ಅಧ್ಯಕ್ಷರ ಹೇಳಿಕೆ ಆತಂಕಕ್ಕೀಡು ಮಾಡಿದೆ
ಅರಸೀಕೆರೆ: ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಸಾಧಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ನೀಡಿರುವ ಹೇಳಿಕೆ ಕಾರ್ಯಕರ್ತರನ್ನು ಹಾಗೂ ಪಕ್ಷದ ಅಭಿಮಾನಿಗಳನ್ನು ಆತಂಕಕ್ಕೀಡುಮಾಡಿದೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜೆ.ಪಿ. ಜಯಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಹೊರವಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆಡೆಯಿಂದ ವಲಸೆ ಬಂದ ಶಿವರಾಂ ಕಾಂಗ್ರೆಸ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಜಾತಿ ಜನಾಂಗಗಳನ್ನು ಒಗ್ಗೂಡಿಸಿ ಪಕ್ಷ ಕಟ್ಟುವ ಕೆಲಸ ಮಾಡದೆ ಒಡೆದು ಆಳುವ ನೀತಿ ಅನುಸರಿಸಿದ್ದರಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ಈಗ ಇಂಥ ನಿರಾಧಾರ ಹೇಳಿಕೆಗಳನ್ನು ಯಾವ ಕಾರಣಕ್ಕೆ ನೀಡುತ್ತಿದ್ದಾರೆಂಬುದು ತಿಳಿಯದಾಗಿದೆ ಎಂದರು.
ಅಸಮಾಧಾನಗಳ ಮಾಲೆ: ಸರ್ವಾಧಿಕಾರಿ ಧೋರಣೆಗೆ ಬೇಸತ್ತು ಅನೇಕರು ಪಕ್ಷ ತ್ಯಜಿಸಿದ್ದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಯೋಜನೆಗಳು ಹಾಗೂ ಎ. ಮಂಜು ಅಂತಹ ಉತ್ತಮ ಅಭ್ಯರ್ಥಿಯ ಸ್ನೇಹಕ್ಕೆ ಮನಸೋತು ನಾನಾ ಪಕ್ಷದಲ್ಲಿ ಹಂಚಿ ಹೋಗಿದ್ದ ಅನೇಕ ಮುಖಂಡರು ಕಾಂಗ್ರೆಸ್ಗೆ ವಾಪಾಸಾದರೂ ಅವರ್ಯಾರನ್ನೂ ಗಣನೆಗೆ ತೆಗೆದುಕೊಳ್ಳದೇ ನಿರ್ಲಕ್ಷಿಸಿದರು.
ಪಕ್ಷದ ಹಿತಕ್ಕಾಗಿ ಒಗ್ಗಟ್ಟಿನಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟನಾತ್ಮಕವಾಗಿ ಹೋರಾಟ ನಡೆಸಿದ್ದರಿಂದ ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ 25 ಸಾವಿರಕ್ಕೂ ಹೆಚ್ಚಿನ ಲೀಡ್ ಬರಲಿದ್ದು ಹಾಸನ ಲೋಕಸಭಾ ಕ್ಷೇತ್ರದಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಆಯ್ಕೆಯಾಗಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಖಂಡನೆ: ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಅಹಿಂದಾ ಮತಗಳು ಒಗ್ಗೂಡಿ ಕಾಂಗ್ರೆಸ್ಗೆ ಮತ ನೀಡಿದ್ದು, ಕಳೆದ ಬಾರಿ ಜೆಡಿಎಸ್ನತ್ತ ಒಲವು ತೋರಿದ್ದ ಕುರುಬ ಜನಾಂಗ ಹಾಗೂ ಅಲ್ಪಸಂಖ್ಯಾತರು ಈ ಬಾರಿ ಕಾಂಗ್ರೆಸ್ಗೆ ಮತ ನೀಡಿದ್ದು, ವೀರಶೈವ ಜನಾಂಗದ 10-15 ಸಾವಿರಕ್ಕಿಂತಲೂ ಹೆಚ್ಚಿನ ಮತಗಳು ಕಾಂಗ್ರೆಸ್ ಬುಟ್ಟಿಗೆ ಬಿದ್ದಿದ್ದು ಕಾಂಗ್ರೆಸ್ ಕ್ಷೇತ್ರದಲ್ಲಿ ಮುನ್ನಡೆಗೆ ಪ್ರಮುಖ ಕಾರಣಗಳಾಗಿವೆ. ಬೇರೆ ಕ್ಷೇತ್ರದಿಂದ ಬಂದ ಬಿ. ಶಿವರಾಂ ಅರಸೀಕೆರೆ ಕ್ಷೇತ್ರದಲ್ಲಿ ಹಿನ್ನೆಡೆಯಾಗಿದೆ ಎಂದು ಹೇಳುವುದು ಸರಿಯಲ್ಲ ಎಂದು ಖಂಡಿಸಿದರು.
ಬೇರೆಡೆಯಿಂದ ವಲಸೆ ಬಂದ ಶಿವರಾಂ ಕಾಂಗ್ರೆಸ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಜಾತಿ ಜನಾಂಗಗಳನ್ನು ಒಗ್ಗೂಡಿಸಿ ಪಕ್ಷ ಕಟ್ಟುವ ಕೆಲಸ ಮಾಡದೆ ಒಡೆದು ಆಳುವ ನೀತಿ ಅನುಸರಿಸಿದ್ದರಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು.
-ಜೆ.ಪಿ. ಜಯಣ್ಣ