ಬಾಳೆಗಿಡಗಳು ಗಾಳಿಯ ರಭಸಕ್ಕೆ ಮುರಿದು ಬಿದ್ದಿವೆ.
ಅಲ್ಲದೇ ಜಮೀನಿನಲ್ಲಿ ಹೊಸದಾಗಿ ನಿರ್ಮಿಸುತ್ತಿದ್ದ ಜಾನುವಾರು ಕೊಟ್ಟಿಗೆ ಕಟ್ಟಡ ಕೂಡಾ ಕುಸಿದು ಬಿದ್ದಿದೆ. ಇದು ಸಾಲದು ಎಂಬಂತೆ ಬಿರುಗಾಳಿ ರಭಸಕ್ಕೆ ನೂರಾರು ತೆಂಗಿನಮರಗಳು ವಿವಿಧ ಗ್ರಾಮಗಳಲ್ಲಿ ಧರೆಗುರುಳಿವೆ. ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ಶುಕ್ರವಾರ ರಾತ್ರಿ ಅನೇಕ ಗ್ರಾಮಗಳು ಕಗ್ಗತ್ತಲಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಿಳೆಗೆ ಗಾಯ
ಸಕಲೇಶಪುರ: ಕಳೆದೊಂದು ವಾರದಿಂದ ಬಿರುಗಾಳಿ ಸಹಿತ ಸಿಡಿಲು ಗುಡುಗಿನ ಮಳೆಗೆ ತಾಲೂಕಿನಾದ್ಯಂತ ಭಾರಿ ಪ್ರಮಾಣದಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರೆ, ಇಬ್ಬರು ಚುನಾವಣಾಧಿಕಾರಿಗಳು ಮಳೆಯಿಂದಾಗಿ ಗಾಯಗೊಂಡು, ಮಹಿಳೆಯೊಬ್ಬರಿಗೆ ಸಿಡಿಲು ಬಡಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.
ಮತದಾನ ಮುನ್ನದಿನ ಪಟ್ಟಣದ ಸಂತ ಜೋಸೆಫ್ರ ಶಾಲೆ ಅವರಣದಲ್ಲಿ ಚುನಾವಣಾ ಸಿದ್ದತೆಯಲ್ಲಿದ್ದ ಸಂದರ್ಭದಲ್ಲಿ ಸುರಿದ ಮಳೆಯಿಂದಾಗಿ ಶಾಮಿಯಾನ ಅಧಿಕಾರಿಯ ತಲೆಯ ಮೇಲೆ ಬಿದ್ದು ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯರಾಂ ಗಾಯಗೊಂಡಿದ್ದು, ಇವರಿಗೆ ಪಟ್ಟಣದ ಕ್ರಾಪರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲಾಗಿದ್ದು, ಒಟ್ಟು ಈ ಅಧಿಕಾರಿಯ ತಲೆಗೆ 6 ಹೊಲಿಗೆ ಹಾಕಲಾಗಿದೆ.
ಅದೇ ದಿನ ಮತಗಟ್ಟೆಗೆ ತೆರಳಲು ಬಸ್ಸಿನಲ್ಲಿ ಕುಳಿತಿದ್ದ ಹಾಸನ ಸರ್ಕಾರಿ ಎಂನೀಯರಿಂಗ್ ಕಾಲೇಜಿನ ಉಪನ್ಯಾಸಕ ಮಂಜುನಾಥ್ ತಲೆ ಹಾಗೂ ಕಾಲಿನ ಮೇಲೆ ಬಸ್ಸಿನ ಗಾಜು ಬಿದ್ದ ಪರಿಣಾಮ ಇವರ ತಲೆಗೆ 11 ಹೊಲಿಗೆ ಹಾಕಲಾಗಿದೆ.
ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ: ಶುಕ್ರವಾರ ಮಧ್ಯರಾತ್ರಿ ಸುರಿದ ಗುಡುಗು ಸಿಡಿಲಿನ ಮಳೆಗೆ ಹೊಂಗಡಹಳ್ಳ ಗ್ರಾಮ ಸಮೀಪದ ಹಳೆಕೆರೆಯ ಮಹಿಳೆಗೆ ಸಿಡಿಲು ಬಡಿದಿದ್ದು, ಸಿಡಿಲಿನ ರಭಸಕ್ಕೆ ಮನೆಯ ಹೆಂಚುಗಳು ಚಲ್ಲಾಪಿಲ್ಲಿಯಾಗಿದ್ದರೆ ಮನೆಯ ಗೋಡೆಗಳು ಬಿರುಕು ಬಿಟ್ಟಿದೆ.
ಮನೆಯ ಮಾಡು ಸೂರುತ್ತಿದ್ದನ್ನು ಗಮನಿಸಿದ ಈ ಮಹಿಳೆ ಮಳೆಯ ನೀರಿಗೆ ಪಾತ್ರೆ ಇಡಲು ಹಾಸಿಗೆ ಇಂದ ಎದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಪ್ಪಿದ ಅಪಾಯ: ಈ ವೇಳೆ ಮರ ಬೀಳುತ್ತಿರುವುದನ್ನು ಗಮನಿಸಿದ ಖಾಸಗಿ ಬಸ್ ಚಾಲಕ ಮರ ಬಸ್ ಮೇಲೆ ಬೀಳುವುದನ್ನು ತಪ್ಪಿಸಲು ಯತ್ನಸಿದ ಸಂದರ್ಭದಲ್ಲಿ ಬಸ್ ಕಾಫಿ ತೋಟಕ್ಕೆ ನುಗ್ಗಿದ್ದು ಕೊದಲೇಳೆಯ ಅಂತರದಲ್ಲಿ ಭಾರೀ ಅಪಾಯವೊಂದು ತಪ್ಪಿದಂತಾಗಿದೆ.
ಅದೇ ದಿನ ಆಚಂಗಿ ಸಮೀಪ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದು ವಿದ್ಯುತ್ ತಂತಿ ಬಸ್ ಮೇಲೆ ಬೀಳುವುದೂ ಸಹ ಕ್ಷಣಾರ್ಧದಲ್ಲಿ ತಪ್ಪಿದೆ. ಶನಿವಾರ ಸಹ ತಾಲೂಕಿನ ಹೆತ್ತೂರು ಹೋಬಳಿಯಲ್ಲಿ ಅಪಾರ ಪ್ರಮಾಣದ ಮಳೆ ಸುರಿದಿದ್ದು ಹಲವು ಮರಗಳು ದರೆಗುರುಳಿವೆ.
ರಸ್ತೆ ಸಂಚಾರ ಸ್ಥಗಿತ
ಇದಲ್ಲದೇ ಮಳಲಿ, ಹೆನ್ನಲಿ ಸೇರಿದಂತೆ ಹಲವೆಡೆ ಭಾರೀ ಗಾಳಿ ಮಳೆಗೆ ಮನೆಯ ಹೆಂಚು ಶೀಟುಗಳು ಹಾರಿಹೋಗಿವೆ. ಶುಕ್ರವಾರ ಸಂಜೆ ಸುರಿದ ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 48ರ ಈಶ್ವರಹಳ್ಳಿ ಕೊಡಿಗೆಯಿಂದ ಪಟ್ಟಣದವರೆಗಿನ ಸುಮಾರು 15 ಕಿಮೀ ಅಂತರದಲ್ಲಿ 12 ಕ್ಕೂ ಅಧಿಕ ಬಾರಿ ಮರಗಳು ರಸ್ತೆಗೆ ಉರುಳಿಬಿದ್ದವು. ಈ ಹಿನ್ನೆಲೆಯಲ್ಲಿ, ರಸ್ತೆ ಸಂಚಾರ ಸುಮಾರು ಎರಡು ಗಂಟೆಗೂ ಹೆಚ್ಚಿನ ಕಾಲ ಸ್ಥಗಿತಗೊಂಡಿತ್ತು.